ಬ್ಲಾಗ್ ಸಂಗ್ರಹಗಳು

ಸಂಕ್ಷೇಪ


ತೆರೆಯ ವಿಶಾಲ ಚಿರಂತಗಳಲಿ
ಮಡಚಿ ಹರವಿಟ್ಟ ದಾರ
ಮೌನ ಘೋರಿ ಕಂದರಗಳಲಿ
ಕಣ್ಬಿಂಬದಂತರವೋ ಅಪಾರ

ನಿಜ, ಪೇಲವ ಬಣ್ಣದಲಿ
ಸಂಜ್ಞೆ ಆಯಾತ ನಿರ್ಯಾತವೆಷ್ಟು
ಲೆಕ್ಕ ಇಟ್ಟವರಾರು ನೀ ಹೇಳು
ಅಕಸ್ಮಾತು ಇಟ್ಟಿದ್ದರೆ ಪ್ರತಿಯೊಂದು
ಕಾಣುತ್ತಿತ್ತೇನೋ ಚೆಂದ ದುಪ್ಪಟ್ಟು

ತೆರೆದ ಬಯಲ ಕಿಟಕಿ
ಯ ಸೆಲೆದಾಟಿ ಗುಟುಕಿ
ತಾಪಡ್ತೋಪು ಬಂದ ಊರಿಗೇನು ಗೊತ್ತು
ಕಳಿಸಿದ ಕಡ ನೀ
ಮಣಗಟ್ಟಲೆ ಬರಮಾಡಿದ ಹೊತ್ತು

ಚೌಕ, ವೃತ್ತ, ಸಿಗ್ನಲ್ಲುಗಳ
ಸ್ಟಾಪುಗಳಲ್ಲಿ ನಿಂತಂತೆ
ತಡಿಯಲ್ಲಿ ಮೈಚೆಲ್ಲಿ ತೇಲಿ
ಹೋಗಲು ಬಿಕ್ಕಿ ಹರಡಿಬಿದ್ದ
ದಾಸಾಳದ ಎಸಳಂತೆ,
ಹೈವೆಯಲ್ಲಿ ಮಧ್ಯಾಹ್ನ
ಸುಳ್ಳುಸುಳ್ಳೇ ಕಾಣುವ
ನೀರಪ್ರತಿಮೆಯಂತೆ
ಕಂತೆಕಂತೆ ಅಂತೆಗಳಲಿ
ಸಿಕ್ಕಿಬಿಡಬಹುದು ನಾನು
ಮುದ್ದಾಂ ಮುಖ ತಿರುಗಿಸಿ
ಹೋಗಲು ನೀ ಅಣಿಯಾಗು..

******

— ರಾಘವೇಂದ್ರ ಹೆಗಡೆ

Advertisements