Category Archives: ಕಳಕಳಿ

ಭಯೋತ್ಪಾದನೆ ಮತ್ತು ಬದುಕು ಎಂಬ ಪಳೆಯುಳಿಕೆ.!


ನೆತ್ತರ ಹೊಳೆಯಲ್ಲಿ ಮಿಂದೆದ್ದು ಬರುತ ಪಾತಕ ಶಕ್ತಿ
ಜಗವ ಕಟ್ಟುವ ಬದಲು ನಶಿಸಲು ಬಳಸುತಿದೆ
ತನ್ನ ಅಮೂಲ್ಯ ಯುಕ್ತಿ,
ವರ್ಷಗಳೇ ಉರುಳಾಯ್ತು, ಕಾಲಘಟ್ಟಗಳ ಏರಿಳಿತ ಕಂಡಾಯ್ತು,
ದುಷ್ಟ ಶಕ್ತಿ ನಿರ್ನಾಮವಾಯ್ತು ಎಂದುಕೊಳ್ಳುತ್ತಿರುವಂತೆ
ಮತ್ತೆ ಮೈಕೊಡವಿ ನಿಲ್ಲುವ ಈ ರಾಕ್ಷಸರು, ರಾಕ್ಷಸತ್ವವು..

ರಕ್ತ ಬೀಜಾಸುರರಂತೆ ಬೆಳೆಯುತ ಗಲ್ಲಿಗಲ್ಲಿಗಳ ನಡುವಲ್ಲಿ
ಮರೆಯಲ್ಲಿ ಕಾರ್ಯಾಚರಿಸುವ ಮಹಾಪಾತಕಿಗಳು, ಭಯೋತ್ಪಾದಕರು..
ಅಮಾಯಕರ ರಕ್ತ ಹೀರಿ ಬದುಕುತ, ದರ್ಪ ಪ್ರದರ್ಶಿಸುತ
ಕಾಲಪರ್ವದಿ ತಮ್ಮ ಪರ್ವದ ಕೆಟ್ಟ ಛಾಪೊತ್ತುತ
ಪ್ರಕೃತಿಗೇ ಸವಾಲೆಸೆವವರು..

ಬೆದರಿಸಿ ಕದ್ದೊಯ್ದು, ಗಾಯದಮೇಲೆ ಬರೆಯೆಳೆದಂತೆ
ಹೇಯ ಅಮಾನುಷವ ಪ್ರದರ್ಶಿಸುವವರು
ಪ್ರಚೋದನೆಯ ಪುಂಗಿಯೂದುತ ಕಾಲಸರ್ಪವ
ಬಡಿದೆಬ್ಬಿಸುವರು, ಬೆಚ್ಚಿಬೀಳಿಸುವರು.!

ಮನುಜ ಪಥದಿ ಹೊರಟ ಬಂಡಿಯ ಅಲಗುಗಳ
ಅಲುಗಿಸುತ, ದುಷ್ಟಸಾಮರ್ಥ್ಯ ಹಿಗ್ಗುತಿದೆ;
ವಿಕೃತ ನಗೆಯ ಬೀರುತಿದೆ..
ರಕ್ಷಣೆಗೆ ತುಕಡಿಗಳ ನಿರೀಕ್ಷೆ, ಆದರಿಲ್ಲಿ
ಜೀವದ ಬೆಲೆಯ ತಕಡಿಗಳಲ್ಲಿಟ್ಟು ಅಳೆವ ಪರೀಕ್ಷೆ !
ಇದು ಮನುಕುಲದ ಅಂತ್ಯದ ಕುರುಹೆ..?

ಬೇಡವೆಂದರೂ ಕರೆದವರಂತೆ ಮನದಿ ಬಂದಡಗುವ ಭಯ
ಧೈರ್ಯದಿ ದುಷ್ಟರನೆದುರಿಸಲು ಮುನ್ನುಗ್ಗಿದರೂ
ಒಂದರೆಕ್ಷಣ ಹಿಂಜರಿವ ಸ್ಥೈರ್ಯ
ಅತ್ತ ಜೀವತೆಗೆದು ತಾನೂ ಅವಸಾನ ಕಾಣುವ
ಪ್ರೇತಜಾತಿಯ ಜೀವ ಎಂಬ ಪಿಡುಗು..!

ಪೈಶಾಚಿಕತೆಯ ವಿಶ್ವಕೇ ತೆರೆದಿಡುತ
ಭಯವ ಮೂಡಿಸುತ ದಿನದಿನ
ರಕ್ತ ಬೀಜಾಸುರರಂತೆ ಹುಟ್ಟಿಬೆಳೆವ
“ಭಯೋತ್ಪಾದಕ” ಸಂಘಟನೆಗಳು..
ಇದು ಮನುಕುಲದ ಅಂತ್ಯದ ಕುರುಹೇ..?!

* * * *

ಒಮ್ಮೆ ನೆನಪಿಸಿಕೊಳ್ಳಿ. ಎರಡು ವರ್ಷಗಳ ಹಿಂದೆ ಇದೇ ದಿನ…
ಭಯೋತ್ಪಾದನೆಯ ವಿಕೃತ ಮುಖ ನಗೆ ಬೀರಿದ್ದು, ಮುಂಬೈ ಹೊತ್ತಿ ಹೊಗೆಯಾಗಿದ್ದು…!

ಅದೆಷ್ಟೋ ಅಮಾಯಕ ಜೀವಗಳ ಬಲಿ ಪಡೆದಿದ್ದು..

ವಿಪರ್ಯಾಸ ನೋಡಿ; ಜೀವಂತ ಸೆರೆಸಿಕ್ಕ ಒಬ್ಬನೇ ಒಬ್ಬ ಪಾತಕಿ ಜೈಲಿನಲ್ಲಿ ಇಂದಿಗೂ ರಾಜಾಥಿತ್ಯವ ಅನುಭವಿಸುತ್ತಿದ್ದಾನೆ.
ಅದೆಷ್ಟೋ ಕೋಟಿ ಕೇವಲ ಅವನಿಗಾಗೇ ವ್ಯಯಿಸಲಾಗಿದೆ. ಛೆ..!
* * * *

ಆ ಧಾಳಿಯಲ್ಲಿ ಮಡಿದವರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ. ಮುಂದೆಂದೂ ಇಂತಹ ದುರ್ಘಟನೆ ಸಂಭವಿಸದಿರಲಿ. .

— ರಾಘವೇಂದ್ರ ಹೆಗಡೆ

ಚಿತ್ರ ಕೃಪೆ:
http://www.jeetscbce.wordpress.com
http://www.islandcrisis.net
http://www.srai.org
http://www.thehindu.com

Advertisements

ದೇಗುಲದ ಕಟ್ಟೆ ಆಗದಿರಲಿ ಹರಟೆಕಟ್ಟೆ


ಹಲವು ಬಾರಿ ಇಂತಹ ಸನ್ನಿವೇಶಗಳನ್ನು ನಾವೆಲ್ಲ ನೋಡಿರುತ್ತೇವೆ ಮತ್ತು ನೋಡುತ್ತೇವೆ.ಯಾವುದಾದರೂ ಪೂಜೆ ಅಥವಾ ದೇವಕಾರ್ಯ ನಡೆಯುತ್ತಿದೆ ಎಂದಿಟ್ಟುಕೊಳ್ಳಿ. ಸಾಮಾನ್ಯವಾಗಿ ಅರ್ಚಕರು ಮಂತ್ರಪಠಣ ಮಾಡುತ್ತ ಪೂಜಾಕಾರ್ಯಗಳಲ್ಲಿ ತೊಡಗಿರುತ್ತಾರೆ. ಆದರೆ ನೆರೆದವರಿಗೆ ಮಾತ್ರ ಹೊರಾವರಣ ಕೇವಲ ಹರಟೆಕಟ್ಟೆಯಾಗಿಬಿಡುತ್ತದೆ. ಹತ್ತಾರು ಜನರ ಗುಂಪು ನಿಧಾನವಾಗಿ ಪಿಸುಮಾತಿನಿಂದಾರಂಭಿಸಿ ತದನಂತರ ತಮ್ಮ ಸ್ವರವನ್ನು ತಾರಕಕ್ಕೇರಿಸುತ್ತಾರೆ. ಅಲ್ಲಿ ಚರ್ಚೆಯಾಗುವ ವಿಚಾರಗಳಂತೂ ಬಹಳ ವಿಭಿನ್ನವಾದವುಗಳು. ಅವರಿವರ ಅಕ್ಕಪಕ್ಕದವರ ವಿಷಯ, ಕೇರಿ, ಊರು, ರಾಜ್ಯ ರಾಜಕೀಯ, ರಾಷ್ಟ್ರೀಯ ವಿಚಾರಗಳು, ದಿಲ್ಲಿ ಪಾರ್ಲಿಮೆಂಟಿನಲ್ಲಿ ಚರ್ಚೆಯಾಗಬಹುದಾದ ಸಾಂಭಾವ್ಯ ವಿಚಾರಗಳು(!), ಅನಗತ್ಯ ಒಕ್ಕಣೆಗಳು, ವಿಡಂಬನೆಗಳು, ತಮ್ಮದೇ ಚಿಂತನೆಗಳು, ಲಹರಿಗಳು, ಆಲಾಪಗಳು, ಆರೋಪಗಳು, ದೂರುಗಳು, ಈರ್ಷ್ಯೆಗಳು, ಎದುರಿಗಿದ್ದವರ ಮೇಲೆ ಚುಚ್ಚು ಮಾತುಗಳು, ಕಾಲೆಳೆವ ಮಾತುಗಳು, ಚಾಡಿ, ಕುಹಕಗಳು, ಕೀಟಲೆಗಳು.. ಒಂದೇ ಎರಡೇ..?!
ಸುದ್ದಿಗೆ ವಿವಿಧ ಬಣ್ಣಬಣ್ಣದ ರೆಕ್ಕೆ ಪುಕ್ಕಗಳು ಬಂದು ಕೂಡ್ರುವದೂ ಅಲ್ಲೇ.! ತಾವಿರುವ ಜಾಗ ಯಾವುದು, ಎಲ್ಲಿ ಯಾವಮಾತನಾಡಬೇಕು ಎಂಬ ಕನಿಷ್ಟ ವಿವೇಚನೆಯೂ ಇರದವರಂತೆ ವರ್ತಿಸುವ ಇಂತಹ “ಭಕ್ತ”ರಿಗೆ, ಪೂಜೆ ಮಂಗಳಾರತಿ ಸಮಯದಲ್ಲಿ ಅರ್ಚಕರು ಅಥವಾ ಇನ್ಯಾರೋ ಕರೆದು ಈ ಲೋಕಕ್ಕೆ ಅವರನ್ನು ಬರಮಾಡಬೇಕು!
ಅಷ್ಟಕ್ಕೂ ಯಾವ ಘನಂಧಾರಿ ಪುಣ್ಯಕಟ್ಟಿಕೊಳ್ಳಲು ಈ ರೀತಿ ದೇಗುಲದಲ್ಲಿ ಹರಟಬೇಕು.?
ಅದೂ ಇಲ್ಲಸಲ್ಲದ ವಿಚಾರಗಳನ್ನು.!
ನಮ್ಮ ಅರಿವಿಗೇ ಬಾರದಂತೆ ಕೆಲವೊಮ್ಮೆ ನಾವೂ ಕೂಡ ಇಂತಹ ’ವಿಚಾರ ಘೋಷ್ಠಿ’ಗಳಲ್ಲಿ ಭಾಗವಹಿಸಿಬಿಡಬಹುದು! ಸಾಧ್ಯವಾದಷ್ಟೂ ಅವುಗಳನ್ನು ವಿರೋಧಿಸಬೇಕಿದೆ. ದೇವಸ್ತಾನದ ಶಿಸ್ತು, ಶಾಂತಿ, ಮಡಿ, ಪಾವೀತ್ರ್ಯತೆಗಳನ್ನು ಕಾಪಾಡಬೇಕಿದೆ.

ಅದು ಹಾಗಿರಲಿ. ನಾಳೆ (ಸೆ.೨೪) ಅಯೊಧ್ಯೆ ತೀರ್ಪು. ನಾವೆಲ್ಲ ಶ್ರೀರಾಮ ಜನ್ಮಭೂಮಿ ಎಂದು ನಂಬಿರುವ ಮತ್ತು ಆ ಬಗ್ಗೆ ಸಾಕಷ್ಟು ಪುರಾವೆಗಳಿರುವ ಆ ಪುಣ್ಯ ಭೂಮಿ ಅಯೊಧ್ಯೆಯಲ್ಲಿ ಮತ್ತೆ ರಾಮಮಂದಿರ ತಲೆ ಎತ್ತಲಿ ಎಂಬುದೇ ನಮ್ಮೆಲ್ಲರ ಆಶಯ.

ಜೈ ಶ್ರೀ ರಾಮ್.

ವಂದೇ ಮಾತರಂ .., ಜೈ ಹಿಂದ್ ..


ಜಗದ ಒಡಲಲಿ ಶಾಂತಿಯ ಆತ್ಮದೀಪ
ಬೆಳಗಿ ಹರಡುತ ವೈವಿಧ್ಯತೆಯ ವಿಶಾಲ ರೂಪ.,
ಸಂಸ್ಕೃತಿ, ಸಂಸ್ಕಾರಗಳ ಅರ್ಥ ಮಹತ್ವತೆಗಳ ವಿಶ್ವಕೆ ಸಾರಿ
ಸನ್ನಡತೆಯ ಪ್ರತಿಜೀವದ ಕಣಕಣದಿ ಬೀರಿ
ಶ್ರದ್ದೆ, ಭಕ್ತಿ, ಧನ್ಯತಾ ಭಾವವ ರಕ್ತಕೆ ಬೆರೆಸಿ,
ತೋರುತ ಮುನ್ನಡೆಯ ದಾರಿ..
ಪಾವೀತ್ರ್ಯತೆಯ ಸಂಮೊಹಿಸು ಪ್ರತಿಮನಕೆ
ಮಾತೆ ನೀ ತ್ರಿವರ್ಣ ಧ್ವಜದೊಳು ಅವತಾರಿಯಾಗಿ.
ವಂದೇ ಮಾತರಂ….

—————-

ಸುಮಾರು ೧೬೫೨ ವಿಭಿನ್ನ ಭಾಷೆಗಳನ್ನು ಹೊಂದಿರುವ, ವಿವಿಧ ಧರ್ಮ, ಜನಾಂಗದ ಜನ ನೆಲೆಸಿರುವ, ಅನೇಕ ಪ್ರಾಕೃತಿಕ ವೈಶಿಷ್ಟ್ಯಗಳನ್ನು ತನ್ನೊಡಲಲ್ಲಿಟ್ಟುಕೊಂಡಿರುವ ವಿಶ್ವದ ಏಕೈಕ ರಾಷ್ಟ್ರ ನಮ್ಮ ಭಾರತ.

ದೇಶ ಸಾಂಸ್ಕೃತಿಕವಾಗಿ ಬಲಿಷ್ಟವಾಗಿದ್ದರೂ ಈಗೀಗ ನಮ್ಮಲ್ಲಿ ಪಾಶ್ತಾತ್ಯ ಅನುಕರಣೆ ಜಾಸ್ತಿಯಾಗುತ್ತಿದೆ. ವೋಟ್ ಬ್ಯಾಂಕ್ ರಾಜಕೀಯ ದೇಶವನ್ನು ಅರಾಜಕತೆಗೆ ತಳ್ಳುತ್ತಿದೆ. ಸಂಸತ್ ಮೇಲೆ ಧಾಳಿ ಮಾಡಿದ ಅಪ್ಜ್ಹಲ್ ಗುರು, ಮುಂಬೈ ಧಾಳಿಯಲ್ಲಿ ಸಿಕ್ಕಿಬಿದ್ದ ಪಾತಕಿ ಕಸಬ್, ಇಂತವರಿಗೆಲ್ಲ ಜೈಲಿನಲ್ಲಿ ರಾಜಾತಿಥ್ಯ
ನಡೆಯುತ್ತಿದೆ.!ಈಗಂತೂ ಮೊಬೈಲ್ ಸಿಮ್ಮುಗಳು ಕಾಳಸಂತೆಯಲ್ಲಿ ಬೇಕಾಬಿಟ್ಟಿ ಸಿಗುತ್ತಿವೆ.ಇನ್ನು ಆಹಾರ ಪದಾರ್ಥ ,ಪೆಟ್ರೋಲ್ , ಮತ್ತಿತರ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಜನಸಾಮಾನ್ಯರ ಬದುಕು ದುಸ್ತರವಾಗುತ್ತಿದೆ.

ಅಲ್ಲಿ ಸಿಯಾಚಿನ್ ನಂತ ದುಸ್ತರ ಪ್ರದೇಶದಲ್ಲಿ ಮೈಚಳಿ ಬಿಟ್ಟು ಗನ್ನು ಹಿಡಿದು ತಿರುಗುವ ಯೋಧನ ಬಾಳಿಗೆ ಸಮರ್ಪಕ ಸೌಲಭ್ಯ, ಭದ್ರತೆ ಇಲ್ಲವಾಗಿದೆ. ಇನ್ನು ದೇಶಕ್ಕೆ ಪ್ರಾಣ ಸಮರ್ಪಿಸಿದ ಅನೇಕ ಯೋಧರ ಕುಟುಂಬಕ್ಕೆ ಪರಿಹಾರವೆಂಬುದು ಮರೀಚಿಕೆಯಾಗಿಬಿಟ್ಟಿದೆ.!

ಸಂಸ್ಕ್ರತಿ, ಧರ್ಮ, ವೇಷ, ಭಾಷೆ,ಜನಾಂಗ, ಹೀಗೆ ವೈವಿಧ್ಯತೆಗಳ ತವರು ಈ ನಮ್ಮ ಮಾತೃಭೂಮಿ. ಇದರ ಮೇಲೆ ಶೃದ್ಧೆ, ಕಳಕಳಿ, ಇಲ್ಲಿನ ಹಾಗೂ ಪ್ರಪಂಚದ ಮೂಲೆಮೂಲೆಯಲ್ಲಿ ನೆಲೆಸಿರುವ ಪ್ರತಿಯೊಬ್ಬ “ಭಾರತೀಯ”ನ ಮನದಾಳದಲ್ಲಿ ನೆಲೆಯಾಗಲಿ.ಧರ್ಮ, ಸಂಸ್ಕ್ರತಿ , ಸಂಸ್ಕಾರ, ಶಾಂತಿ, ಪ್ರೀತಿ ಮುಂತಾದ ಪದಗಳಿಗೆ ಸಮಾನಾರ್ಥವಾಗಿ ಅಭ್ಯುದಯವಾಗುತ್ತ, ಭಾರತ ನಿಜವಾಗಿಯೂ ಪ್ರಕಾಶಿಸಲಿ.

ದೇಶ ಕಾಯುವ ಯೋಧರಿಗೆ ನಮಿಸೋಣ.
“ಸರ್ವರಿಗೂ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.”
ಜೈ ಹಿಂದ್..

———-

ಲಾಸ್ಟ್ ಲೈನ್: “ನೀರಬಣ್ಣ” ದಲ್ಲಿ ಒಂದೆರಡು ಚಿತ್ರಗಳು ಮೌನವಾಗಿ ಮಾತನಾಡುತ್ತಿವೆ.! ಅವುಗಳನ್ನೊಮ್ಮೆ ನೋಡಿಬನ್ನಿ.
ಇಂತಿ
ರಾಘವೇಂದ್ರ ಹೆಗಡೆ

Our National Animal is fighting for its life! ಹುಲಿಗಳನ್ನು ರಕ್ಷಿಸಿ : ಹೀಗೊಂದು ಕಳಕಳಿ


ಆತ್ಮೀಯರೇ,
ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿಯ ಸಂತತಿ ಅಳಿವಿನ ಅಂಚಿನಲ್ಲಿದೆ. ಇತ್ತೀಚಿನ ಗಣತಿಯ ಪ್ರಕಾರ ಭಾರತದಲ್ಲಿನ ಒಟ್ಟು ಹುಲಿಗಳ ಸಂಖ್ಯೆ 1411.

From around 40,000 at the turn of the last century, there are just 1411 tigers left in India . What started as a Royal Sport during the olden times is now a target of Poaching and Depleting Habitat. Our National Animal is fighting for its life!

From around 40,000 tigers at the turn of the last century, there are just 1411 tigers left in India .
2009 was the worst year for tigers in India , with 86 deaths reported.
There are 37 Tiger sanctuaries in India . However, 17 sanctuaries are on the verge of losing their tiger population.
Corbett National Park is the oldest tiger park in India . It was created in 1936 as ‘ Hailey National Park ’.

ನಾವೆಲ್ಲರೂ ಅವಶ್ಯ ತಿಳಿಯಲೇ ಬೇಕಾದ ಈ ವಿಷಯನ್ನು ನನ್ನ ಬ್ಲಾಗಿನಲ್ಲೂ ಬರೆಯಬೇಕು ಅನಿಸಿತು. ಹಾಗಾಗಿ ಹೀಗೊಂದು ಕಳಕಳಿ.

ಈ ಎಲ್ಲ ಚಿತ್ರಗಳನ್ನು ಕ್ಲಿಕ್ಕಿಸಿದವರಿಗೂ ಹಾಗೂ ನನಗೆ ಅವುಗಳನ್ನು ಕಳುಹಿಸಿದ ನನ್ನ ಸ್ನೇಹಿತ Joysun d souza ಅವರಿಗೂ ನನ್ನ ಕೃತಜ್ಞತೆಗಳು.

ಚಿತ್ರ/ಮಾಹಿತಿ ಕೃಪೆ : www.saveourtigers.com

ನಿಸರ್ಗದ ಈ ಕೂಗು ನಮಗೆ ಕೇಳುವುದೆಂದು……..?!


ನಿನ್ನ ಹೊರೆಯ ಭಾರ ಇಳಿಸುವ ಸನ್ನಾಹದಿ ನಾನು..
ಆದರೆ..? ನನ್ನನೇ ಜರೆಯುತ್ತ ನಿನ್ನ ತಲೆಗೇ ಅದರ
ಸುತ್ತಿಕೊಳ್ಳುವ ದುಸ್ಸಾಹಸದಿ ನೀನು…..!
ಹೇಳು ಅವಸಾನದ ಬಗ್ಗೆ ನಿನಗೇನು ಗೊತ್ತು.,
ನಾನಿರದಿರೆ ನೀನೂ ಇರಲಾರೆ ಒಂದು ಕ್ಷಣಿಕ ಹೊತ್ತೂ.!

ಮಾತು ಬಾರದು ಎನಗೆ ಎಂದು ಏನೂ ಅರಿಯಲಾರೆ ನಾನು
ಎಂದೆಲ್ಲ ಎಣಿಸಬೇಡ….
ಧೂಮ ಸೇದಿ ಬಿಡುತ, ಕುಡಿದು ಕಂಡಕಂಡಲ್ಲಿ ಬಾಟಲಿ ಬಿಸುಟಿ
ನನ್ನ ಕೆಡಿಸುತಿಹ ನಿನ್ನ ಚೆನ್ನಾಗಿ ನಾ ಬಲ್ಲೆ..
ಹೇಳಲಾಗದು ಎನಗೆ ಎಂದೂ ಅಭಿಪ್ರಾಯಿಸದಿರು,
ಕಾಲಕಾಲಕೆ ಕಾಲನೊಡೆ ಸೇರಿ ನಾನು ಮರುತ್ತರವ ನಿನಗೆ ಕೊಡುತಿಹೆ..

ನೋಡು ನೀನೊಬ್ಬನೇ ಅಲ್ಲ ನನ್ನ ಮಡಿಲಲಿ ಇರುವವ..
ವ್ಯಾಘ್ರ, ಸಿಂಹ,ಕಾಗೆ,ನವಿಲು, ಕೋಗಿಲೆ,ಗಂಧ, ಹೊನ್ನೆ,ಬೇವು, ಜಾಲಿ..
ಹೀಗೆ ಕೋಟ್ಯಂತರ ವಿಧದ ಜೀವಗಳಿವೆ..,
ಅವನ್ನೆಲ್ಲ ನಾನೇ ಸಾಕಬೇಕು.
ನನ್ನ ಅಳಲ ಅರ್ಥೈಸಿಕೊ,
ಸಿಕ್ಕಸಿಕ್ಕಲ್ಲಿ ಪ್ಲಾಸ್ಟಿಕ್ ನ ತೂರಬೇಡ,
ಕಂಡಕಂಡಲ್ಲಿ ನೀರು ಗಾಳಿಯ ಕೆಡಿಸಬೇಡ.
ಇರಲಿ ಒಂದಷ್ಟು ಪಾವಿತ್ರ್ಯತೆ ಅದಕ್ಕೆ….!

ನೀನಂತೂ ‘ಆಚಾರ’ ‘ಸಂಸ್ಕಾರ’ ಎಂಬ ಪದಗಳ ಅರ್ಥ ಮರೆತಿರಬಹುದು..
ಆದರೆ ನನಗೆ ಒಂದಷ್ಟು ಸಂಸ್ಕಾರವಿದೆ, ಆಚಾರವಿದೆ..
ನಿನಗೆ ಉತ್ತರ ಕೊಡಲು ಅದನ್ನೆಲ್ಲ ನಾ ಮರೆಯುವಂತೆ ಮಾಡಬೇಡ.!
ನೋಡು ಇದು ನಿನಗೆ ನನ್ನ ವಿನಂತಿ ಎಂದಿಟ್ಟುಕೊ,
ಹೀಗೆ ನನ್ನ ಮೇಲೆ ನೀ ಕಂಡಕಂಡದ್ದನ್ನು ಎರಚಿ ಹರಿಹಾಯ್ದರೆ
ನಿನ್ನ ಮೇಲಿನ ಅದರ ಪರಿಣಾಮವ ಅರಿಯುವೆ ನೀ ಶೀಘ್ರದಲ್ಲೇ..

ನನಗಂತೂ ಯಾರನ್ನೂ ನೋಯಿಸುವ ಇರಾದೆಯಿಲ್ಲ.
ಯಾಕೆಂದರೆ “ನಿನ್ನಂತಲ್ಲ ನಾನು…….!”
ಇಲ್ಲಿಯ ಸಕಲವ ಪೊರೆಯುವ ನನ್ನ ಜವಾಬ್ದಾರಿಯ
ಸಂಪೂರ್ಣವಾಗಿ ನಾ ಬಲ್ಲೆ,
ಸುಮ್ಮನೆ ಕೆಣಕಿ ನನ್ನ ತಾಳ್ಮೆ ಪರೀಕ್ಷಿಸದಿರು.
ಮಗುವಂತೆ ನನ್ನ ಮಡಿಲಲ್ಲಿಟ್ಟು ನಿನ್ನ ಸಲಹುವೆ..

ನೋಡು, ಆದರೂ ಕಡೆಯ ಮಾತೊಂದ ಕೇಳು..
ನನ್ನ ಇಷ್ಟೂ ಮಾತುಗಳಿಗೆ ನೀ ಕಿವಿಗೊಡದಿರೂ
‘ಅರಿಯದ ಮಗು’ ಎಂದು ನೀನಿರುವಷ್ಟು ದಿನ ನಿನ್ನ ಸಾಕುವೆ.
ಆ ಬಗ್ಗೆ ಏನೂ ಚಿಂತಿಸದಿರು….!
ಯಾಕೆಂದರೆ ಮೊದಲೇ ಹೇಳಿರುವೆನಲ್ಲ “ನಿನ್ನಂತಲ್ಲ ನಾನು…..!”

*****
ನಿಸರ್ಗದ ಮೌನ ಪ್ರತಿಕ್ರಿಯೆಗೆ ಶಬ್ದ ಬೆಸೆವ ಒಂದು ಪುಟ್ಟ ಪ್ರಯತ್ನ ಈ ಕಳಕಳಿ.
–ರಾಘವೇಂದ್ರ ಹೆಗಡೆ
*****