Category Archives: ಮಿಸ್ ಮೈ ಕಾಲೇಜ್ ಡೇಸ್

Article about my college life

ನೆನಪ ಪುಟದಿಂದೆದ್ದುಬಂದ ತಿರುಗಿ ಬಾರದ ಕ್ಷಣಗಳು!


ಸಪ್ಟೆಂಬರ್ 25, 2006 ನಸುಕಲ್ಲಿ ಎದ್ದು ಪಟಪಟನೆ ಅಣಿಯಾಗಿ, ದೇವರಮುಂದೆ ತೆಂಗಿನಕಾಯಿ ಇರಿಸಿ, ಹಿಂದಿನ ದಿನವಷ್ಟೇ ಬೆಂಗಳೂರಿನಿಂದ ಬಂದಿಳಿಯುವಾಗ ಜತೆಗಿದ್ದ, ಬೆನ್ನು ಹುರಿಯನ್ನು ಬಾಗಿಸಿಬಿಡಬಹುದಾದಷ್ಟು ಭಾರವಾಗಿದ್ದ ಬ್ಯಾಗನ್ನು ಯಥಾಸ್ಥಿತಿಯಲ್ಲಿ ಹೊತ್ತು ತಂದೆಯ ಜೊತೆ ಹೊರಟು ನಟ್ಟನಡು ಮಧ್ಯಾನ್ಹ ಮೂಡ್ಲಕಟ್ಟೆ ತಲುಪಿದ ಕ್ಷಣಗಳು ಕಣ್ಣೆದುರು ಈಗಲೂ ಸ್ಪಷ್ಟವಾಗಿ ಬಂದು ನಿಲ್ಲುತ್ತವೆ. ಹಾಗೆಯೇ ಯಾವುದೋ ಹಳ್ಳಿಯ ರಸ್ತೆಗಳಂತೆ ಕಾಣುತ್ತಿದ್ದ ಏನ್.ಎಚ್., ದೊಡ್ಡ ದೊಡ್ಡ ಗುಂಡಿಗಳಿಂದ ತುಂಬಿದ್ದ ಎಸ.ಎಚ್. 52 ಕೂಡ.

ಬಣ್ಣ ಮಾಸಿ ಹಳೆಯ ಬಿಲ್ಡಿಂಗ್ ನಂತೆ ಕಾಣುತ್ತಿದ್ದ ಕಾಲೇಜು, ಉದ್ದದ ರೈಲಿನಂತೆ ಭಾಸವಾಗುತ್ತಿದ್ದ ಹಾಸ್ಟೆಲ್, ಅಪರಿಚಿತ ಮುಖಗಳು, “ಹ್ವಾಯ್, ಒಂಚೂರ್ ಕೂಕಣಿ ಕಾಂಬ..” ಎಂದು ಬಹುತೇಕ ಇಲ್ಲಿನ ಎಲ್ಲರ ಬಾಯಿಂದಲೂ ಉದುರುತ್ತಿದ್ದ ಸಾಮಾನ್ಯ ಉಕ್ತಿ, ಹೀಗೆ ಆರಂಭದಲ್ಲಿ ಎಲ್ಲ ಹೊಸತು, ಹೊಸತು..ಕಾಲೇಜು ಮುಗಿಸಿ ಹಾಸ್ಟೆಲ್ ಗೆ ಬರುತ್ತಿದ್ದಂತೆ ಒಂದೇ ಚಿಂತೆ, ಯಾವಾಗ ಶನಿವಾರ ಬರುತ್ತದಪ್ಪ.. ಅಷ್ಟರಮಟ್ಟಿಗೆ ಮನಸ್ಸು ಹೋಮ್ಸಿಕ್.

ಆಮೇಲೆ ಒಂದು ತಿಂಗಳೊಳಗೆ ಇಂಟರ್ನಲ್, ಮೂರುವರೆ ತಿಂಗಳಿಗೆ ಸೆಮ್ ಎಗ್ಸಾಮ್ಸ್ ಸ್ಟಾರ್ಟ್. ನಿಧಾನವಾಗಿ ಹೊಸಮುಖಗಳ ಪರಿಚಯವಾಗುತ್ತ, ಅಳುಕು ಮರೆಯಾಗುತ್ತ, ಮೆಲ್ಲನೆ ಹಾಸ್ಟೆಲ್ ಬದುಕಿಗೆ ಹೊಂದಿಕೆಯಾಗುತ್ತ ಮುಗಿದ ಮೊದಲ ಸೆಮಿಸ್ಟರ್. ಹಾಗೆ ಗತಿಸಿದ ಆರಂಭದ ದಿನಗಳು ಈಗ ಸುಮಾರು ಹತ್ತಿರಹತ್ತಿರ ನಾಲ್ಕು ವರ್ಷ ಹಿನ್ನಡೆದಿವೆ.

ಕಾಲೇಜು ಬಣ್ಣ, ಎದುರಿನ ಸ್ವರೂಪ, ಪ್ರಾಂಶುಪಾಲರು, ಹಾಸ್ಟೆಲ್ ವಾರ್ಡನ್, ಇವೆಲ್ಲದರಲ್ಲಿ ಈ ನಾಲ್ಕು ವರ್ಷದಲ್ಲಿ ಅನೇಕ ಬದಲಾವಣೆಗಳಾಗಿವೆ. ಸನಿಹದ ಕುಂದಾಪುರ ಪಟ್ಟಣವೂ ಕೂಡ ಬದಲಾವಣೆಯಿಂದ ಹೊರತಾಗಿಲ್ಲ. ಶಾಸ್ತ್ರಿಪಾರ್ಕ್ ನಿಂದ ಪ್ರೈವೇಟ್ ಬಸ್ ಸ್ಟ್ಯಾಂಡ್ ವರೆಗೂ ಸಣ್ಣ ದೊಡ್ಡ ಗುಂಡಿಗಳನ್ನೇ ತನ್ನೊಳಗಿಟ್ಟುಕೊಂಡು, ಏನ್.ಎಚ್.ನಿಂದ ಎಡತಿರುವಿ ಶರವೇಗದಲ್ಲಿ ನಾಮುಂದೆ, ತಾಮುಂದೆ ಎಂದು ನುಗ್ಗುತ್ತಿದ್ದ ದುರ್ಗಾಂಬಾ, ಎ.ಪಿ.ಎಂ. ಬಸ್ ಗಳಿಗೆ ರಾಜಮಾರ್ಗವಾಗಿದ್ದ ಟಾರುರೋಡು, ಈಗ ಸಿಮೆಂಟ್ ರಸ್ತೆಯಾಗಿ ಮಾರ್ಪಟ್ಟಿದೆ. ಗಾಂಧೀಮೈದಾನ, ರಾಷ್ಟ್ರೀಯ ಹೆದ್ದಾರಿ, ಕುಂದಾಪುರ-ಬಸ್ರೂರು-ಸಿದ್ದಾಪುರ ರಾಜ್ಯಹೆದ್ದಾರಿ, ಮೂಡ್ಲಕಟ್ಟೆಯಲ್ಲೇ ಇರುವ ಕುಂದಾಪುರ ರೈಲು ನಿಲ್ದಾಣ ಇವೆಲ್ಲವೂ ಒಂದಷ್ಟು ಪ್ರಗತಿಯ ಕಂಡಿದೆ.

ಇನ್ನು ಕುಂದಾಪುರದಲ್ಲಿ ಯಾವುದೇ ವಸ್ತುವನ್ನು ಖರೀದಿಸಲು ಹೋದರು ‘ಚೌಕಾಸಿ’ ಎಂಬ ಪದವ ಮರೆತೋ ಇಲ್ಲ ಮನೆಯಲ್ಲೇ ಬಿಟ್ಟೋ ಹೋಗಬೇಕು. ಹೋಟೆಲ್ ಗೆ ಹೋಗುವ ಮುನ್ನ ಜೇಬು ಸಾಕಷ್ಟು ಭರ್ತಿಯಾಗಿರುವ ಬಗ್ಗೆ ಖಾತ್ರಿಯಿರಬೇಕು.

ಇಲ್ಲಿನ ಹೆಚ್ಚಿನ ಜನರೆಲ್ಲಾ ಸಹೃದಯಿಗಳು, ಸ್ನೇಹ ಜೀವಿಗಳು. ನನಗೆ ತಿಳಿದಂತೆ ಇಲ್ಲಿನ ಅನೇಕರದು ಹೋಟೆಲ್ ಉದ್ಯಮ.

ನಮ್ಮ ಹವ್ಯಕ ಕನ್ನಡದಲ್ಲಿರುವ “ಇಲ್ಲೆ”, “ಬತ್ತೆ”, ಮುಂತಾದ ಪದಗಳು “ಕುಂದಾಪ್ರ ಕನ್ನಡ”ದಲ್ಲೂ ಇವೆ. ಆದರೆ ಉಚ್ಚಾರ ಶೈಲಿ ಸ್ವಲ್ಪ ಭಿನ್ನ. ಆರಂಭದಲ್ಲಿ ಅರ್ಥವಾಗಲು ಸ್ವಲ್ಪ ಕಷ್ಟವಾಗುತ್ತಿದ್ದ ಈ ಭಾಷೆ ಈಗ ಸರಾಗವಾಗಿ ನನ್ನ ಬಾಯಿಂದ ಬರುವಷ್ಟು ಮನಸ್ಸಿಗೆ ಹತ್ತಿರವಾಗಿದೆ.ಮೊದಲು ಅಪರಿಚಿತರಾಗಿದ್ದ ಅನೇಕರು ಅದರಲ್ಲೂ ವಿಶೇಷವಾಗಿ ನನ್ನ ಹಾಸ್ಟೆಲ್ ಸಹಪಾಠಿಗಳು ಈಗ ಮನೆಮಂದಿಯಂತಾಗಿಬಿಟ್ಟಿದ್ದಾರೆ.

ಕಾಲ ಕೆಲವಷ್ಟನ್ನು ಕಲಿಸಿದೆ. ನನ್ನೊಳಗಿನ ಬರಹಗಾರನನ್ನು ಆಗಾಗ ಎಚ್ಚರಿಸುತ್ತ ಒಂದಷ್ಟು ಜೀವನಪಾಠಗಳನ್ನೂ ಹೇಳಿಕೊಟ್ಟಿದೆ. ಈ ಪ್ರಶಾಂತ ಹಳ್ಳಿಯ ವಾತಾವರಣದ ಸಂಜೆಯ ತಂಪಿನ ಗಾಳಿ, ದೂರದಲ್ಲಿ ಗೋಚರಿಸುವ ಸೂರ್ಯಾಸ್ತ, ಇವೆಲ್ಲ ನನಗೆ ಸಾಕಷ್ಟು ಪ್ರೇರಣೆ ನೀಡಿವೆ. ಆದರೆ ಈ ಎಲ್ಲ ಪರಿಸರವ ಬಿಟ್ಟು ಹೋಗುವ ಸಮಯ ಸನಿಹವಾಗಿಬಿಟ್ಟಿದೆ. ಇನ್ನು ನಾಲ್ಕೈದು ದಿನಗಳಲ್ಲಿ ನನ್ನ ಇಂಜಿನಿಯರಿಂಗ್ ಓದು(B.E) ಸಮಾಪ್ತಗೊಳ್ಳುತ್ತಿದೆ.

ಇಲ್ಲಿಗೆ ಬರುವಾಗ ತಂದೆಯವರ ಜೊತೆ ಬಂದಿದ್ದೆ. ಆದರೆ ಅದೇ ಕಾಲವೆಂಬ ಮೋಹನ ಮುರಳಿ ಅವರನ್ನು ತನ್ನೆಡೆಗೆ ಸೆಳೆದು ಅದಾಗಲೇ ವರ್ಷ ಗತಿಸಿಹೋಗಿದೆ. ಆದರೂ ಇಂದಿಗೂ ನನ್ನ ಮನಪಟಲದಲ್ಲಿ ಮುಗುಳ್ನಗುತ್ತ ಬಂದು ನಿಂತು ಉತ್ತೇಜಿಸುವುದು, ನನ್ನ ಕಣ್ಣಾಲಿಗಳನ್ನು ತುಂಬುವುದು ಅವರ ಪ್ರೇರಣೆಯೇ. ಹೀಗೆ ಕಾಲೇಜು ಪಾಠಗಳ ಜೊತೆ ಬದುಕಿನ ಕೆಲ ಆಯಾಮಗಳನ್ನು ನೋಡುತ್ತ ಪದವೀಧರನಾಗುತ್ತಿದ್ದೇನೆ.
* *
ಮೊನ್ನೆ ಮೊನ್ನೆ ಬಂದಂತೆ ಭಾಸವಾಗುತಿದೆ ಇಲ್ಲಿ.
ಶಬ್ದ ಹೊರಡಲಾಗದೆ ಮನದಿ ತಡವರಿಸಿದಲ್ಲಿ..
ಅದೆಷ್ಟು ಬೇಗ ಸಾಗಿಬಿಟ್ಟಿತು ಕಾಲ ಬಾಳನೌಕೆಯಲ್ಲಿ..!
ನೆನಪಲ್ಲದೆ ಮತ್ತೇನುಳಿವುದು ಈ ಎದೆಯಲ್ಲಿ …?
* *
ನಾವೆಲ್ಲಾ ಸ್ನೇಹಿತರೊಡಗೂಡಿ ಸನಿಹದ ಕೋಡಿಬೀಚ್ ಗೆ ಹೋಗಬೇಕೆಂದಿದ್ದ ನಮ್ಮ ಯೋಜನೆಯ ಹೊಸಕಿಹಾಕಿ, ನಮ್ಮನ್ನು ಹಾಸ್ಟೆಲ್ ನಲ್ಲೆ ಉಳಿಸಿ, ಸಂಜೆ ಐದರಿಂದ ಕವಿದಿದ್ದ ದಟ್ಟಕಾರ್ಮೋಡ, ಈಗ ಸುಮಾರು ಒಂದೂವರೆ ತಾಸುಗಳ ನಂತರ ತಂಗಾಳಿಗೊಲಿದು ದೂರ ಹಾರುವ ಮುನ್ನ ನಾಲ್ಕು ಹನಿಗಳ ಚೆಲ್ಲುತ್ತ ಮತ್ತೆ ನಭವ ತಿಳಿಗೊಳಿಸುತ್ತಿದೆ. ದೂರದ ಕೊಡಚಾದ್ರಿಯ ಮುಗಿಲ್ಚುಂಬಿ ಪರ್ವತಗಳು ನೀಲವರ್ಣದಿ ಗೋಚರಿಸುತ್ತಿವೆ. ಇತ್ತ ಪಡುವಣದಿ ರವಿ ಕಡಲ್ಸ್ಪರ್ಶಿಸುತ್ತಿದ್ದಾನೆ. ನೂರು ಸಾಲಲಿ ಹಾರುತ ಹಕ್ಕಿಗಳೆಲ್ಲ ಗೂಡೆಡೆ ಸಾಗುತ್ತಿವೆ. ನಮ್ಮ ಕುಮಟಾ ಕಡೆಯಿಂದ ಪ್ಯಾಸೆಂಜರ್ ರೈಲು ಈಗತಾನೆ ಆಗಮಿಸುತ್ತಿದೆ. ಬೀದಿದೀಪಗಳು ಹೊತ್ತಿಕೊಳ್ಳುತ್ತಿವೆ. ದೂರದಲ್ಲಿ ಗೋಚರಿಸುವ ಬಾಗಿಲ ಬಳಿಯ ದೀಪಗಳು ಗೋಧೋಳಿಯನ್ನು ಗೌರವದಿ ಬರಮಾಡುತ್ತಿವೆ.

ಕೋಡಿಗೆ ಹೋಗದಂತೆ ನನ್ನ ಹಾಗು ನನ್ನ ಸ್ನೇಹಿತರನ್ನು ಕಟ್ಟಿಹಾಕಿದ್ದ ಕಾರ್ಮೋಡದ ನೆರಳು-ಬೆಳಕಿನಾಟ, ತಂಗಾಳಿಯೊಂದಿಗೆ ಬೆರೆತು ಶುಷ್ಕವಾಗಿದ್ದ ಈ ಮನದಲ್ಲಿ ನೆನಪ ಹನಿಗಳನ್ನು ಜಿನುಗಿಸುತ್ತಿದೆ.ಬರಿಯ ಮನದ ಪುಟದ ಮೇಲೆ ಮಾತ್ರವಲ್ಲ. ಈ ಪುಟದ ಮೇಲೂ ಕೂಡಾ..!

–ರಾಘವೇಂದ್ರ ಹೆಗಡೆ

Advertisements