Monthly Archives: ಮಾರ್ಚ್ 2010

ಅನಲನ ಅಳಲು


ಕೆಣಕಿ ಕೆಣಕಿ ಎನ್ನ ಉರಿಸುತಿಹರಲ್ಲ
ಉರಿದು ಹೋದರು ನಾನು ಅದಾರು ಕೇಳುವರಿಲ್ಲ
ಸುತ್ತ ಜಗವ ಬೆಳಗ ಬೇಕೆಂಬುದೆನ್ನ ಬಯಕೆ
ಕೆಡಿಸುತಿಹರೆಲ್ಲ ನನ್ನ ಅರ್ಥವ ತಮ್ಮ ಸ್ವಾರ್ಥಕೆ !

ನನಗೂ ಹಣತೆಯಲ್ಲಿ ಕೂತು
ದೀಪವಾಗಿ ಉರಿಯುವಾಸೆ
ಬಂದ ಇರುಳ ಒಂದಿಷ್ಟುಹೊತ್ತು
ಶಾಂತ ಕಣ್ಣಲಿ ಎದುರಿಸುವಾಸೆ
ಆದರೆ ಯಾರಿಗೆ ಹೇಳಲಿ ನಾ ನನ್ನ ಅಳಲ
ಹೇಳುವಷ್ಟರಲ್ಲೇ ಹೊತ್ತಿ ಉರಿಯುತಿಹೆ,
ಘೋರ ಪಾತಕನಂತೆ ನಾ ಜಗದಗಲ !

ಸಾವರಿಸು ಗಾಳಿ, ಹೀಗೆ ಆವರಿಸುವ ಬದಲು
ನನ್ನ ಆರಿಸಿಬಿಡು….!
ಹನಿಸು ಮಳೆಯೇ , ಅದೆಲ್ಲೋ ಧರೆಯ ಕೊಚ್ಚಿ
ಹರಿವ ಬದಲು ನನ್ನ ಮೇಲೊಂದಿಷ್ಟು ಹನಿಯ
ಮುಸ್ಸಂಜೆಯಲಿ ಬಾಗಿಲ ಬಳಿ ದೀಪವಾಗಿ
ಹುಟ್ಟಿ ಬರಬೇಕೆಂಬುದೆನ್ನ ಪುಟ್ಟ ಬಯಕೆ
ಈಗ ಕೊಡಲಾಗದ ನಿರಾಳತೆ ಆಗಲಾದರೂ
ಸಿಗುವುದೋ ನನ್ನಿಂದ ಜನ(ಗ)ಕೆ …….!?

— ರಾಘವೇಂದ್ರ ಹೆಗಡೆ

(‘ಕೆಂಡಸಂಪಿಗೆ’ಯಲ್ಲಿ ಪ್ರಕಟಿತ)

Advertisements

ಉಸಿರ ಕವಿತೆ..?


ಭಾವ ಕುಸುಮದಿ ಅರಳಿ
ಉಸಿರಿನೆಸರ ಧೂಳಿನಂತೆ
ಮೂರಕ್ಷರ ರೂಪದಿ
ಬರುತಲಿದ್ದ ಕವಿತೆ
ನಾ ಕರೆದರೂ
ಇಂದೇಕೆ ಬಾರದೆ ನೀ ಅವಿತೆ….?

ನಸುನಗುತ್ತ ಹೊಮ್ಮುತಿದ್ದ
ನಿನ್ನ ಬೆಡಗು
ಬರೆಯ ಹೊರಟ ನಾನು ಸೋತೆ
ಅದೆಂತ ಬೆರಗು..!
ನಕ್ಕಂತೆ ಗೇಲಿಮಾಡಿ
ಸಾಗಿಬಿಡುವ ನೀನು
ಒಮ್ಮೆಯಾದರೂ ಪದದೊಡೆ
ಅವತರಿಸಿ ನನ್ನೆಡೆ ನೋಡಬಾರದೇಕೆ..?

ಅಂತೂ ಆದೆ ನೀನು
ಇಂದು ಜನ್ಮತಾಳಿ
ಉಸಿರ ನೀಡುವಂತೆ ಆಗು
ಇಲ್ಲಿ ಬಂದು ಬಾಳಿ
ಮತ್ತೆ ಮತ್ತೆ ಕರೆಯಲಾರೆ
ಮಾಡುತ ಹೀಗೆ ಒತ್ತಾಯವನ್ನ
ಮರೆತು ಹಾಕಿರೂ ನೀ
ಅಡಗಿಸಿಡುವೆ ನಿನ್ನ ಪದಗಳಲ್ಲಿ ನನ್ನ ಉಸಿರನ್ನ..

— ರಾಘವೇಂದ್ರ ಹೆಗಡೆ

ಹೆಸರು ಬೇಕಿಲ್ಲ ಈ ಕವಿತೆಗೆ


ಯಾವ ದನಿ ಕರೆಯಿತು
ನಿನ್ನ ಮೌನ ಆಸ್ಪಂದಕೆ.
ಎಲ್ಲಿ ನೆನೆಯಿತು ಜೀವ
ಹಾರಿ ಸುಡುವ ನೆಳಲಿನ ಹಾಸಿಗೆ..!

ಬಂದ ಬಿರುಗಾಳಿಗೆ ಅಂಜಿ
ಬಿರಿದು ಹೋದರೆ ಹೂವು
ಹೆಕ್ಕಿ ಕೊಡಲಿ ಅದರ ಹೇಗೆ ನಾನು ನಿನಗೆ..?
ಹತ್ತು ಕೂತಿಹ ಹನಿಯು
ಉದುರಿ ಬಿದ್ದರೆ ಕೆಳಗೆ
ಹೇಗೆ ಹುಡುಕಲಿ ಅದರ ನಾ ಮಣ್ಣಮೇಲೆ..

ನನ್ನ ನೋವಿನ ಹಂಗು
ನಿನಗೇಕೆ ಅದ ಹೇಳು
ಕಾಣದಂತೆ ಗರಿಬೀಸಿ ನೀ ಬಾನಾಡುವೆ.
ಒಂದು ಕವಿತೆಗೆಲ್ಲ
ಇಣುಕಿದಂತೆ ಅಣಕಮಾಡಿ
ಇನ್ನೆಲ್ಲೋ ದೂರದಲ್ಲಿ ನೀ ಸಂಭವಿಸುವೆ..!

ಯಾವ ಭಾವ ಬರೆಸಿತು ನನ್ನ
ನಿನ್ನ ನೆನಪಿನ ಗುಂಗಿಗೆ..
ಯಾವ ಭಾವ ನೆನೆಸಿತು ನನ್ನ
ನಿನ್ನ ಬಂಧದ ಹಂಗಿಗೆ…?
ಯಾವ ದನಿ ಕರೆಯಿತು ನಿನ್ನ
ಚಿರ ಮೌನದಾಸ್ಪಂದಕೆ….??

— ರಾಘವೇಂದ್ರ ಹೆಗಡೆ

ತಾವರೆಗೊಂದು ಪತ್ರ


Taavaregondu patra

ಅರಳು ಬಾ ತಾವರೆಯೆ

ಎದೆಯ ಭಾವ ಕೊಳದಲ್ಲಿ .

ಉಸುರು ನಗುವ ದಿನದಿನವೂ

ಹುಟ್ಟಿ ನನ್ನ ಸಾಲಿನಲ್ಲಿ ..

ಹೃದಯದಭಿದಮನಿಯಿಂದ

ಅಪಧಮನಿಯವರೆಗೂ

ಎಲ್ಲೆಡೆಗೂ ಸಾಗಿ ಪಸರು ಮೆರಗ

ನಿತ್ಯ ಕೂತು ನನ್ನ ಹಾಡಿನಲ್ಲಿ.

— ರಾಘವೇಂದ್ರ ಹೆಗಡೆ

ಒಂದು ಕರವೀರ


ರವಿಯುದಯದ ರಂಗ ಪಡೆದು

ಮನೆಯಂಗಳದಂಚಲರಳಿ

ದಿನದಿನದ ಪೂಜೆಗೈದು

ಮೌನವಾಗಿ ಮೆರಗ ಚೆಲ್ಲಿ

ಬಿಡಿಸುವುದು ರಂಗವಲ್ಲಿ

ಈ ಹೂವು ಮನದಂಗಳದಲ್ಲಿ

ತನ್ನ ಹೊನ್ನ ಬಣ್ಣದಲ್ಲಿ.

— ರಾಘವೇಂದ್ರ ಹೆಗಡೆ