ಬ್ಲಾಗ್ ಸಂಗ್ರಹಗಳು

ಒಂದಷ್ಟು ಹೈಕುಗಳು .!


ಹಾದಿ
ಗೆ ಎರಡು ಬದಿ
ಒಂದು ಮರಳದ ನಿನ್ನೆ, ಮತ್ತೊಂದು ಮರುಕಳಿಸುವ ನಾಳೆ!

***

ತಡೆಯ
ಲಾಗದಷ್ಟು ಸೆಳೆತ ಸುಳಿಯ
ದೇ ಹೋದರೂ ತೆರೆ ತಡಿಯಸನಿಹ!

***

ಜೊತೆಗೇ ಹರಿದು
ಬಿಡುವಾ ಎಂದು
ಬಂದ ಕವಿತೆ ಈಗ ಶಬ್ಧಬಂಧಿ!

***

ದಡದಿ ನೆಗೆ
ದು ಹಿಮ್ಮುಖ ಹೊರಟೇ ಕವಿತೆಗೆ
ಅಲೆಸೆಳೆವ ಕಾಂತಶಕ್ತಿ!

***

ಬೆಟ್ಟ-ಬಯಲ
ಗುಂಗಲ್ಲೇ ಹರಿದ ಹೊಳೆಸಾಲ
ಭರತವೇರಿದ್ದು ತೀರ ಸಹಜ ಬಿಡಿ!

***

— ರಾಘವೇಂದ್ರ ಹೆಗಡೆ

Advertisements

ಇಂದೆಂಬ ಕರೆದನಿಯ ಉದ್ಗಾರ….!


ನಭವ ನೋಡಿ ಬರಿ ಖಾಲಿ ಹಾಳೆಯೆಂದು

ಒಂದೊಮ್ಮೆ ಖಿನ್ನತೆಯಲಿ

ಹೊರಟು ಹೋದ ನೆನಪು

ಆ ಕ್ಷಣದಿ ಬಂದ ತಂಗಾಳಿಯೂ

ಅದೇಕೋ ಬಿಸಿಬಯಲಲಿ ನಿಲಿಸಿ

ತುಸು ಹುರಿದು ಬೇಯಿಸಿದ ಭಾವದ ಒಡಪು.!

ಹುಚ್ಚು ಅಲೆಯಾಗಿ ಮನದಿ ಬಡಿದು

ದ್ವಂದ್ವದ ಜೊತೆ ಮೈದಾಳಿ ನಿಂತು

ಕರೆಯ ಕೇಳುವ ಮುನ್ನ

ನಿನ್ನೆಯೊಳು ಕೂಡಿಹಾಕಿ

ನಾಳೆಯೆನ್ನುವ ನಂಬಿಕೆ

ಸಿಗದಂತೆ ಕಟ್ಟಿಹಾಕಿ.,

ಪರಾಮರ್ಶೆಗೆ ನಿಲುಕದಂತೆ

ತನುವೊಳಗೆ ಸಿಲುಕಿ

ಚೀರಾಡುವ ಗೋಜಿಗೂ ಹೋಗದೆ

ಮೌನವನು ಮೌನದಲೇ ಸಾಯಿಸಿ

ಪೇಚಾಡುತ ಸುಡುವ ಜ್ವಾಲೆಯ ಮೇಲೆ

ಕೂತು ನಡೆದುಬಿಡುವ

ಎಂಬ ಹುಚ್ಚು ಭಾವದ ಮಥನ..!

ಖಿನ್ನ ಕುಹಕದ ಸಾಂಗತ್ಯದಲಿ

ಇಹವ ಮರೆತ ಮನವ

ಸಾಮೀಪ್ಯಿಸಿ, ಸಾವರಿಸಿ

ಲೌಕಿಕ ಸಾನೀಧ್ಯಕೆ ಕರೆತಂದು

ನೀಡಿ ಅದಕೊಂದಷ್ಟು

ಅಣಿ ಅಕ್ಷರಗಳ ಆಕಾರ,

ಮತ್ತೆ ಮೈಗೊಡವಿ ನಿಲ್ಲುವಂತೆ ಮಾಡಿದ್ದು

ಇಂದೆಂಬ ಕರೆದನಿಯ ಉದ್ಗಾರ.!

— ರಾಘವೇಂದ್ರ ಹೆಗಡೆ