Monthly Archives: ಆಗಷ್ಟ್ 2010

ಇಂದೆಂಬ ಕರೆದನಿಯ ಉದ್ಗಾರ….!


ನಭವ ನೋಡಿ ಬರಿ ಖಾಲಿ ಹಾಳೆಯೆಂದು

ಒಂದೊಮ್ಮೆ ಖಿನ್ನತೆಯಲಿ

ಹೊರಟು ಹೋದ ನೆನಪು

ಆ ಕ್ಷಣದಿ ಬಂದ ತಂಗಾಳಿಯೂ

ಅದೇಕೋ ಬಿಸಿಬಯಲಲಿ ನಿಲಿಸಿ

ತುಸು ಹುರಿದು ಬೇಯಿಸಿದ ಭಾವದ ಒಡಪು.!

ಹುಚ್ಚು ಅಲೆಯಾಗಿ ಮನದಿ ಬಡಿದು

ದ್ವಂದ್ವದ ಜೊತೆ ಮೈದಾಳಿ ನಿಂತು

ಕರೆಯ ಕೇಳುವ ಮುನ್ನ

ನಿನ್ನೆಯೊಳು ಕೂಡಿಹಾಕಿ

ನಾಳೆಯೆನ್ನುವ ನಂಬಿಕೆ

ಸಿಗದಂತೆ ಕಟ್ಟಿಹಾಕಿ.,

ಪರಾಮರ್ಶೆಗೆ ನಿಲುಕದಂತೆ

ತನುವೊಳಗೆ ಸಿಲುಕಿ

ಚೀರಾಡುವ ಗೋಜಿಗೂ ಹೋಗದೆ

ಮೌನವನು ಮೌನದಲೇ ಸಾಯಿಸಿ

ಪೇಚಾಡುತ ಸುಡುವ ಜ್ವಾಲೆಯ ಮೇಲೆ

ಕೂತು ನಡೆದುಬಿಡುವ

ಎಂಬ ಹುಚ್ಚು ಭಾವದ ಮಥನ..!

ಖಿನ್ನ ಕುಹಕದ ಸಾಂಗತ್ಯದಲಿ

ಇಹವ ಮರೆತ ಮನವ

ಸಾಮೀಪ್ಯಿಸಿ, ಸಾವರಿಸಿ

ಲೌಕಿಕ ಸಾನೀಧ್ಯಕೆ ಕರೆತಂದು

ನೀಡಿ ಅದಕೊಂದಷ್ಟು

ಅಣಿ ಅಕ್ಷರಗಳ ಆಕಾರ,

ಮತ್ತೆ ಮೈಗೊಡವಿ ನಿಲ್ಲುವಂತೆ ಮಾಡಿದ್ದು

ಇಂದೆಂಬ ಕರೆದನಿಯ ಉದ್ಗಾರ.!

— ರಾಘವೇಂದ್ರ ಹೆಗಡೆ

Advertisements

ವಂದೇ ಮಾತರಂ .., ಜೈ ಹಿಂದ್ ..


ಜಗದ ಒಡಲಲಿ ಶಾಂತಿಯ ಆತ್ಮದೀಪ
ಬೆಳಗಿ ಹರಡುತ ವೈವಿಧ್ಯತೆಯ ವಿಶಾಲ ರೂಪ.,
ಸಂಸ್ಕೃತಿ, ಸಂಸ್ಕಾರಗಳ ಅರ್ಥ ಮಹತ್ವತೆಗಳ ವಿಶ್ವಕೆ ಸಾರಿ
ಸನ್ನಡತೆಯ ಪ್ರತಿಜೀವದ ಕಣಕಣದಿ ಬೀರಿ
ಶ್ರದ್ದೆ, ಭಕ್ತಿ, ಧನ್ಯತಾ ಭಾವವ ರಕ್ತಕೆ ಬೆರೆಸಿ,
ತೋರುತ ಮುನ್ನಡೆಯ ದಾರಿ..
ಪಾವೀತ್ರ್ಯತೆಯ ಸಂಮೊಹಿಸು ಪ್ರತಿಮನಕೆ
ಮಾತೆ ನೀ ತ್ರಿವರ್ಣ ಧ್ವಜದೊಳು ಅವತಾರಿಯಾಗಿ.
ವಂದೇ ಮಾತರಂ….

—————-

ಸುಮಾರು ೧೬೫೨ ವಿಭಿನ್ನ ಭಾಷೆಗಳನ್ನು ಹೊಂದಿರುವ, ವಿವಿಧ ಧರ್ಮ, ಜನಾಂಗದ ಜನ ನೆಲೆಸಿರುವ, ಅನೇಕ ಪ್ರಾಕೃತಿಕ ವೈಶಿಷ್ಟ್ಯಗಳನ್ನು ತನ್ನೊಡಲಲ್ಲಿಟ್ಟುಕೊಂಡಿರುವ ವಿಶ್ವದ ಏಕೈಕ ರಾಷ್ಟ್ರ ನಮ್ಮ ಭಾರತ.

ದೇಶ ಸಾಂಸ್ಕೃತಿಕವಾಗಿ ಬಲಿಷ್ಟವಾಗಿದ್ದರೂ ಈಗೀಗ ನಮ್ಮಲ್ಲಿ ಪಾಶ್ತಾತ್ಯ ಅನುಕರಣೆ ಜಾಸ್ತಿಯಾಗುತ್ತಿದೆ. ವೋಟ್ ಬ್ಯಾಂಕ್ ರಾಜಕೀಯ ದೇಶವನ್ನು ಅರಾಜಕತೆಗೆ ತಳ್ಳುತ್ತಿದೆ. ಸಂಸತ್ ಮೇಲೆ ಧಾಳಿ ಮಾಡಿದ ಅಪ್ಜ್ಹಲ್ ಗುರು, ಮುಂಬೈ ಧಾಳಿಯಲ್ಲಿ ಸಿಕ್ಕಿಬಿದ್ದ ಪಾತಕಿ ಕಸಬ್, ಇಂತವರಿಗೆಲ್ಲ ಜೈಲಿನಲ್ಲಿ ರಾಜಾತಿಥ್ಯ
ನಡೆಯುತ್ತಿದೆ.!ಈಗಂತೂ ಮೊಬೈಲ್ ಸಿಮ್ಮುಗಳು ಕಾಳಸಂತೆಯಲ್ಲಿ ಬೇಕಾಬಿಟ್ಟಿ ಸಿಗುತ್ತಿವೆ.ಇನ್ನು ಆಹಾರ ಪದಾರ್ಥ ,ಪೆಟ್ರೋಲ್ , ಮತ್ತಿತರ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ.

ಅಲ್ಲಿ ಸಿಯಾಚಿನ್ ನಂತ ದುಸ್ತರ ಪ್ರದೇಶದಲ್ಲಿ ಮೈಚಳಿ ಬಿಟ್ಟು ಗನ್ನು ಹಿಡಿದು ತಿರುಗುವ ಯೋಧನ ಬಾಳಿಗೆ ಸಮರ್ಪಕ ಸೌಲಭ್ಯ, ಭದ್ರತೆ ಇಲ್ಲವಾಗಿದೆ. ಇನ್ನು ದೇಶಕ್ಕೆ ಪ್ರಾಣ ಸಮರ್ಪಿಸಿದ ಅನೇಕ ಯೋಧರ ಕುಟುಂಬಕ್ಕೆ ಪರಿಹಾರವೆಂಬುದು ಮರೀಚಿಕೆಯಾಗಿಬಿಟ್ಟಿದೆ.!

ಸಂಸ್ಕ್ರತಿ, ಧರ್ಮ, ವೇಷ, ಭಾಷೆ,ಜನಾಂಗ, ಹೀಗೆ ವೈವಿಧ್ಯತೆಗಳ ತವರು ಈ ನಮ್ಮ ಮಾತೃಭೂಮಿ. ಇದರ ಮೇಲೆ ಶೃದ್ಧೆ, ಕಳಕಳಿ, ಇಲ್ಲಿನ ಹಾಗೂ ಪ್ರಪಂಚದ ಮೂಲೆಮೂಲೆಯಲ್ಲಿ ನೆಲೆಸಿರುವ ಪ್ರತಿಯೊಬ್ಬ “ಭಾರತೀಯ”ನ ಮನದಾಳದಲ್ಲಿ ನೆಲೆಯಾಗಲಿ.ಧರ್ಮ, ಸಂಸ್ಕ್ರತಿ , ಸಂಸ್ಕಾರ, ಶಾಂತಿ, ಪ್ರೀತಿ ಮುಂತಾದ ಪದಗಳಿಗೆ ಸಮಾನಾರ್ಥವಾಗಿ ಅಭ್ಯುದಯವಾಗುತ್ತ, ಭಾರತ ನಿಜವಾಗಿಯೂ ಪ್ರಕಾಶಿಸಲಿ.

ದೇಶ ಕಾಯುವ ಯೋಧರಿಗೆ ನಮಿಸೋಣ.
“ಸರ್ವರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.”
ಜೈ ಹಿಂದ್..

———-

ಲಾಸ್ಟ್ ಲೈನ್: “ನೀರಬಣ್ಣ” ದಲ್ಲಿ ಒಂದೆರಡು ಚಿತ್ರಗಳು ಮೌನವಾಗಿ ಮಾತನಾಡುತ್ತಿವೆ.! ಅವುಗಳನ್ನೊಮ್ಮೆ ನೋಡಿಬನ್ನಿ.
ಇಂತಿ
ರಾಘವೇಂದ್ರ ಹೆಗಡೆ

ಮುಖವ ಸೋಕಿದ ಸೋನೆ..


ಕಾಣದ ಬಿಂಬದಿ
ದೂರದ ಮುಗಿಲು
ಎರಚಿದ ಕಣಕಣ ಹೊನಲು..
ನಡುಗುವ ಕೈಯಲಿ
ಹೂವಿನ ಬಟ್ಟಲು
ಕಂಪುತ ನೀರವ ಹಗಲಲು ದಿಗಿಲು.!

ಗೀಚುವ ಕಾತರ ಮೂಡುವ ಪರಿಗೆ
ಉಸಿರಿನ ಮಿಡಿತದ ವೈಖರಿ.,
ಎದೆಗೆ ತಳಮಳಿಸುವ ಭಾವದ ಖಾತರಿ.!
ನೀಯುತ ಗೂಡನು
ಸೇರುತ ಮಾಡನು
ಹಾಡುವ ಹಕ್ಕಿಯೇ ಹಾಜರಿ
ನೂರು ಗೋಜಲು ತಣಿವಲ್ಲೇ
ಅದೇಕೋ ಚಿಂತೆಗೆ ಜಾಗ ಮಂಜೂರಿ.!

ಬಚ್ಚಿ ಕೂತ ಭಾವ
ಗರಿಬಿಚ್ಚಿ ಬಾನಾಡುವಲ್ಲಿ
ಅಳುಕಿ ಕಡೆದ ನೋವು
ಅಡಗಿ ಇಣುಕೆರಗಿದಂತೆ.,
ಬಂದ ಭಾವುಕತೆಯಲ್ಲಿ
ಅರೆಬೆಂದ ಕಿಡಿಯ ಕಾವು
ಹತ್ತು ಕೂರುತ ಮನವ
ಬೆಗೆತದ ನೀರ ಕುದಿಸಿ
ಹೊರದಬ್ಬುತಿದೆ ಕಣ್ಣಂಚಲಿ.,
ಮರೆಮಾಡಿದೆ ಅದರನಂತೂ ಈಗ
ಮುಸುಕಿದ ಮೋಡವ ಒಡೆದು
ಬಂದು ಮುಖವ ಸೋಕಿದ ಸೋನೆ…!
**************

ಆತ್ಮೀಯರೇ,
‘ನೀರಬಣ್ಣ’ ಎಂಬ ಹೆಸರಿನ ಹೊಸತೊಂದು ಬ್ಲಾಗ್ “ಮುಖವ ಸೋಕಿದ ಸೋನೆ..” ಎಂಬ ಕವಿತೆಯೊಂದಿಗೆ ಜನ್ಮ ತಾಳಿದೆ.
ಇನ್ನುಮುಂದೆ ‘ರಾಗನೌಕೆ’ ಮತ್ತು ‘ನೀರಬಣ್ಣ’ ಈ ಎರಡೂ ಬ್ಲಾಗ್ ವಿಭಿನ್ನ ವಿಷಯಗಳೊಂದಿಗೆ ಆಗಾಗ ಅಪ್ಡೇಟ್ ಆಗುತ್ತಿರುತ್ತವೆ.
‘ರಾಗನೌಕೆ’ ಗೆ ತಾವು ತೋರಿದ ಆತ್ಮೀಯತೆಯೂ ಕೂಡ ‘ನೀರಬಣ್ಣ’ ದ ಕಲ್ಪನೆಗೆ ಪ್ರಮುಖ ವಸ್ತುವಾಗಿದೆ.
ಒಮ್ಮೆ ‘ನೀರಬಣ್ಣ‘ ವನ್ನೂ ನೋಡಿಬನ್ನಿ. ಪ್ರತಿಕ್ರಿಯಿಸಲು ಮರೆಯದಿರಿ.!
—-
ಇಂತಿ
ರಾಘವೇಂದ್ರ ಹೆಗಡೆ