Monthly Archives: ಸೆಪ್ಟೆಂಬರ್ 2010

ದೇಗುಲದ ಕಟ್ಟೆ ಆಗದಿರಲಿ ಹರಟೆಕಟ್ಟೆ


ಹಲವು ಬಾರಿ ಇಂತಹ ಸನ್ನಿವೇಶಗಳನ್ನು ನಾವೆಲ್ಲ ನೋಡಿರುತ್ತೇವೆ ಮತ್ತು ನೋಡುತ್ತೇವೆ.ಯಾವುದಾದರೂ ಪೂಜೆ ಅಥವಾ ದೇವಕಾರ್ಯ ನಡೆಯುತ್ತಿದೆ ಎಂದಿಟ್ಟುಕೊಳ್ಳಿ. ಸಾಮಾನ್ಯವಾಗಿ ಅರ್ಚಕರು ಮಂತ್ರಪಠಣ ಮಾಡುತ್ತ ಪೂಜಾಕಾರ್ಯಗಳಲ್ಲಿ ತೊಡಗಿರುತ್ತಾರೆ. ಆದರೆ ನೆರೆದವರಿಗೆ ಮಾತ್ರ ಹೊರಾವರಣ ಕೇವಲ ಹರಟೆಕಟ್ಟೆಯಾಗಿಬಿಡುತ್ತದೆ. ಹತ್ತಾರು ಜನರ ಗುಂಪು ನಿಧಾನವಾಗಿ ಪಿಸುಮಾತಿನಿಂದಾರಂಭಿಸಿ ತದನಂತರ ತಮ್ಮ ಸ್ವರವನ್ನು ತಾರಕಕ್ಕೇರಿಸುತ್ತಾರೆ. ಅಲ್ಲಿ ಚರ್ಚೆಯಾಗುವ ವಿಚಾರಗಳಂತೂ ಬಹಳ ವಿಭಿನ್ನವಾದವುಗಳು. ಅವರಿವರ ಅಕ್ಕಪಕ್ಕದವರ ವಿಷಯ, ಕೇರಿ, ಊರು, ರಾಜ್ಯ ರಾಜಕೀಯ, ರಾಷ್ಟ್ರೀಯ ವಿಚಾರಗಳು, ದಿಲ್ಲಿ ಪಾರ್ಲಿಮೆಂಟಿನಲ್ಲಿ ಚರ್ಚೆಯಾಗಬಹುದಾದ ಸಾಂಭಾವ್ಯ ವಿಚಾರಗಳು(!), ಅನಗತ್ಯ ಒಕ್ಕಣೆಗಳು, ವಿಡಂಬನೆಗಳು, ತಮ್ಮದೇ ಚಿಂತನೆಗಳು, ಲಹರಿಗಳು, ಆಲಾಪಗಳು, ಆರೋಪಗಳು, ದೂರುಗಳು, ಈರ್ಷ್ಯೆಗಳು, ಎದುರಿಗಿದ್ದವರ ಮೇಲೆ ಚುಚ್ಚು ಮಾತುಗಳು, ಕಾಲೆಳೆವ ಮಾತುಗಳು, ಚಾಡಿ, ಕುಹಕಗಳು, ಕೀಟಲೆಗಳು.. ಒಂದೇ ಎರಡೇ..?!
ಸುದ್ದಿಗೆ ವಿವಿಧ ಬಣ್ಣಬಣ್ಣದ ರೆಕ್ಕೆ ಪುಕ್ಕಗಳು ಬಂದು ಕೂಡ್ರುವದೂ ಅಲ್ಲೇ.! ತಾವಿರುವ ಜಾಗ ಯಾವುದು, ಎಲ್ಲಿ ಯಾವಮಾತನಾಡಬೇಕು ಎಂಬ ಕನಿಷ್ಟ ವಿವೇಚನೆಯೂ ಇರದವರಂತೆ ವರ್ತಿಸುವ ಇಂತಹ “ಭಕ್ತ”ರಿಗೆ, ಪೂಜೆ ಮಂಗಳಾರತಿ ಸಮಯದಲ್ಲಿ ಅರ್ಚಕರು ಅಥವಾ ಇನ್ಯಾರೋ ಕರೆದು ಈ ಲೋಕಕ್ಕೆ ಅವರನ್ನು ಬರಮಾಡಬೇಕು!
ಅಷ್ಟಕ್ಕೂ ಯಾವ ಘನಂಧಾರಿ ಪುಣ್ಯಕಟ್ಟಿಕೊಳ್ಳಲು ಈ ರೀತಿ ದೇಗುಲದಲ್ಲಿ ಹರಟಬೇಕು.?
ಅದೂ ಇಲ್ಲಸಲ್ಲದ ವಿಚಾರಗಳನ್ನು.!
ನಮ್ಮ ಅರಿವಿಗೇ ಬಾರದಂತೆ ಕೆಲವೊಮ್ಮೆ ನಾವೂ ಕೂಡ ಇಂತಹ ’ವಿಚಾರ ಘೋಷ್ಠಿ’ಗಳಲ್ಲಿ ಭಾಗವಹಿಸಿಬಿಡಬಹುದು! ಸಾಧ್ಯವಾದಷ್ಟೂ ಅವುಗಳನ್ನು ವಿರೋಧಿಸಬೇಕಿದೆ. ದೇವಸ್ತಾನದ ಶಿಸ್ತು, ಶಾಂತಿ, ಮಡಿ, ಪಾವೀತ್ರ್ಯತೆಗಳನ್ನು ಕಾಪಾಡಬೇಕಿದೆ.

ಅದು ಹಾಗಿರಲಿ. ನಾಳೆ (ಸೆ.೨೪) ಅಯೊಧ್ಯೆ ತೀರ್ಪು. ನಾವೆಲ್ಲ ಶ್ರೀರಾಮ ಜನ್ಮಭೂಮಿ ಎಂದು ನಂಬಿರುವ ಮತ್ತು ಆ ಬಗ್ಗೆ ಸಾಕಷ್ಟು ಪುರಾವೆಗಳಿರುವ ಆ ಪುಣ್ಯ ಭೂಮಿ ಅಯೊಧ್ಯೆಯಲ್ಲಿ ಮತ್ತೆ ರಾಮಮಂದಿರ ತಲೆ ಎತ್ತಲಿ ಎಂಬುದೇ ನಮ್ಮೆಲ್ಲರ ಆಶಯ.

ಜೈ ಶ್ರೀ ರಾಮ್.

Advertisements

ಹನಿಗಳಂತೂ ಅಲ್ಲ ಇವು. !


ಆಕಾಶವೇ ಹರಿದು ಬಿದ್ದವರಂತೆ
ಬಿಕ್ಕುತ್ತಿದ್ದಳು ಆಕೆ
ಗಳಗಳ ಸುರಿಸುತ ಕಂಬನಿ,
ಕೇಳುವವರೇ ಇರಲಿಲ್ಲ ಆಕೆಯ
ಯಾಕೆಂದರೆ ಅವಳು ನಿಂತಿದ್ದ
ಜಾಗ ಅದು ಕೆಂ.ಬ.ನಿ. !

—————

ಅನಿಸಿದ ಅನಿಸಿಕೆಗಳಿಗೆ
ಹೇಳುವ ಆತುರ ಘಳಿಗೆ
ಸಂಭವಿಸಿ(ಸದೆ) ಮನಸು-ಮನಸುಗಳ
ಮಧ್ಯೆ ಬಿತ್ತಿಬಿಡಬಹುದು ಒಂದಷ್ಟು ಕಹಿಯ,
ಅವರಿವರ ವಿಷಯಕೆ ಹಾತೊರೆವ
ತಾವೆಂಥವರಾದರೂ ಇತರರ ಹೀಗಳೆವ
ಜಾಣಕಿವುಡರಿಗೂ ತಲುಪಿಬಿಡಬಹುದು
ಅವು ಬಹುಬೇಗ ಕಿವಿಯ!

——————-

ಭಾವನೆಗಳ ನಿರಿಗೆಗಳು ಮೂಡಿ
ಮನವನ್ನೊಂದಷ್ಟು ಕಾಡಿ
ಒಡಮೂಡಿದಾಗ ಉದುರಿದ್ದು ನಾಲ್ಕುಸಾಲು ಹನಿ,
ಭಾವನೆಗಳು ಒತ್ತರಿಸಿ
ಉಸಿರುಗಟ್ಟಿ ಕನವರಿಸಿ
ಕಟ್ಟೆಯೊಡೆದಾಗ ಹರಿದದ್ದು ಸಾಲುಸಾಲು ಕಂಬನಿ!

——————–

— ರಾಘವೇಂದ್ರ ಹೆಗಡೆ