Category Archives: ಹನಿಗತೆ

one/two lines stories written by Raghavendra Hegde

ಆಗುತ್ತದೆ ಹೀಗೂ…


೧. ನಡುಮಧ್ಯಾಹ್ನ ಸುಡುಬಿಸಿಲಲ್ಲಿ ಸೈಕಲ್ ತುಳಿಯುತ್ತ ಬಂದು ಡಜನುಗಟ್ಟಲೆ ಎಫ಼್.ಡಿ. ಸೆರ್ಟಿಫಿಕೇಟುಗಳನ್ನು ನವೀಕರಿಸಲು ಬ್ಯಾಂಕಿಗೆ ಕೊಡುವ ಎಪ್ಪತ್ತರ ವ್ಯಕ್ತಿಯನ್ನು ನೋಡುತ್ತ ಬದುಕಿನ ಬಗ್ಗೆ ವಿಪರೀತ ಹೆಮ್ಮೆ, ವ್ಯಾಮೋಹ, ಅಭಿಮಾನ ಪಡುತ್ತಲೆ ನಾನು ಬೈಕಿಗೆ ಪಕ್ಕೆಹೊಡೆಯುತ್ತೇನೆ; ಆಗೊಮ್ಮೊಮ್ಮೆ ನ್ಯೂಟನ್ನನ ಮೂರನೇ ನಿಯಮ ಎಂಜಿನ್ ನ ಬದಲು ನನ್ನಮೇಲೆ ಅನ್ವಯವಾಗಿಬಿಡುತ್ತದೆ.

೨. ಪ್ಲಾಸ್ಟಿಕ್ ಬಳಕೆ ನಿಷೇಧಿಸಿ – ಪರಿಸರ ಉಳಿಸಿ ಎಂಬೆಲ್ಲ ಘೋಷಣೆ-ಜಾಗ್ರತಿಗಳಿಗೆ ತಲೆದೂಗುತ್ತಲೆ ನಂದಿನಿ ಶಾಪಿನವನ ಬಳಿ ’ಹಾಲಿನ ಪ್ಯಾಕೆಟ್ಗೊಂದು ಪ್ಲಾಸ್ಟಿಕ್ ಕವರ್ ಹಾಕಿಕೊಡಪ್ಪ’ ಎಂದು ಆಗ್ರಹಿಸುವ ನನ್ನ ಧೋರಣೆಗೆ ಧಿಕ್ಕಾರವಿರಲಿ.

೩. ಬದುಕಿನ ಅನುಭವಗಳಿಗೆಲ್ಲ ಪದವಿ ಕೊಡುವ ವಿಶ್ವವಿದ್ಯಾಲಯವೊಂದಿದ್ದರೆ ಅರ್ಜಿ ಗುಜರಾಯಿಸಿಬಿಡಬಹುದಿತ್ತು ಎಂದು ’ಅಡ್ವಾನ್ಸ್ಡ್ ಅಲ್ಗಾರಿದಮ್ಸ್’, ’ಫಾರ್ಮಲ್ ಮಾಡೆಲ್ಸ್’ ಮುಂತಾದ ವಿಚಿತ್ರ-ವಿಚಿತ್ರ ಹೆಸರಿನ ತರ್ಕಕ್ಕೆ ನಿಲುಕದ ವಿಷಯಗಳನ್ನು ಓದುವಾಗ ಹಲವು ಬಾರಿ ಅನಿಸುವುದಿದೆ.

೪. ಅರೆವಾಹಕ, ಉಷ್ಣವಾಹಕ, ವೇಗವರ್ಧಕ, ಸಂಸ್ಕಾರಕ, ಸಂಗ್ರಾಹಕ, ಕಾರ್ಯನಿರ್ವಾಹಕ, ಸೂಚಕ, ನಿಯಂತ್ರಕ, ಡಯೋಡು-ಚಿಪ್ಪು ಮುಂತಾದವುಗಳ ಜೊತೆಜೊತೆಗೇ ತೆಂಗಿನ ಚಿಪ್ಪು, ಅಡಿಕೆ ಶಿಪ್ಪು ಎಲ್ಲ ಅನುಭಾವ ಒತ್ತರಿಸಿ ಸಾಲುಸಾಲಾಗುತ್ತಿದ್ದಂತೆ ಯಾರೋ ತಿಳಿದವರು ಅದು ಕವಿತೆಯೇ ಅಲ್ಲ ಅಂದುಬಿಡುತ್ತಾರೆ.

೫. ಈ ಬಾರಿ ಖಂಡಿತ ಸೂರ್ಯನ ಬಿಂಬ, ನೀರಿನ ಪ್ರತಿಫಲನ, ಬೆಳಕ ವಕ್ರೀಭವನ-ಚದುರುವಿಕೆ ಮುಂತಾದ ಎಕ್ಸ್ ವೈ ಝಡ್ ಎಫೆಕ್ಟುಗಳನ್ನೆಲ್ಲ ತೋರಿಸುತ್ತೇನೆಂದು ನಂಬಿಸುವ ಕ್ಯಾಮರ ಲೆನ್ಸು ಕಡೆಗೂ ನೇತ್ರದ್ವಯಗಳೆದುರು ಸೋತುಬಿಡುತ್ತದೆ.

೬. ಊರುಬೆಸೆವ ಸಲುವಾಗಿ ದಾರಿಯೊ ಅಥವಾ ದಾರಿಬೆಸೆವ ಸಲುವಾಗಿ ಊರೋ, ಜೀವಕೆ ಬದುಕೋ ಅಥವ ಬದುಕಿಗೆ ಜೀವವೋ ಎಂಬ ಉನ್ಮತ್ತ ಗೊಂದಲದಲ್ಲೇ ರೈಲು ಭಾವಸೇತುಗಳನ್ನು ಹಾಯುತ್ತಿರುತ್ತದೆ; ಅಕ್ಷರಗಳು ಪದವಾಗದೇ ಹಳಿಗಳಮೇಲೆ ಉಳಿದುಹೋಗುತ್ತವೆ.

— ರಾಘವೇಂದ್ರ ಹೆಗಡೆ

Advertisements

ಬಸಿಯದ ಹನಿಗಳು..!


ಸಂಜೆ ಹೊರಟ ಬಸ್ಸಿನ ತುಂಬ
ರಾಶಿ ರಾಶಿ ಕನಸಿನ ಗಂಟು
ನಿರೀಕ್ಷಿಸುತ ಬರುವ ಬೈಗಬಿಂಬ
ದ ಅಬ್ಧಿಗೇಕೆ ಹಾದಊರಿನ ಹೆಸರ ನಂಟು.?

*****

ವೇಗಮಿತಿ ಸೂಚಿ ಫಲಕಕ್ಕೆ
ಕಾಲಮಿತಿ ಕಟ್ಟಳೆಯಿಲ್ಲ
ನಡೆದವರ ನೆಳಲು
ಗಾಳಿಯಿಂದೆದ್ದ ಧೂಳು
ಬಸಿದ ನೆತ್ತರ ಹನಿ
ಬದುಕು ಬದಲಿಸಿದ ಹಾದಿ
ಎಲ್ಲ ಅದರ ಅವಗಾಹನೆಯಲಿ ಸೆರೆಯಾಗಿವೆ..

*****

ಹೆಸರ ಹಂಗಿರದ ಊರಿನ
ಕನಸೆ ಬೀಳದ ಕಣ್ಣಲಿ
ಕಸ ಬಿದ್ದು ನರಳಿದೆ..
ಇರುಳ ಮಗ್ಗುಲ ದಾಳಕೆ
ಸಂಜೆ ಕಡೆವ ಗಾಳಿ ಸೀಳಿ
ಬರುವ ಪ್ರಭೆ ನಲುಗಿದೆ..

******

ಹೊಳೆಯಲ್ಲಿ ಬೆಳೆದುನಿಂತ
ಮರಕ್ಕೀಗ ಅನಾಥಪ್ರಜ್ಞೆ
ಬಿಂಬ ನೀರಲಿ ಕಂಡರೂ ನೆರೆಯ
ಕಾನನವ ತಲುಪದ ಸಂಜ್ಞೆ
ಏಕಾಂತದ ಬದುಕಿಗೆ ಬಳಗ ಮರೀಚಿಕೆ..
ಕೊರೆವ ಬೇರು ಧರಣಿಯಂತರಾಳವ
ತಲುಪಿ ಸ್ಪರ್ಷಿಸಲು ಜೀವಜಲವ
ಇನ್ನೇಕೆ ಮರಕೆ
ಹೊಳೆಯ ಹಂಗು..?

******

— ರಾಘವೇಂದ್ರ ಹೆಗಡೆ

ಮುಗಿಯದ ಕಥೆಯಲಿ ಮುಗಿವ ಸಾಲು..


ಸಮಯ ಸುಮ್ಮನೆ
ಕಾಲ್ನಡಿಗೆಯಲ್ಲಿ ಸಾಗುತ್ತದೆ
ಅದನ್ನು ಬೆಂಬತ್ತಿ ಓಡುವವರ
ಅಣಕಿಸುವಷ್ಟು ವೇಗದಲ್ಲಿ..

****

ಚೇಷ್ಟೆಗೆಂದು ಗೆಳೆಯನೊಬ್ಬನ
ಹೀಯಾಳಿಸಿದ್ದೆ.
ಇನ್ನೂ ಕಾಲಿಡಬೇಕಿದ್ದ ಜಾಗದಲ್ಲಿ
ಕರ್ರ್ರನೆ ಬೀಳುತ್ತಿದ್ದ ನನ್ನ ನೆರಳು
ತಲೆ ಎತ್ತದಷ್ಟರ ಮಟ್ಟಿಗೆ
ನನ್ನನ್ನುಹೀಯಾಳಿಸಿತ್ತು.!

****

ಹಿಂದೆಲ್ಲ ಇಲ್ಲಿ ದೇವರೆಂದು ಪೂಜಿಸಿ
ಧಾನ್ಯಗಳನ್ನು ಬೆಳೆಯುತ್ತಿದ್ದರಂತೆ,
ಈಗ ದಿನಂಪ್ರತಿ ನೂರಾರು ಜನ
ಬರುತ್ತಾರೆ, ಇಲ್ಲಿ ದೇಗುಲವಿಲ್ಲ
ಆದರೆ ಎ.ಟಿ.ಎಂ. ಕೌಂಟರು ತಲೆಯೆತ್ತಿದೆ!

****

— ರಾಘವೇಂದ್ರ ಹೆಗಡೆ

ಕಥೆ ಹೇಳುವ ಮತ್ತೊಂದಿಷ್ಟು ಸಾಲುಗಳು. .


೧. ಬಹಳ ಹೊತ್ತು ಒಂದು ಸಾಲಿಗಾಗಿ ಯೋಚಿಸಿ ಕಡೆಗೆ ಬಂದ ವಿಷಯಗಳನ್ನು ಬಹಳ ತಲ್ಲೀನನಾಗಿ ಬರೆಯ ಹೊರಟ ಅವನಿಗೆ ಪೆನ್ನ ಇಂಕು ಮುಗಿದಿದ್ದೇ ತಿಳಿಯಲಿಲ್ಲವಂತೆ.!
೨. ಸಾಗಿಬಂದ ಹಾದಿಯ ಅವಲೋಕಿಸುತ್ತ ಸಾಕಷ್ಟು ಹಿನ್ನಡೆದಿದ್ದ ಆತನಿಗೆ ಮನೆಯ ಹಾದಿಯೇ ಮರೆತುಹೋಗಿತ್ತು.!
೩. ಆ ಅಪ್ರತಿಮ ಯುವ ಪ್ರತಿಭೆಯ ಚಿತ್ರಕಲೆ ಎಲ್ಲರ ಕಣ್ಣನ್ನು ಕುಕ್ಕಿದರೆ ಆತನ ಅಂಗವೈಕಲ್ಯದ ವಿಷಯದಲ್ಲಿ ಎಲ್ಲರೂ ಕುರುಡರಂತೆ ವರ್ತಿಸುತ್ತಿದ್ದರು.!
೪. ಬಾನಿಯೆಡೆ ಗೋವು ಬಂದರೆ ಓಡಿಸುತ್ತಾರೆ. ಅದರಲ್ಲಿ ನೀರು ತುಂಬಿಡುವುದರ ಉದ್ದೇಶ ಕೇವಲ ಅವರು ಕೈ-ಕಾಲು-ಮುಖ ತೊಳೆದುಕೊಳ್ಳಲು ಮಾತ್ರ!
೫. ಹಗಲಿಡೀ ಪರಿಸರ ಪ್ರೇಮಿಯೆಂದು ಫೋಸುಕೊಟ್ಟು ಭಾಷಣ ಮಾಡುವ ಆತ ರಾತ್ರಿಯಿಡೀ ಹಂದಿ, ಮತ್ತಿತರ ವನ್ಯಜೀವಿಗಳ ಬೇಟೆಗೆ ಗನ್ನು ಹಿಡಿದು ತಿರುಗುತ್ತಾನೆ.!
೬. ಸಾವಿನ ಸುತ್ತ ಸಾಕಷ್ಟು ಕತೆಗಳನ್ನು ಬರೆದ ಆತನ ಒಂದು ಕತೆ ಪ್ರಪ್ರಥಮ ಬಾರಿ ಪತ್ರಿಕೆಯೊಂದರಲ್ಲಿ ನಿನ್ನೆ ಪ್ರಕಟಗೊಂಡಿತ್ತು. ಇಂದು ಆತನೇ ಕೇವಲ ಒಂದು ಕಥೆಯಾಗಿ ಹದಿಮೂರನೇ ದಿವಸ!

ಕಥೆ ಹೇಳುವ ಸಾಲುಗಳು.


೧. ಓದಲು ಬೆಳಕಿಲ್ಲ ಎಂದು ಅಸಡ್ಡೆಯಿಂದ ಕೈ ಕುಡುಗಿದ, ಪಕ್ಕದಲ್ಲಿದ್ದ ಚಿಮಣಿ ಬಿದ್ದು ಪುಸ್ತಕ ಸುಟ್ಟುಹೋಯಿತು!

೨. ನೀರಿಗೆ ಹೆದರಿ ನದಿಯೆಡೆ ನೋಡದೆ ಪ್ರತಿದಿನ ೨೦ ಕಿ.ಮಿ. ಸುತ್ತಿ ತಡವಾಗಿ ಹೋಗುತ್ತಾ ಕೆಲಸ ಕಳೆದುಕೊಂಡ. ನದಿ ಬತ್ತಿ ಅದಾಗಲೇ ಒಂದು ತಿಂಗಳಾಗಿತ್ತು!

೩. ಅವರೆಲ್ಲ ಆಕಾಶವ ಮುಟ್ಟುವಂತೆ ಗಾಳಿಪಟವ ಹಾರಿ ಬಿಡುತ್ತಿದ್ದರು. ದಾರದ ಬಂಡಲ್ಲು ಖಾಲಿಯಾಗಿ ಖೇದದಿಂದ ಆತ ಮನೆಗೆ ನಡೆದುಬಿಟ್ಟ.

೪. ತಾನೂ ವನ್ಯಪ್ರಪಂಚದ ಫೋಟೋಗ್ರಾಫರ್ ಆಗಬೇಕೆಂದು ಗಂಧದ ಮರಕ್ಕೆ ಕ್ಯಾಮರ ಕಟ್ಟಿಟ್ಟಿದ್ದ. ಸ್ವಲ್ಪ ಹೊತ್ತಿ ಬಿಟ್ಟು ಬರುವಷ್ಟರಲ್ಲಿ ಆ ಮರವೇ ಅಲ್ಲಿರಲಿಲ್ಲ!

೫. ಜಾಹೀರಾತಿನಲ್ಲಿ ಬರುವಾಕೆಯಂತೆ ತಾನೂ ಕಾಣಬೇಕೆಂದು ಫೇರ್ನೆಸ್ ಕ್ರೀಂ ಮೆತ್ತಿಕೊಳ್ಳುತ್ತಿದ್ದಳು. ಕನ್ನಡಿ ನೋಡಿ ತನಗೆ ಯಾವುದೋ ರೋಗ ಬಂದಿದೆಯೆಂದು ತಟ್ಟನೆ ಕುಸಿದು ಬಿದ್ದಳು!

೬. ಶರಾವತಿ ಸೇತುವೆ ಮೇಲೆ ಶರವೇಗದಲ್ಲಿ ರೈಲು ಸಾಗುತ್ತಿತ್ತು. ಆ ವೇಗವನ್ನೂ ಮೀರಿ ಜಾರಿದ ನೆನೆಪುಗಳು ಆಕೆಯ ಕಣ್ಗಳಿಂದ ನೀರನ್ನು ಬಸಿಸಿದ್ದವು!

** ರಾಘವೇಂದ್ರ ಹೆಗಡೆ.