ಮೋಡವ ಹಿಡಿವ ತವಕದಲ್ಲಿ..: ಕೊಡಚಾದ್ರಿ ಚಾರಣ – ಅಂಕಣ ೧

ಸಹೃದಯಿ ಓದುಗರಿಗೆ ಆತ್ಮೀಯ ನಮಸ್ಕಾರಗಳು. ಬ್ಲಾಗಿಗೆ ವರ್ಷ ಸಂದ ಸಂದರ್ಭದಲ್ಲಿ ಕೊಡಚಾದ್ರಿಯ ಕೆಲ ಚಿತ್ರಗಳನ್ನು ನಿಮ್ಮಮುಂದಿಟ್ಟಿದ್ದೆ ಮತ್ತು ಆ ಕುರಿತು ನಾಲ್ಕುಸಾಲುಗಳನ್ನು ಗೀಚುವ ಆಕಾಂಕ್ಷೆ ಇರುವುದಾಗಿಯೂ ಹೇಳಿಕೊಂಡಿದ್ದೆ. ಕಳೆದ ಎಪ್ರಿಲ್ ನಲ್ಲಿ ಕೈಗೊಂಡಿದ್ದ ಚಾರಣವಾದರೂ ಕಾರಣಾಂತರಗಳಿಂದ ಆಗೆಲ್ಲ ಬರೆಯಲು ಸಾಧ್ಯವಾಗಿರಲಿಲ್ಲ. ನಮ್ಮ ಚಾರಣದ ಬಗ್ಗೆ ಮತ್ತು ಕೊಡಚಾದ್ರಿಯ ರಮಣೀಯತೆಯನ್ನು ಸಂಕ್ಷಿಪ್ತವಾಗಿ ಬರೆಯುವ ಇರಾದೆಯಿಂದ ಈಗ ಆ ’ವಿಹಾರ ವಿಚಾರ’ವನ್ನು ಆರಂಭಿಸುತ್ತಿದ್ದೇನೆ.

****

ಎಪ್ರಿಲ್ ೯, ೨೦೧೦. ಮೊದಲೇ ಹೊರಟು ಬ್ರೆಡ್, ಬಿಸ್ಕತ್, ಹಣ್ಣುಗಳನ್ನು ಬ್ಯಾಗಿಗೆ ತುರುಕಿಕೊಳ್ಳುತ್ತಿದ್ದ ಸ್ನೇಹಿತರಾದ ಸುದರ್ಶನ, ಮೋಹನ್, ನಾಗರಂಜಿತ್, ಲತೇಶ್, ವಿಶುಕುಮಾರ್, ರೆನ್ನಿ, ವಿನಾಯಕ ಮತ್ತು ಹರೀಶ್ ಅವರುಗಳನ್ನು ಸಂಜೆ ನಾಲ್ಕರ ಸುಮಾರಿಗೆ ಕುಂದಾಪುರದಲ್ಲಿ ಸೇರಿಕೊಂಡೆ. ೪:೩೦ ರ ಸುಮಾರಿಗೆ ಅಲ್ಲಿಂದ ಕೊಲ್ಲೂರು ಬಸ್ ಹತ್ತಿ ನಮ್ಮ ಪಯಣ ವಿದ್ಯುಕ್ತವಾಗಿ ಆರಂಭಗೊಂಡಿತು. ಸಂಜೆ ಐದುವರೆ ಹೊತ್ತಿಗೆ ಕೊಲ್ಲೂರು ತಲುಪಿದ್ದೆವು. ಅಲ್ಲಿ ಶಿವಮೊಗ್ಗ ಮಾರ್ಗದ ಲೋಕಲ್ ಬಸ್ನ ಸಮಯವನ್ನು ವಿಚಾರಿಸಲಾಗಿ, ಅದಕ್ಕಿನ್ನೂ ಒಂದು ಘಂಟೆ ಬಾಕಿ ಇರುವುದಾಗಿ ತಿಳಿದುಬಂತು. ಆದರೆ ಅದಾಗಲೇ ಕತ್ತಲಾವರಿಸಲು ಆರಂಭವಾಗಿದ್ದರಿಂದ ಆದಷ್ಟು ಶೀಘ್ರ ನಾವು ಕಾರಿಘಾಟ್ ತಲುಪಬೇಕಿತ್ತು. (ಅಂದಹಾಗೆ ಈ ಕಾರಿಘಾಟ್, ಕೊಲ್ಲೂರು-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಕೊಲ್ಲೂರಿನಿಂದ ಸುಮಾರು ಹತ್ತು ಕಿ.ಮಿ. ದೂರದಲ್ಲಿದೆ. ) ಹಾಗಾಗಿ ಮೂಕಾಂಬಿಕೆಗೆ ದೇಗುಲದ ದಾರಿಯ ಬಳಿಯಿಂದಲೇ ವಂದಿಸಿ ಒಂಬತ್ತು ಜನರಿದ್ದ ನಮ್ಮ ತಂಡದ ಪಯಣ ಕಾರಿಘಾಟ್ ವರೆಗೆ ಜೀಪ್ ನಲ್ಲಿ ಮುಂದುವರಿಯಿತು. ಅಲ್ಲಿ ಕೊಡಚಾದ್ರಿ ಮಾರ್ಗದ ತಿರುವಿನಿಂದ ಮುಂದೆ ಸುಮಾರು ಐದು ಕಿ.ಮಿ. ವರೆಗೂ ಕಿರಿದಾದ ಆದರೂ ಜೀಪ್ ಸಾಗುವಷ್ಟರ ಮಟ್ಟಿಗೆ ಮಣ್ಣುರಸ್ತೆಯಿದೆ. ಆದರೆ ಚಾರಣದ ಮೂಡ್ ನಲ್ಲಿದ್ದ ನಾವು ಆ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸುವುದನ್ನು ಪೂರ್ವನಿರ್ಧರಿಸಿಕೊಂಡಿದ್ದರಿಂದ ಅಲ್ಲೇ ಇಳಿದುಕೊಂಡು ಒಬ್ಬರನ್ನೊಬ್ಬರು ತಮಾಷೆಮಾಡಿಕೊಳ್ಳುತ್ತ, ಹರಟುತ್ತ ನಿಧಾನವಾಗಿ ಹೆದ್ದಾರಿಯ ಬಲತಿರುವಿನ ಕೊಂಚ ಕಡಿದಾದ ಮಾರ್ಗದಲ್ಲಿ ನಡೆಯಲಾರಂಭಿಸುವಾಗ ವಾಚು ಸರಿಯಾಗಿ ಆರು ಗಂಟೆಯನ್ನು ತೋರಿಸುತ್ತಿತ್ತು. ಕೆಲ ವರ್ಷಗಳ ಹಿಂದೆ ಒಮ್ಮೆ ಕೊಡಚಾದ್ರಿಯನ್ನು ನೋಡಿದ್ದ ವಿನಾಯಕನಿಗೆ ಮಾತ್ರ ಸ್ವಲ್ಪಮಟ್ಟಿಗೆ ಈ ದಾರಿಯ ಪರಿಚಯವಿತ್ತು.

ಸಂಜೆಯ ತಂಪಿನ ಗಾಳಿಯಲ್ಲಿ ಕಾನನದ ಗಾಢ ಮೌನವನ್ನು ಕಡೆಯುತ್ತಿದ್ದ ಹಕ್ಕಿಗಳ ಗಿಜಗುಡುವಿಕೆ, ಕಾಡುಜಿರಳೆಯ ಕೂಗು ಅಪೂರ್ವ ನಾದಲೋಕವನ್ನು ಸೃಷ್ಟಿಸಿತ್ತು. ಸಣ್ಣ ಕೀಟಲೆಗಳು, ಹಾಸ್ಯಗಳೊಂದಿದೆ ಎಲ್ಲರೂ ಹರಟುತ್ತ, ನಗುತ್ತ ಸಾಗಿದ ಹಾದಿಯ ದೂರವೇ ತಿಳಿಯಲ್ಲ. ಮೆಲ್ಲಮೆಲ್ಲನೆ ಆವರಿಸುತ್ತಿರುವ ಕತ್ತಲು ಒಮ್ಮಲೇ ದಟ್ಟವಾಗುತ್ತಿರುವಂತೆ ಭಾಸವಾಗಲಾರಂಭಿಸಿತು. ದಾರಿಯಲ್ಲಿ ಅಲ್ಲಲ್ಲಿ ನಿಂತಿದ್ದ ಮತ್ತು ಕೆಲವುಕಡೆ ಮುರಿದು ಮಲಗಿದ್ದ ಖಾಲಿ ಕಂಬಗಳು, ವಿದ್ಯುತ್ ಸಂಪರ್ಕ ಕಲ್ಪಿಸಲು ಯತ್ನಿಸಿ ಕೈಬಿಟ್ಟದಕ್ಕೆ ಮೂಕಸಾಕ್ಷಿಗಳಾಗಿದ್ದವು.

ಸಂಜೆಯ ಅರೆಮಬ್ಬಿನಲ್ಲಿ ಸೆರೆಯಾದ ಬೆಟ್ಟದ ಬುಡದ ಬಯಲು..

ಬಯಲಿನಂತ ಪ್ರದೇಶವೊಂದ ತಲುಪಿದ ನಮಗೆ ದೂರದಲ್ಲೊಂದು ಲಾಂದ್ರದ ದೀಪದಂತೆ ಗೋಚರವಾಗುತ್ತಿತ್ತು. ಅಲ್ಲಿ ಮಲಯಾಳಿಗನೊಬ್ಬನ ಅಂಗಡಿ ಇರುವುದಾಗಿ ವಿನಾಯಕ ಮೊದಲೇ ಹೇಳಿದ್ದ. ಅದಾಗಲೇ ೭:೧೫ ಆಗಿತ್ತು. ಆ ಅಂಗಡಿಯಾತನ ಹೆಸರು ತಂಗಪ್ಪನ್. ಸುತ್ತೆಲ್ಲೂ ಬೇರೆಮನೆ ಕಾಣಿಸಲಿಲ್ಲ. ಆ ಪ್ರದೇಶದಲ್ಲಿ ಅವನದ್ದೊಂದೇ ಮನೆ ಮತ್ತು ಅಂಗಡಿ. ಚಾರಣಿಗರಿಗೆ ಆತಿಥ್ಯಮಾಡುವುದೇ ಅವರ ಕಾಯಕ. ಏಳೆಂಟು ವರ್ಷಗಳ ಹಿಂದೆಯೆ ಇಲ್ಲಿ ಕುಟುಂಬಸಮೇತ ಬಂದು ನೆಲೆಸಿದ್ದಾರಂತೆ. ಕೇರಳದ ಜನಪ್ರಿಯ ದೈನಿಕ ’ಮಲಯಾಳ ಮನೋರಮಾ’ದಲ್ಲಿ ಒಮ್ಮೆ ಅವರ ಕುರಿತು ಸವಿಸ್ತಾರ ಲೇಖನ ಪ್ರಕಟಗೊಂಡಿತ್ತು.

ಅಲ್ಲೇ ತಿಂಡಿ- ಟೀ ಮುಗಿಸಿ ಅವರಿಂದ ಕೊದಚಾದ್ರಿಯಲ್ಲಿ ಇರುವ ಏಕೈಕ ಅಂಗಡಿ ಕಂ ಹೊಟೆಲ್ ಕಂ ಮನೆಯ ಮಾಲಿಕ ಸೀತಾರಾಮ ಅವರ ದೂರವಾಣಿ ಸಂಖ್ಯೆ ಪಡೆದು, ೯ ಜನ ಬರುತ್ತಿರುವುದಾಗಿಯೂ ಮತ್ತು ನಮ್ಮೆಲ್ಲರಿಗೆ ರಾತ್ರಿ ಊಟ-ವಸತಿ ಸಿದ್ದತೆ ಮಾಡಲು ತಿಳಿಸಿದೆವು. ನಾವು ಇನ್ನೂ ಸುಮಾರು ೭-೮ ಕಿ.ಮಿ. ದಟ್ಟ-ಕಡಿದಾದ ಬೆಟ್ಟದ ಕಾಲುದಾರಿಯಲ್ಲಿ ಸಾಗಬೇಕಿರುವುದು ತಿಳಿದುಬಂತು. ಅಲ್ಲಿಂದ ಹೊರಟು ಬೆಟ್ಟದ ಬುಡದ ದಾರಿಯ ಹಿಡಿಯುವಾಗ ಸಮಯ ಸರಿಯಾಗಿ ಸಂಜೆ ೭:೩೦. ನಮ್ಮ ಚಾರಣಕ್ಕೆ ನಿಜವಾದ ಸವಾಲು ಆರಂಭವಾಗಿದ್ದೇ ಇಲ್ಲಿಂದ.

ಒಂಬತ್ತೂ ಜನರೊಡಗೂಡಿ ಇದ್ದ ಮೂರು ಬ್ಯಾಟರಿಗಳು ಮತ್ತು ಬ್ಯಾಟರಿಯಂತೆ ಬೆಳಗಲು ಮೊಬೈಲುಗಳು ಕಾರ್ಯೋನ್ಮುಖವಾದವು. ಕೈಯಲ್ಲಿರುವ ಕೋಲನ್ನು ಊರುತ್ತ, ಒಮ್ಮೊಮ್ಮೆ ಎಡವುತ್ತ ಡಟ್ಟ ಕಾಡಿನಲ್ಲಿ ನಿಶಾಚರಿ ಜೀವಿಗಳಂತೆ ಪೊದೆ, ತೆರಕುಗಳ ಸದ್ದುಮಾಡುತ್ತ, ಸಣ್ಣ ದೊಡ್ಡ ಏರುಗಳನ್ನು ಸ್ಪರ್ಧಾತ್ಮಕವಾಗಿ ಏರುತ್ತ ಮುನ್ನಡೆದೆವು.

ಆ ನಿರ್ಜನ ಪ್ರದೇಶದ ಭೀತಬಡಿಸುವ ಅರಣ್ಯದೊಳಗೂ ಮಾತು-ಕಾಡುಹರಟೆಗಳಿಗೇನೂ ಕೊರತೆಯಿರಲಿಲ್ಲ ಮತ್ತು ಮೌನಕ್ಕೆ ಆಸೀನಗೊಳ್ಳಲು ಪುರುಸೊತ್ತಿರಲಿಲ್ಲ.!
ಹೀಗೆ ಸಾಗುವಾಗ ಪೊದೆಗಳ ನಡುವಿಂದ ದರಬರನೆ ಸ್ವಲ್ಪ ಜೋರಾಗಿ ಸದ್ದಾಯಿತು. ಯಾರದೋ ಕೈಯಲ್ಲಿದ್ದ ಬ್ಯಾಟರಿಯ ಬೆಳಕು ಪೊದೆಗಳ ಹಿಂದೆ ಅವಿತ ಅಲ್ಪಸ್ವಲ್ಪ ಗೋಚರವಾಗುತ್ತಿದ್ದ ದೊಡ್ಡ ದೇಹದ ಜೀವಿಯೊಂದರ ಮೇಲೆ ಬಿತ್ತು. ಕೂಡಲೇ ಅದನ್ನು ಕಾಡುಕೋಣವೆಂದು ಗುರುತಿಸಿದ ರೆನ್ನಿ, ಎಲ್ಲ ಬ್ಯಾಟರಿಗಳನ್ನು ಬಂದ್ ಮಾಡುವಂತೆಯೂ ಮತ್ತು ಯಾರೂ ನಿಂತಲ್ಲಿಂದ ಕದಡದೆ ಮೌನವಾಗಿರುವಂತೆಯೂ ಸೂಚಿಸಿದ. ಎಲ್ಲ ಒಮ್ಮೆ ಹೌಹಾರಿದೆವು. ಮಾತಿನ ಕಡಲಿನ ಜಾಗವನ್ನು ಒಂದರೆಕ್ಷಣದಲ್ಲಿ ಆಕ್ರಮಿಸಿದ್ದ ಮೌನ ಇಡೀ ಜಗತ್ತನ್ನೇ ತಾನು ಪ್ರತಿನಿಧಿಸುತ್ತಿರುವಂತೆ ಪ್ರತಿಧ್ವನಿಸುತ್ತಿತ್ತು.

ಮುಂದುವರಿಯುತ್ತದೆ….

****

— ರಾಘವೇಂದ್ರ ಹೆಗಡೆ.

Advertisements

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 12/01/2011, in ಚಾರಣ, ವಿಹಾರ and tagged , . Bookmark the permalink. 6 ಟಿಪ್ಪಣಿಗಳು.

 1. ಚೆನ್ನಾಗಿದೆ. ಸರಿಯಾದ ಸಮಯಕ್ಕೆ ನಿಲ್ಲಿಸಿದ್ದಿರ. ಟಿವಿ ಧಾರವಾಹಿ ಥರ.. ಜೋಗ-ಕೊಡಚಾದ್ರಿ ನನ್ನ ಮೊದಲ ಚಾರಣ.. ೩ ವರ್ಷಗಳ ಹಿಂದೆ, ಎಪ್ರಿಲ್ ೨೦೦೮. ಇದೆ ಕಾರೆಘಾಟಿ ಮೂಲಕ ೪ ಜನ ಸ್ನೇಹಿತರು ನಡೆದು ಹೋಗಿದ್ದೆವು. ರಾತ್ರಿ ಸರ್ವಜ್ಞ ಪೀಠಕ್ಕಿಂತ ಮುಂದೆ, ಕೆಳಗಿನ ಗುಡ್ಡದಲ್ಲಿ ಕಥೆ ಹೊಡೆಯುತ್ತ, ಹರಟುತ್ತ, ಕೊಲ್ಲೂರಿನ ರಾತ್ರಿಯ ದೈವೀಕ ನೋಟ ಸವಿಯುತ್ತ ಕಳೆದ ನೆನಪು ಬಂತು. ನೆನಪಿಸಿದ್ದಕ್ಕೆ ಧನ್ಯವಾದಗಳು. 🙂

  Like

  • ನಮಸ್ತೆ ರವಿ ಅವರೆ 🙂
   ಏನ್ ಮಾಡೋದು ಹೇಳಿ ಸಿರಿಯಲ್ ಎಫ್ಫೆಕ್ಟೆ ಇರ್ಬೇಕು, ಮುಂದೆನಾಗ್ದೆ ಹೋದ್ರೂ ಅಲ್ಗೆ ನಿಲ್ಸ್ಬಿಡೋದು .. 🙂

   ಧನ್ಯವಾದ ತಮ್ಮ ಪ್ರತಿಕ್ರಿಯೆಗೆ..
   ಈ ಸಿರಿಯಲ್ ನ ನೆಕ್ಷ್ಟು ಎಪಿಸೋಡ್ನು ನೋಡೋಕ್ ಬನ್ನಿ 🙂

   Like

 2. ಈ ಬರಹ ಓದಿ…

  ಅರಳಿ ಅಭಿಸಾರಗೊಂಡಿದೆ

  ಮರಳಿ ಮಂಜೂರುಮಾಡಿದೆ

  ಕನಸು ಕಂಪಿನ

  ತಳಿರು ತಂಪಿನ ಮನಸ್ಸು ………

  ( ಮುಂದುವರಿಯುವುದಿಲ್ಲ ! )

  Like

 3. Good to see Raganouke climbing the Mount Kodachadri!!!
  🙂

  Like

 1. ಮರುಕೋರಿಕೆ (Pingback): ಆಕಾಶ ದೀಪವು ನೀನು..: ಕೊಡಚಾದ್ರಿ ಚಾರಣ – ಅಂಕಣ ೨ « ರಾ ಗ ನೌ ಕೆ

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s