ಬ್ಲಾಗ್ ಸಂಗ್ರಹಗಳು

ಮಳೆ ನೆರಳು


ಕಿಟಕಿಯಿಂದಾಚೆ ಇಣುಕುತ್ತೇನೆ

ಹೊಗೆ ಮೋಡಗಳ ಪಟ್ಟಿ

ಹಸಿರು ತರಂಗಗಳ ಹೊದ್ದು ಹಾಸುವ ನಕ್ಷತ್ರ

ತೊಳೆದು ಒಣಗಿಸಿಟ್ಟ ಬೆರಳಿಗೆ

ಅಂಟಿದ ನೀಲಿಶಾಯಿಯಲಿ ಕಂಡ ಆಕಾಶ

ಮತ್ತು ಒದ್ದೆ ಮಣ್ಣು ತೂಕ ಅಳೆದು

ಹೊತ್ತದ್ದು ನಿನ್ನ ನೆರಳೇ ಇರಬೇಕು

 

ಬೆಳಗ್ಗೆ ಹೂವ ದಳದ ಮೇಲೆ ಕೂತ ಉಲ್ಕೆ

ಈಗ ಈ ಅಲ್ಯೂಮಿನಿಯಂ ಫ್ರೇಮಿನ

ಕಪ್ಪು ಗ್ಲಾಸುಗಳ ದಾಟಿ ಬಂದಿದೆ

ಕೆಮೆಸ್ಟ್ರಿ ಲ್ಯಾಬಿನ ನಿರ್ವಾತದಿ ಬಚ್ಚಿಟ್ಟ

ಗುಡುಗು ಮತ್ತು ಫಿಸಿಕ್ಸ್ ಲ್ಯಾಬಿನ

ಡಾರ್ಕುರೂಮಿನ ಮಿಂಚು ಬಲಾಬಲಕ್ಕೆ ಇಳಿದಿರಬೇಕು

 

ಬಿಡಿಸಿಟ್ಟ ನೆರಳ ಬೊಗಸೆಯಲ್ಲಿ ಮಡಚಿ

ಹೊತ್ತೋಡಿಹೋದ ಬೆಳಕ

ಕಣಕೆ ಜೀವದ ಹಂಗಿಲ್ಲ

ಇದಕ್ಕೆ ಸರಕ್ಕನೆ ಎದೆಯಿಂದೆದ್ದು

ಅಂತರಾಳವನನವರಿಸಿ ಕಡಲೊಡಲಾಳಕ್ಕಿಳಿವಂತೆ

ಹೋದ ಕವಿತೆ ಸಾಲುಗಳೇ ಸಾಕ್ಷಿ

 

ಪ್ರಾಸಗಳನ್ನು ಬಿಟ್ಟು ಹಾರುತ್ತದೆ

ಮೋಡ ಚಾದರದಡಿ ಹಕ್ಕಿ

ತ್ರಾಸುಗಳ ಬದಿಗಿರಿಸಿ

ಬಾಗಿ ಬಾಗಿ ನಿಲ್ಲುವ ಮರಕ್ಕೆ ತೂಫಾನುಗಳ ಲೆಕ್ಕವಿಲ್ಲ

ನೀಲಿಗೆಂಪು ಬಣ್ಣದ ಶೀಟಿನ ಈ ಹಾಳು ಮಾಡಿಗೆ

ಪಟಪಟ ಸಪ್ಪಳ ಮಾಡಲಷ್ಟೇ ಗೊತ್ತು;

ಇರುಳ ಬೀದಿ ದೀಪಕೆ ಗಿರಕಿ ಹೊಡೆವ ಹಾತೆಯಂತೆ

 

******

ಈ ಕವಿತೆ ‘ಅವಧಿ‘ಯಲ್ಲಿ ಪ್ರಕಟಗೊಂಡಿದೆ.  

 

— ರಾಘವೇಂದ್ರ ಹೆಗಡೆ 

 

Advertisements

ನಿಮ್ನ ಮತ್ತು ಪೀನ


ಸಮಭಾಜಕಕ್ಕೆ ಅಕ್ಷಾಂಶ ರೇಖಾಂಶ
ಉರಿಬಿಸಿಲ ನಡುವೆ ಮೂರುಹೊತ್ತಿನ ಮಳೆ
ಹಿಮದ ಹೊದಿಕೆಗೆ ಬಣ್ಣದ ಅಂಗಿ
ಮನಸೋ ಶಾಪಗ್ರಸ್ಥ ಹೊಳೆ?

ಫಾಲ್ಗುಣ ಬಹುಳ ಸಪ್ತಮಿಯಂದು
ಸೂರ್ಯ ಮೀನಕ್ಕೆ ಸಂಕ್ರಮಿಸುವನಂತೆ
ಮುಂದಿನ ಬಹುಳ ಸಪ್ತಮಿಯಂದೂ
ಮೀನದಲ್ಲೇ ಇರುವನಂತೆ
ಪಾಪ ಅವನಿಗೇನು ಗೊತ್ತು
ನೀವು ಹೇಳುವ
ಹದಿನೆಂಟು ಘಟಿ ಇಪ್ಪತ್ತು
ಘಟಿಗಳ ಮೇಲಣ ತಿಥಿ

ಜೇನಿಗೆ ದುಂಬಿ; ಹಕ್ಕಿಗೆ ಬಿಂಬಿ
ಮುಗಿಯುವುದೂ ಒಂದು ನಿರಂತರ
ಇದಾ ಕಣ್ಣೆದುರ ರೂಪಾಂತರ?

ಕೂರ್ಮ, ವರಾಹ
ಸಾಲುಸಾಲು ಅವತಾರ
ಮೂಸೆಯಲಿ ಮುಗಿವ ಒಂದೊಂದೇ ದಿನ
ಅಸ್ತಿರ ದೇಹದಿ ಅಸ್ತಿಯ ಮೊಳೆ
ಪ್ರತಿ ಹನಿಗೂ ಒಂದು ಬಂದರ
ಮನಸು ವಿಮೋಚಿತ ಹೊಳೆ?

ವಿಸ್ತಾರ ತರಂಗಕೆ ಕಡಲ ಅನುಸಂಧಾನ
ಕೊನೆಯಿರದುದಕ್ಕೆ ಮುಂದುವರಿವ
ಜ್ಯಾಮಿತಿ ಅಳತೆ
ತಿರುತಿರುಗಿ ಬರುವುದಕೆ…
ತಿರುತಿರುಗಿ ಬರುವುದಕೆ
ಬೇಕಾ ಭಾವಾಂತರದ ಕವಿತೆ?

(ಸಶೇಷ)

— ರಾಘವೇಂದ್ರ ಹೆಗಡೆ

ಅನಂತ ತಾನ್…… ಅನಂತದೆಡೆಗೆ


ದೂರದೂರಕೆ ನೋಟ ನೆಟ್ಟು
ಹೊಗೆವ ಕತ್ತಲ ಸೆರೆಹಿಡಿದು ಸುಟ್ಟು
ಛಾಪೊತ್ತಿಬಿಡು ಆ ನಿನ್ನ ಛಾಯೆ..
" Light "

ಮಾರ್ಗಕೆಲ್ಲ ಒಂದಷ್ಟು ಗತಿಯ
ನೇಯ್ಗೆ ಹೊದ್ದು ಹಾಸುತ
ಇರುಳಿಗೆ ಮತ್ತು ಇರುಳಂತೆ ನೆಸೆವುದಕೆ,
ಮುಸುಕಿ ಹರಿಯುತ ಸಾಗಲಿ
ಚೈತನ್ಯ ತರಂಗಗಳು
. . . . . . . . . . .
ಆ ನಿನ್ನಪ್ರಭೆಯ ಸಂಜ್ಞೆ
ಪಸರಲಿ ವಿವೇಚನೆಯ ಬಿತ್ತರಿಸಿ.,
ಮುಖವಾಡಗಳ ಕೃತಕತೆಯ ಧಿಕ್ಕರಿಸಿ..

– – – – – – – – – – – – –

— ರಾಘವೇಂದ್ರ ಹೆಗಡೆ