ಬ್ಲಾಗ್ ಸಂಗ್ರಹಗಳು

ನೆರಳ ಬೆಳಕು


ನೆರಳ ಹೊದ್ದದ್ದು ಬೆಳಕೇ
ಇರಬೇಕು
ಬಿಂಬ ವಕ್ರೀಭವಿಸಿ
ನೋಟ ಪ್ರತಿಫಲಿಸಿ
ಚದುರಿ ಬಂದದ್ದು
ನೀರಕನ್ನಡಿ
ವ್ಯಕ್ತಿಗತರೂಪ
ಬಿಸಿಲು ನೆರಳಿನದೇ ಅನುರೂಪ?

***

ನೀಹಾರಿಕೆಗೆ ಬಾಯಾರಿ
ತಲೆಸುತ್ತಿದ್ದು
ಹೆಜ್ಜೆ ಗುರುತೇ ಭಾರವಾಗಿ
ದಾರಿ ತೀರಿದ್ದು
ಸುಳ್ಳೆನಿಸುತ್ತದೆ
ದಿಕ್ಕೆಟ್ಟ ಹೊಂಬಿಸಿಲಿಗೆ
ಹರಡಿಬಿದ್ದ ಬೆಳದಿಂಗಳು
ನೆರಳಾದಾಗ

***

— ರಾಘವೇಂದ್ರ ಹೆಗಡೆ

Advertisements

ಬಿಂಬ


ವರಾತ ತೆಗೆದ ಮಣ್ಣಿಗೆ ಹರಳಹುಚ್ಚು
ಗಾಳಿ ತೂರಿದ್ದು ಎಲೆಯಿರಬೇಕು
ಅಂದುಕೊಂಡದ್ದು ಕೊಂಚ ಹೆಚ್ಚು

ಊರಾಚೆಯ ತೊರೆ ಕಣ್ಣು ಕುಕ್ಕುವಾಗ
ನೆತ್ತಿ ಸುಡುವ ನಡು ಮಧ್ಯಾನ್ನ್ಹ
ಹನಿ ಹೊತ್ತ ಹೆಸರಲಿ
ಅಲೆಯಬೇಕೆಂದು ಬಿಟ್ಟು ಉದ್ಯಾನ
ಮನಸು ಉರಿವ ಕರ್ಪೂರ
ಹೊತ್ತು ತೇಲುವ ಕೆಸುವಿನೆಲೆ
ಅಕೋ ಆ ತೀರದಿ ತೀರದ ಹೊಸನೆಲೆ?

ಕನ್ನಡಿಯಲ್ಲಿ ಕಂಡ ಮುಖ
ಮುಖವೇ ಹೌದಾ..,? ಅನುಮಾನ
ಮುಖದ ಮೇಲಲ್ಲ ಕನ್ನಡಿಯ ಮೇಲೆ
ಇಟ್ಟರೂ ಮತ್ತೆ ಮತ್ತೆ
ಉಸಿರ ಬೆರಳಚ್ಚು
ಅರೆ ಯಾಕೋ ಬೇರೆಯದೇ
ಕಾಣುವುದಲ್ಲ ಬರೆವ ನೆರಳಚ್ಚು

ಕಾಮನಬಿಲ್ಲು ನೋಡಿದ ಕಣ್ಣು
ನೀರಿಗಿಣುಕಿ ಬಿಂಬಕೆ ಮುಖವೊಡ್ಡಿದರೆ
ಅಲ್ಲಿ ಕಂಡದ್ದು ಮೋಡದಡಿ
ಪದರಪದರವಾಗಿ ಚಡಪಡಿಸುತಿರುವ ಹಗಲು.

******

ಕೊ: ಸರ್ವರಿಗೂ ದಸರಾ ಹಬ್ಬದ ಹಾರ್ದಿಕ ಶುಭಾಶಯಗಳು.

******

— ರಾಘವೇಂದ್ರ ಹೆಗಡೆ