ಮಳೆ ಎಂಬ ಹನಿವ ಕವಿತೆ..

ನೀಲತೀರದ ಒಡಲ ಹಸಿರಿನಲಿ
ಹೆಸರು ಮರೆತ ಮೋಡ
ಮೊಳಕೆಯೊಡೆದು ಬರುತ ಮಳೆಹನಿ
ಚಟಪಟನೆ ನುಡಿಸುವುದು ಕಾಡನೋಡ..

ಮಳೆಯ ಮಹಿಮೆಯೇ ಹಾಗೆ.. ಮಣ್ಣ ಹುಡಿಯಿಂದ ಕಂಪ ಕುಡಿಸುತ್ತದೆ. ಬಡಕಲು ಬಳ್ಳಿಗೆ ಜೀವಕಳೆಯ ಹಬ್ಬಿಸುತ್ತದೆ. ಮಳೆ ಮೋಡದ ಮೊಗ್ಗು, ಹೂವು.. ಇಂಥ ಹೂವಿನ ಮಧುರ ಸ್ಪರ್ಷಕೆ ಮುದದಿ ಅವತರಿಸುವ ಅದೆಷ್ಟೋ ಹೂಗಳಿವೆ; ಅಕ್ಷರಶಃ ಮಳೆ ಹೂಗಳಿವೆ. ಹನಿಗೆ ಅರಳುವ ಮೊಗ್ಗುಪ್ರಾಣ ಧರೆಯ ಕಣಕಣಕೆ ಜೀವಗಂಧ ಸ್ಪುರಿಸುತ್ತದೆ.
ಒಂದೊಂದಾಗಿ ಬಿಡಿಸಿದರೆ ಮೂಗುತಿಯಂತೆ, ಕಿವಿ ಕುಡುಕಿನಂತೆ ಕಾಣುವ ಬಂದುಳಿಕೆಯ ಹೂಮಾಲೆಯ ಚಿತ್ರ ಇಲ್ಲಿದೆ. ಇದನ್ನು ’ಸೀತಾಳೆ ದಂಡೆ’ ಅಥವಾ ’ಸೀತಾದಂಡೆ’ ಎಂದೂ ಕರೆಯುತ್ತಾರೆ.

ಮಳೆಗಾಲದ ಆರಂಭದಲ್ಲಿ ಮಾತ್ರ ಕಂಡುಬರುವ ಸೀತಾದಂಡೆ

******

ಮಲೆನಾಡು – ಕರಾವಳಿ ಈ ಎರಡೂ ಪ್ರದೇಶಗಳಲ್ಲಿ ಬೆರೆತು ಬೆಳೆದು ಬಂದ ನನ್ನಂಥ ಅನೇಕರಿಗೆ ಮಳೆಗಾಲದ ಜಲಪಾತಗಳ ಪರಿಚಯ ಇಲ್ಲದಿಲ್ಲ. ಬೆಟ್ಟಗುಡ್ಡಗಳಲ್ಲಿ ಬೇಸಿಗೆಯಲ್ಲಿ ಕಾಲುದಾರಿಯಂತೆ ಕಡಿದಾದ ಕಲ್ಲು-ಸವಕಲು ಮಾರ್ಗ ಕಂಡರೆ ಅದು ಮಳೆಗಾಲದ ನೀರದಾರಿಯೆಂದೇ ಲೆಕ್ಕ. ಹೀಗೆ ದೊಡ್ಡದೊಡ್ಡ ಕಲ್ಲುಗಳ ಮೇಲಿಂದ ಭೋರ್ಗರೆತದ ಖಾಸಾ ಆಲಾಪದೊಂದಿಗೆ ಧುಮ್ಮಿಕ್ಕುವ ಜಲಧಾರೆ ಮೋಹಕ ಜಲಪಾತವಾಗಿ ಕಣ್ತಣಿಸುತ್ತದೆ. ಇಂಥವುಗಳಿಗೆ ಹೆಸರ ಹಂಗಿಲ್ಲ. ಸೀಮಿತ ಅವಧಿಯ ಕೊಡುಗೆ ಎಂಬಂತೆ ಇವುಗಳನ್ನು ಸೀಮಿತ ಅವಧಿಯ ಜಲಪಾತ ಎನ್ನಬಹುದಷ್ಟೆ!

ನಮ್ಮೂರ ಬಳಿ ಕಂಡ ಮಳೆಗಾಲದ ಜಲಪಾತದ ಚಿತ್ರವಿದು.

******

ಮಳೆ, ಹೂವು, ಕವಿತೆ, ಹಕ್ಕಿ, ದುಂಬಿ,.. ಇವುಗಳಿಗೆಲ್ಲ ಏನೋ ಬಿಡಿಸಲಾಗದ ಬಂಧ ಇರುವಂತೆ ಒಮ್ಮೊಮ್ಮೆ ತೋರುತ್ತದೆ. ಇನ್ನೂ ಮುಂದುವರಿದು ತೊಟ್ಟಿಲು,ನಕ್ಷತ್ರ, ಕಡಲು, ಹಿಮರಾಶಿ, ಮಸಣಭೂಮಿಗಳೂ ಒಂದಕ್ಕೊಂದು ಬೆಸೆದುಕೊಂಡಿವೆಯೆಂದೂ, ಅವು ಇವುಗಳಿಗೆ, ಇವು ಅವುಗಳಿಗೆ… ಅಥವಾ ಇವೆಲ್ಲ ಒಂದೇ ಚಕ್ರದ ಸುರುಳಿಗಳೆಂದು, ಕಾಲಘಟ್ಟದ ನಿಲ್ದಾಣಗಳೆಂದು.., ಹೀಗೇ ಒಮ್ಮೊಮ್ಮೆ ಅನಿಸಿದರೆ ಇವುಗಳಲ್ಲೇ ಬೆರೆತ ಬದುಕಿನಿಂದ ಒಂದಷ್ಟು ಆಚೆನಿಂತು ಒಂದು ಬೊಗಸೆ ನಿರಾಳತೆಯ ಮೊಗೆದು ಸ್ವಂತವಾಗಿಸಿಕೊಳ್ಳಬೇಕು ಅನ್ನಿಸುವಷ್ಟು ವ್ಯವಧಾನ ಒಂದೊಮ್ಮೆ ಸಿಕ್ಕರೂ ಮಗದೊಮ್ಮೆ ಕೈಗೆ ಸಿಗದ ದುಂಬಿಯಂತೆ ಹಾರಿ ದೂರದಿಂದ ಜೀವತಣಿಸುವ ಸಾಧ್ಯತೆ, ಸಂಭವನೀಯತೆಗಳ ತ್ರಾಣ ಗೋಚರಕ್ಕೆ ಸಿಗುವಷ್ಟು ಹತ್ತಿರವಾಗುತ್ತದೆ.

ಕೆಂಪುಕರವೀರವ ಆಲಂಗಿಸುತ್ತಿರುವ ಇರುವೆ

******

ಅಕ್ಕನ ಮದುವೆಯ ನೆಪದಲ್ಲಿ ಕೊಂಡ ಹೊಸ ಕ್ಯಾಮರಾ ಫೋಟೊಗ್ರಫಿ ಬಗ್ಗೆ ಒಂದಷ್ಟು ಆಸಕ್ತಿಯನ್ನು ನನ್ನಲ್ಲಿ ತುಂಬುತ್ತಿದೆ. ಮಳೆಗಾಲದ ರಸ್ತೆ, ಕೆಂಪಗೆ ಹರಿವ ಹಳ್ಳ, ಮುಗಿಲ ಮುತ್ತುವ ಮರಗಳು, ಕಡಲ ಕೂಡುವ ನದಿ, ನೆರಳು-ಬೆಳಕು.., ಇವೆಲ್ಲ ಪರಿಚಿತ ಕಣ್ಣಿಗೆ ಮತ್ತೂ ಹೊಸತೇನೋ ಎಂಬಂತೆ ಗೋಚರಿಸಲಾರಂಭಿಸಿವೆ.

ಕುಮಟಾ-ಶಿರಸಿ ಮಾರ್ಗ ಮಧ್ಯದ ಸದಾ ಹಾಲ್ನೊರೆಯಂತ ಮೋಡಗಳಿಂದಾವ್ರತವಾಗಿರುವ ’ದೇವಿಮನೆ’ ಎಂಬಲ್ಲಿ ಸೆರೆಸಿಕ್ಕ ದೃಶ್ಯವಿದು.

******

ಕಾಲ ಬದುಕನ್ನು ನಡೆಸುತ್ತದೆ ಅಥವ ಕಾಲದೊಂದಿಗೆ ಬದುಕು ದಿನದಿನ ಹೊಸ ಮಗ್ಗುಲುಗಳನ್ನು ತೆರೆದುಕೊಳ್ಳುತ್ತ ಅಲ್ಲಲ್ಲಿ ತಿರುವು ಪಡೆದು ನಡೆಯುತ್ತದೆ. ಮರದ ಬೇರು ಭುವಿಯಡಿ ನೀರರಸುವಂತೆ ಹರಿಯುತದೆ ಮನ ಕಾಣದ ಕವಿತೆಯ ಒಡಗೂಡಿ. ದಾರಿ, ನೌಕೆ, ತಿರುವು, ರಸ್ತೆ ಮುಂತಾದ ಖಾಯಂ ಬಳಕೆಯ ಶಬ್ಧಗಳು ಖಾಲಿಯಾದಷ್ಟೂ ಮತ್ತೂ ಉದ್ರಿ ಸಿಗುತ್ತವೆ!

ದೋಣಿಸಾಗಲಿ ಮುಂದೆಹೋಗಲಿ..


ಊರ ನೆರೆಯ ಹೊಳೆಯಂತೂ ಮೈದುಂಬಿದೆ. ಬೆದರಿಸುವ ಮಣ್ಣುಗೆಂಪು ನೀರನ್ನು ಹುಟ್ಟಿನಿಂದ ಕದಡುತ್ತ ಈಚೆದಡದಿಂದ ಆಚೆಗೆ ಮತ್ತು ಆಚೆದಡದಿಂದ ಈಚೆಗೆ ಜನರನ್ನು ಸಾಗಿಸುವ ದೋಣಿಯವ ವಾಸ್ತವದಿಂದ ಅವಾಸ್ತವತೆಗೂ, ಮಾರ್ಮಿಕತೆಗೂ ಕೊಂಡೊಯ್ದುಬಿಡುತ್ತಾನೆ. ಮೋಹನ ಮುರಳಿಯ ಕರೆಗೆ ಓಗೊಟ್ಟು ಓಡೋಡಿ ಬರುವ ಹಸುಕಂದಮ್ಮಗಳಂತೆ ಅದೆಲ್ಲೋ ದೂರದ ಕಡಲ ಅಲೆಯ ನಾದಕೆ ಮನಸೋತು ಸೆಳೆಯುತ ಹರಿವ ಹನಿಹನಿ ಅಘನಾಶಿನಿ ದಡದುದ್ದಕ್ಕೂ ಜೀವನಾಡಿಯ ಮಿಡಿಸುತ್ತದೆ, ಬದುಕನ್ನು ತೊಟ್ಟಿಕ್ಕಿಸುತ್ತದೆ.

******

ತಾಜಾಮಳೆ ಮಿಂದ ದಾರಿಯ ಒದ್ದೆನೋಟ


ಭಾವುಕತೆಯ ಮಳೆಯಲಿಮಿಂದ ಬಯಲದಾರಿಗೆ ಒದ್ದೆನೋಟವೇ ಗತಿ!

******

— ರಾಘವೇಂದ್ರ ಹೆಗಡೆ

Advertisements

About ರಾಘವೇಂದ್ರ ಹೆಗಡೆ

Kannadiga, Techie, Passionate Poet/ Writer, Amateur photographer, Nature lover etc... iBlogs @ https://raganouke.wordpress.com

Posted on 14/07/2011, in ಚಿತ್ರ ತೀರ, ಲೇಖನ and tagged , , , , , . Bookmark the permalink. 2 ಟಿಪ್ಪಣಿಗಳು.

ಹೇಗಿದೆ ಹೇಳಿ!

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s