ಮತ್ತೆ ಬರುವ ಹಂಬಲದಿ..


ನಿನ್ನ ಹರಿವ ರಭಸದ ಮುಂದೆ
ನಾನ್ಯಾರು ನೀ ಹೇಳು..
ಬದುಕ ಬವಣೆಯಲಿ ಬೆಂದ
ಒಂದು ಕೇವಲ ಕಾಳು!
ಬಿದ್ದಾಯಿತು ನಾ ಜಾರಿ
ನಿನ್ನ ಸೆಳೆತದ ಸುಳಿಗೆ..
ಸುಳಿಯುವುದು ಇನ್ನೆಂದು
ನನ್ನೆದೆಗೆ ಬದುಕಹಾಡು..?!

ಆವೇಶದಿ ಉದ್ವೇಗದಿ
ಓಡಿ ಸಾಗರವ ಸೇರುವ
ಆತುರದಿ ನೀನು..
ಇಲ್ಲೇ ತೊರೆಯ ನಡುವೆ
ಗಿಡ ಪೊದೆಗಂಟಿ ಸೆರೆಸಿಕ್ಕು
ಬದುಕುವ ಕಾತರದಿ ನಾನು.!

ನಿನ್ನ ವಿರುದ್ದ ಈಜಿ
ದಡ ಸೇರುವೆನೆಂಬ
ಹುಚ್ಚು ಆಲೋಚನೆಯೆಲ್ಲ ಇಲ್ಲ
ಆದರೆ ನಂದೊಂದು ಪುಟ್ಟ
ಕೋರಿಕೆ ನಿನಗೆ-
ನನ್ನ ಉಳಿಸಿ ನೀ ದಡ ಸೇರಿಸುವೆಯಲ್ಲ.?!

ಅಂದೊಂದು ಖಾಲಿ ಪುಟದಿ
ಬಿತ್ತು ನನ್ನಾಕೃತಿ
ನೀ ಮುನಿದರೆ ಈ ಕ್ಷಣದಿಂದ ಅಲ್ಲೆಲ್ಲ
ನಾ ಕೇವಲ ಒಂದು ಸ್ಮೃತಿ!
ಇರಬಾರದೇಕೆ ನಿನಗೆ
ಈ ಜೀವದಮೇಲೊಂಚೂರು ಪ್ರೀತಿ.!?

ಕೊಚ್ಚಿಕೊಂಡು ಹೋಗುವಂತೆ
ರಭಸದಿ ಉಕ್ಕಿ ಬರುವ
ನಿನ್ನ ಉಗ್ರ ರೂಪದ
ಭೀತಿಯ ನಡುವೆಯೇ ಈ
ಎದೆಯಲಿ ಪುಟ್ಟ ಭರವಸೆಯ
ಕಿಡಿಯೊಂದು ಹೊತ್ತಿದೆ..
ಅದರ ಬೆಳಕನು ಉರಿಸಿ
ದಡ ಕಂಡು ಮತ್ತೆ
ಬದುಕಿ ಮೇಲೆದ್ದು ಬರುವ ಹಂಬಲದಿ ನಾನು…..!

— ರಾಘವೇಂದ್ರ ಹೆಗಡೆ
ಸಮರಸ‘ ಪತ್ರಿಕೆಯಲ್ಲಿ ಪ್ರಕಟಿತ
****
ಚಿತ್ರ ಕೃಪೆ: http://crunkish.com/

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 06/07/2010, in ಹನಿಹರವು (ಕವಿತೆ). Bookmark the permalink. 2 ಟಿಪ್ಪಣಿಗಳು.

  1. ‘Late’ ಆದರೂ ‘Latest’ಆಗಿ ವರ್ಣಿಸಿ ಬರೆದ ಕವಿತೆ ಚೆನ್ನಾಗಿದೆ.

    Like

ಹೇಗಿದೆ ಹೇಳಿ!