ಬ್ಲಾಗ್ ಸಂಗ್ರಹಗಳು

ಮತ್ತೊಂದು ರಸ್ತೆ


ನಿರ್ಭೀತ ಹೊರಟ ದಾರಿಗೆ
ವರ್ತುಲ ಸವಾಲು
ಹೇಗೆ ಹೋಗಬೇಕು, ಹೇಗೆ ಹೋಗಬೇಕು

ಅಲೆಗೆ ಸಿಕ್ಕಿ ಬದಿಗೊತ್ತಿ
ಇಂಚಿಂಚು ಸರಿದ ಮರಳ
ರಾಶಿಯೇ ಒಂದುಕಡೆ
ಅಡಿಯ ಪಡಿಯಚ್ಚು ಪಡೆದು
ದಿಬ್ಬದಿಬ್ಬಗಳಾಗಿ ನಿಂತು
ಯಾನಶಬ್ಧ ನಿಶ್ಯಬ್ಧತೀರ.

ಹನಿ ಮೈಮೇಲೆ ಬಿದ್ದಾಗ
ಶಿಥಿಲ ಮಾಡಿನ ಬಗ್ಗೆ ಅನುಕಂಪ
ವರ್ತುಲ ಸುರುಳಿ ಬಿಡಿಸುವಲ್ಲೂ
ಗೋಳಾರ್ಧ ಖಂಡಾರ್ಧ ನೆಪ
ಊರೂರು ಸುತ್ತಿ ಉಸಿರು
ಸೇರುವ ಗಾಳಿಗೆ ಬದುಕು
ವಿಪರೀತ ಸಖ್ಯ; ಅದೇ ಕನಸು.

ಶೂನ್ಯದಿಂದಾರಂಭವಾಗುವುದು
ಎಲ್ಲ ಯಾಕೆ ಅದಕೆ
ಹಾಕುವುದು ನಿರ್ಲಿಪ್ತ ಹೊದಿಕೆ
ಮೇರು, ಪರ್ವ, ಉತ್ತುಂಗ
ಮುಂತಾದ ಗರ್ವ ಹೆಮ್ಮೆ ಪದಗಳ
ಬುನಾದಿ ತುಂಬೆಲ್ಲ
ರಾಶಿರಾಶಿ ಶೂನ್ಯಗಳು.

ಯಾಕೆ ಅಲೆ ಯಾಕೆ ಮಣ್ಣು
ಪದರಪದರಗಳಾಗಿ ತೆರೆದುಕೊಳ್ಳುವ ಕಣ್ಣು
ಅರಸುತ್ತದೆ ವರ್ತುಲದಲ್ಲಿ ಸಂಭಾವ್ಯ
ಪ್ರಶ್ನೆಗೆ ಸಾಂದರ್ಭಿಕ ಉತ್ತರ
ಮತ್ತೆ ಹೊರಟಿದ್ದು ಹಾದಿಯೇ
ಅಲ್ಲ ಅಂದುಕೊಂಡರೆ ದುಸ್ತರ.

ಅಕೋ ಅಲ್ಲಿ ತೋರುತಿದೆ ಒಂದು ಸಂಧಿ
ನಿರ್ಭೀತಿ ಒಳಗೊಳಗೇ ಕೊಂಚ ಬಂಧಿ
ಮತ್ತೆ ಹೇಗೆ ಹೋಗಬೇಕು ಪ್ರಶ್ನೆಯೆದುರು
ದಿಟ್ಟ ಉತ್ತರದಂತೆ ಸುಳಿವ ಶೂನ್ಯ ವರ್ತುಲಗಳು
ಈಗ ಹೊರಡುವುದು ಬಹುಶಃ
ಅರ್ಥವಾಗದ ಅಲ್ಲಿಗೇ ಇರಬಹುದು.

— ರಾಘವೇಂದ್ರ ಹೆಗಡೆ

Advertisements

ಹನ್ನೊಂದರ ಕವಿತೆ ..!


ಹನ್ನೊಂದು, ಹತ್ತರ ನಂತರದ ಸಂಖ್ಯೆ
ಒಂದೇ ರೀತಿಯ ಎರಡು ಅಂಕೆ
ಬದಿಬದಿಗೆ ನಿಂತು ಮೂಡಿದ ಸಂಖ್ಯೆ.
ಹತ್ತರ ನಂತರ ಹನ್ನೊಂದೆ, ಅದರ
ಬಗೆಗಿನದಲ್ಲ ಶಂಕೆ
ಆದರೆ ಅದರಲಿ ಒಮ್ಮೊಮ್ಮೆ
ಬಂಧಿಯಾದ ಹಾಗೆ ಆಗುವ ಭಾಸ
ಎಲ್ಲ ಮುಗಿದೇ ಹೋದಂತ ಅಭಾಸ
ಶುರುವಿನಲ್ಲಿ ಅಲ್ಲಲ್ಲಿ
ಅಡ್ಡಾದಿಡ್ಡಿಯಾಗಿ ಎದುರಾಗುತದೆ.

ನೋಡಲಷ್ಟೇ ಸ್ವಲ್ಪ ತಿರುವು-ಮುರುವು
ಆದರೂ ಪೂರ ನೇರಾನೇರ
ವಾಗಿರುವಂತೆ ತೋಚುತದೆ
ರಸ್ತೆ, ಎಲ್ಲಾದರೂ
ಒಮ್ಮೊಮ್ಮೆ ಎಡಬಲ ಕವಲು ಸಿಕ್ಕರೂ
ಸ್ವಲ್ಪ ದೂರ
ಕರೆದೊಯ್ದು ಮತ್ತದೇ
ಹಾದಿಗೆ ಸಂಧಿಸುತದೆ.
ಬಿಟ್ಟು ಬಿಟ್ಟು ಬಿಡದಂತೆ ಅದೇ
ಹಾದಿ ಅಲ್ಲಲ್ಲಿ ಅಗೋಚರವಾಗಿ ಬಂಧಿಸುತದೆ.

ತನು ಶುದ್ದಿಯ ನೆಪಮಾತ್ರಕೆ
ನಾಲ್ಕು ಹನಿ
ಪ್ರೋಕ್ಷೀಣ್ಯಿಸಿಕೊಂಡಂತೆ, ಬೇರೆಬೇರೆ
ದಾರಿ ಹಾಯುವ ಅನಿ
-ವಾರ್ಯತೆಗೆ ಅಲ್ಲಲ್ಲಿ ಓರೆಕೋರೆ
ಎಡ ಬಲ ಹೊಸ ತಿರುವು
ಕಡೆಗೆ ಒಂದೇ ಸಂಧಿ
ಮತ್ತೆ ಉದ್ದನೆ ಸಬಂಧ.

ಎಷ್ಟಾದರೂ ಕೊನೆ ಅನಂತ
ಮಾರ್ಗಮಧ್ಯದ ನಿಲ್ದಾಣ
ಬರಿ ತಾತ್ಕಾಲಿಕ ಅಂತ.,
ಇದೆ ಇದರ ಮುಂದೆ ಅಣಿ
ಇಡುವಲ್ಲಿ ಮತ್ತೆ ಸವೆದ ಹಾದಿ
ಅದರ ಮೇಲೆ ನಡೆದ ಜಾತ
ಅಜಾತರ ಕಾಲಚ್ಚು, ಗಾಲಿ ಗುರುತ
ಎಲ್ಲ.., ಎಂಬ ಮಿಂಚಾಲೋಚನೆ
ಹೊತ್ತಿ ಉರಿದು ಉಸಿರುಗಟ್ಟಿ
ಆರುವಾಗ ಅನಿಸುವುದು
ಹತ್ತರ ನಂತರದ ಹನ್ನೊಂದು
ಆದರೂ ಹತ್ತರ ಜೊತೆಗಿನ
ಹನ್ನೊಂದಾಗುವುದು ಬೇಡವೆಂದು…!

— ರಾಘವೇಂದ್ರ ಹೆಗಡೆ

(‘ನಿರಂತರ ಕರ್ನಾಟಕ’ ವಾರಪತ್ರಿಕೆಯಲ್ಲಿ ಪ್ರಕಟಿತ)

ನನ್ನ ಸುತ್ತಲ ಬೇಲಿ


ಹತ್ತಿರದ ಹಾದಿಯೆಂದು ರಸ್ತೆಗೆ
ಕಾಲಿಡುತ್ತಿದ್ದಾಗ ಅಂಗಿ ಕಾಲರಿಗೆ ಸಿಕ್ಕಿ
ನೂಲು ಎಳೆದ ಬೇಲಿಕೊಲು

ಅರೆ, ಆ ದಿನ ಎಲ್ಲ ಬಟ್ಟೆಗಳನ್ನು
ನೇತುಹಾಕಿ ಒಣಗಿಸಿದ್ದು ಇದರಲ್ಲೇ ಅಲ್ಲವೇ..?
ಕೊಳೆಗೆ ಮುಕ್ತಿಕೊಡಲು ನೀರಿಗಿಳಿದು
ಬಂದ ಬಟ್ಟೆಗೆ ಬಿಸಿಲ ಹಾಸ ಹೊದೆಸಿ
ಆಶ್ರಯಿಸಿದ್ದ ಇದೇ ಈಗ ಅಂಗಿ ಎಳೆದು
ನನ್ನ ಬಂಧಿಯಾಗಿಸುತಿದೆ..,

ಎಷ್ಟಾದರೂ ನಾನೇ ಹೇಳಿ ನಿರ್ಮಿಸಿಕೊಂಡ
ಆವರಣ ನನ್ನ ಕಟ್ಟಿಹಾಕಿದರೆ
ಅದ ದೂರುವುದದೆಂತು..?!

ಎರಡು ದೋಣಿಮೇಲೆ ಕಾಲಿಟ್ಟಂತೆ
ಆಚೆಗೊಂದು ಈಚೆಗೊಂದು ಕಾಲಿಟ್ಟ
ಅನುಭವ ಈಗ ನನಗೆ..
ಒಂದುರೀತಿ ನಿರ್ವಾತದಲಿ
ಉಸಿರಾಡುವ ಹಾಗೆ. ಹಗಲು-
ಇರುಳು ಕಣ್ಣಿಗೆ ನೆಸೆನೆಸೆದು ಉರುಳುತಿವೆ;

ಇಬ್ಬಂದಿ ಬಗೆಯ ಹೊಯ್ದಾಟದಲಿ
ನಾಕಾಬಂಧಿಯಾಗಿ ನನಗೆ ನಾನೇ
ಮೂರನೆಯವನಾಗುತ್ತಿದ್ದೇನೆ..
ಹೇಗಾದರೂ ಮಾಡಿ ಇದರಿಂದ ಪಾರಾಗಲು
ಮುಂದುಗಡೆ ಹೋಗಬೇಕೆನ್ನುವಷ್ಟರಲ್ಲಿ
ನೆನಪಾಗುತದೆ ಇದು ಹಿತ್ತಲ ಬೇಲಿಯಲ್ಲ;
– ಸುತ್ತಲ ಬೇಲಿ..!

— ರಾಘವೇಂದ್ರ ಹೆಗಡೆ