ಬ್ಲಾಗ್ ಸಂಗ್ರಹಗಳು

ಎದೆಯ ಪದ ಹಾಯುವಲ್ಲಿ …


ಹಸಿರೆಲೆಯು ಚಿಗುರುತಿದೆ
ಮತ್ತೆ ಚೈತ್ರದ ಬೆಳಕು
ನಿಂತ ನಿಲುನೆಲವು ನವ್ಯ
ಹೊಸತಾಗಿ ಹರಿಯುತಿದೆ
ಹಳೆಯ ಮಂದಾಕಿನಿಯು
ನಿನ್ನೆದೆಗಡಲದರ ಗಮ್ಯ.

ಮರಳ ತೀರದಿ ಶಬ್ದ
ಸ್ಥಬ್ದವಾದಷ್ಟೇ ಹೊತ್ತು
ಮೌನದಲಿ ಉಸಿರೆಲ್ಲ ದನಿಯುಸುರಿದ್ದು
ದೀಪಸಾಲಿನ ಸ್ಥಂಭ
ಬೆಳಗಲಣಿಯಾದಷ್ಟೇ ಹೊತ್ತು
ಹೆಗಲಿನಲಿ ಜಗದ ಅಲೆ ನಗುವತೇಲಿದ್ದು

ಹಾದಿಹಾದಿಗಳಿಗೆಲ್ಲ
ನಕ್ಷತ್ರ ಕಾವಲುಂಟು
ರಿಂಗಣಿಸುವುದದೇಕೆ
ಮತ್ತೆ ಮೌನ!
ರಿಂಗಣಿಸದಿರದೇಕೆ
ಮತ್ತೆ ಮೌನ!?

ಹಗಲುಗಣ್ಣಲಿ ಇನ್ನೊಂದಿಷ್ಟಿರುಳು
ಕಳೆದೇ ಹೋಗಲಿ
ಹರಿದಾದರೂ ನಿನ್ನ ನಾ ತಲುಪುವೆನು;
ಚಕ್ರ ಕಟ್ಟಾಗಿದೆ
ರೆಕ್ಕೆ ಬಿಚ್ಚುವುದೊಂದೇ ಬಾಕಿ
ಈಗಾದರೂ ನಾ ಮುಂದೆ ಹಾಯಬೇಕು
ಇಲ್ಲವಾದರೆ ಮತ್ತೆ ಕಾಯಬೇಕು?

ಹಸಿರೆಲೆಯು ಚಿಗುರುತಿದೆ
ಮತ್ತೆ ಚೈತ್ರದ ಬೆಳಕು…

— ರಾಘವೇಂದ್ರ ಹೆಗಡೆ

***

ಸರ್ವರಿಗೂ ‘ವಿಜಯ’ಸಂವತ್ಸರ ಸನ್ಮಂಗಲವನ್ನುಂಟುಮಾಡಲಿ.
ರಾ ಗ ನೌ ಕೆ‘ಯ ಓದುಗರಿಗೆಲ್ಲ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🙂
|| ಹರೇ ರಾಮ ||

— ರಾಘವೇಂದ್ರ ಹೆಗಡೆ

***

Advertisements

ಅನಲನ ಅಳಲು


ಕೆಣಕಿ ಕೆಣಕಿ ಎನ್ನ ಉರಿಸುತಿಹರಲ್ಲ
ಉರಿದು ಹೋದರು ನಾನು ಅದಾರು ಕೇಳುವರಿಲ್ಲ
ಸುತ್ತ ಜಗವ ಬೆಳಗ ಬೇಕೆಂಬುದೆನ್ನ ಬಯಕೆ
ಕೆಡಿಸುತಿಹರೆಲ್ಲ ನನ್ನ ಅರ್ಥವ ತಮ್ಮ ಸ್ವಾರ್ಥಕೆ !

ನನಗೂ ಹಣತೆಯಲ್ಲಿ ಕೂತು
ದೀಪವಾಗಿ ಉರಿಯುವಾಸೆ
ಬಂದ ಇರುಳ ಒಂದಿಷ್ಟುಹೊತ್ತು
ಶಾಂತ ಕಣ್ಣಲಿ ಎದುರಿಸುವಾಸೆ
ಆದರೆ ಯಾರಿಗೆ ಹೇಳಲಿ ನಾ ನನ್ನ ಅಳಲ
ಹೇಳುವಷ್ಟರಲ್ಲೇ ಹೊತ್ತಿ ಉರಿಯುತಿಹೆ,
ಘೋರ ಪಾತಕನಂತೆ ನಾ ಜಗದಗಲ !

ಸಾವರಿಸು ಗಾಳಿ, ಹೀಗೆ ಆವರಿಸುವ ಬದಲು
ನನ್ನ ಆರಿಸಿಬಿಡು….!
ಹನಿಸು ಮಳೆಯೇ , ಅದೆಲ್ಲೋ ಧರೆಯ ಕೊಚ್ಚಿ
ಹರಿವ ಬದಲು ನನ್ನ ಮೇಲೊಂದಿಷ್ಟು ಹನಿಯ
ಮುಸ್ಸಂಜೆಯಲಿ ಬಾಗಿಲ ಬಳಿ ದೀಪವಾಗಿ
ಹುಟ್ಟಿ ಬರಬೇಕೆಂಬುದೆನ್ನ ಪುಟ್ಟ ಬಯಕೆ
ಈಗ ಕೊಡಲಾಗದ ನಿರಾಳತೆ ಆಗಲಾದರೂ
ಸಿಗುವುದೋ ನನ್ನಿಂದ ಜನ(ಗ)ಕೆ …….!?

— ರಾಘವೇಂದ್ರ ಹೆಗಡೆ

(‘ಕೆಂಡಸಂಪಿಗೆ’ಯಲ್ಲಿ ಪ್ರಕಟಿತ)