ಬ್ಲಾಗ್ ಸಂಗ್ರಹಗಳು

ರಥಬೀದಿ…


ಹಾದಿಯ ಅಂಚು ಸವರುವ ಅಂಗಡಿ ಬಾಗಿಲು, ಅಲ್ಲೇ ಮೆಟ್ಟಿಲು, ಬಾಣಲೆಯಂಥ ದೊಡ್ಡ ಹರಿವಾಣಗಳಲ್ಲೊಂದಿಷ್ಟು ಅರಿಶಿನ, ಕುಂಕುಮ, ಕುಪ್ಪಿಬಣ್ಣ , ಊದುಬತ್ತಿ, ಕರ್ಪೂರ, ಶ್ರೀಗಂಧ, ಚಂದನ ಕೊರಡು, ಬಾಗಿಲ ಬದಿಗೆ ನೇತುಬಿದ್ದ ಬಾಳೆಗೊನೆ, ದೇಗುಲದ ಘಂಟಾನಾದ…. ಇಡೀ ಬೀದಿಗೇ ಒಂದು ಕಂಪು. ತೋರಣದ ಮಾವಿನಫಲ, ಅರಿಶಿನ ಎಲೆ, ತೆಂಗಿನಕಾಯಿ, ಮಲ್ಲಿಗೆ, ಸೇವಂತಿಗೆಯ ಘಮ, ಮಿಟಾಯಿ ಅಂಗಡಿ, ಸೇಬು, ಚಿಕ್ಕು, ದ್ರಾಕ್ಷಿ, ದಾಳಿಂಬೆ, ಸವತೆ, ಹಾಗಲ, ಬೇವು… ಅರೆ ಎಷ್ಟು ನೋಡಿದರೂ, ಎಲ್ಲಿ ನೋಡಿದರೂ ಇದೇ ಸಂತೆ. ಈ ದಾರಿಯಲ್ಲಿ ಇಂಥವುಗಳ ಸೊಬಗು ನೋಡುವುದೇ ಕಣ್ಣಿಗೊಂದು ಹಬ್ಬ. ಅಷ್ಟಕ್ಕೂ ನಮ್ಮೂರ ರಥಬೀದಿಯೇನು ತೀರ ಉದ್ದದ್ದೂ, ಅಗಲದ್ದೂ ಅಲ್ಲ. ಒಂದು ತುದಿ ಮಾತ್ರ ಸ್ವಲ್ಪ ವಿಶಾಲ; ಆದರೆ ಮತ್ತೊಂದು ತುದಿ ತೀರ ಕಿರಿದು. ಎಲ್ಲ ಊರಿನ ರಥಬೀದಿಗಳೂ ಬಹುಶ:ಹೀಗೇ ಇರಬಹುದೇನೋ.

ಬಾಲ್ಯದಲ್ಲಿ ಆಟಿಕೆಯೊಂದ ನೋಡಿ ಅಪ್ಪನ ಬಳಿ ಹಟ ಮಾಡಿದ್ದು, ತರಕಾರಿ ಕೈಚೀಲವ ಕೆಡವಿದ್ದು, ತೇರಿಗೆ ಬಾಳೆಹಣ್ಣು ಎಸೆದದ್ದು ಇಂಥ ನೆನಪುಗಳು ಇಲ್ಲಿ ಹಾಯುವಾಗೆಲ್ಲ ಗರಿ ಬಿಚ್ಚುತ್ತವೆ. ಗಮ್ಯ ಕಾಣುವಷ್ಟೇ ಇದ್ದರೂ ತನ್ನೊಡಲಾಳದ ಅಕ್ಷಯ ರಮ್ಯತೆ, ಅದೆಂಥದೋ ಆಪ್ಯಾಯತೆಯಿಂದ ನನ್ನ ಇದು ಸದಾ ಕಾಡುತ್ತಿರುತ್ತದೆ. ಹಾದಿ ಕಿರಿದಾದಷ್ಟೂ ನನಗೆ ಸರಕ್ಕನೆ ಅಪ್ಪನ ನೆನಪಾಗಿಬಿಡುತ್ತದೆ. ತಮ್ಮಾ ಈ ಜೀವನವೇ ಒಂದು ರಥಬೀದಿ ನೋಡು ಎಂದು ಆತ ಒಮ್ಮೆ ನಸುನಕ್ಕಿ ಹೇಳಿದ್ದನ್ನು ಇಂದು ಈ ಬೀದಿಯ ಕಣಕಣವೂ ಪ್ರತಿಧ್ವನಿಸುತ್ತಿರುವಂತೆ ಭಾಸವಾಗುತ್ತದೆ.

ಅಪ್ಪ ನನ್ನಿಂದ ಕಡೆಯದಾಗಿ ಕೇಳಿದ್ದ ಕವಿಕೆಯೊಂದು ಈಗೇಕೋ ಮತ್ತೆ ನೆನಪಾಗುತ್ತಿದೆ.

ಭರವಸೆಯ ಬೆಳಕೆ, ಜ್ಞಾನಸಿರಿ ಬೆಳಕೆ
ಜಗತುಂಬಿ ಅರಳು ಬಾ ಬೆಳಕೆ
ಮುನ್ನಡೆಸೆನ್ನ ಸನ್ಮಾರ್ಗ ಪಥಕೆ…

ಚಿತ್ರವೊಂದನ್ನು ತೆಗೆಯಬೇಕು ಎಂದುಕೊಂಡು ಬಂದಿದ್ದೆ. ಆದರೆ ಈ ರಥಬೀದಿಯ ಸೊಬಗ ಕೇವಲ ಒಂದು ಚೌಕಟ್ಟಲ್ಲಿ ಬಂಧಿಸುವುದು ಅಷ್ಟು ತರವಲ್ಲ ಎಂದೆನಿಸಿ, ಕ್ಯಾಮರಾವನ್ನು ಪುನ: ನನ್ನ ಸಿ.ಡಿ.ಹಂಡ್ರೆಡ್ ನ ಪೆಟ್ಟಿಗೆಯಲ್ಲಿ ತುರುಕಿ ಈಗ ಇಲ್ಲೇ ಕೈಚೀಲ ಹಿಡಿದು ಅಲೆಯುತ್ತಿದ್ದೇನೆ. ಒಂದಷ್ಟು ಹೂವು, ಹಣ್ಣು, ಕಡ್ಡಿ-ಕರ್ಪೂರ ಜೊತೆಗೆ ಮತ್ತೊಂದಷ್ಟು ನೆನಪುಗಳನ್ನು ತುಂಬಿ ಒಯ್ಯಬೇಕು.

***

ಈ ಕವಿತೆಯನ್ನೂ ಓದಿ 🙂

ಮನೆ-ಮನಗಳಲ್ಲಿ ಬೆಳಗಲಿ ದೀಪ ನಿತ್ಯ…
ನಿಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

***

— ರಾಘವೇಂದ್ರ ಹೆಗಡೆ.

Advertisements

ಕನ್ನಡಿ ರೆಕ್ಕೆ


ಯಾರೋ ಹಚ್ಚಿ ಹೋದ ಕಿಡಿಗೆ
ಸುಟ್ಟ ಮಣ್ಣ ಬದಿಬದಿಯೆಲ್ಲ
ಹಾದಿಯೆಂದು ಹೊರಟು
ನಿಟ್ಟುಸಿರಿಟ್ಟು ಕೊಂಚ
ದೂರದಿ ಕಾಯುತಿದೆ ಹಣತೆ
ಆಹ್ವಾನಿಸುತ ಎಂಬಂತೆ
ಆವಾಹನೆಯಾದ ಸ್ಥರಗಳಿಗೆಲ್ಲ
ಭರತ ಇಳಿತಗಳು
ಇಲ್ಲಿ
ಉಸಿರಾಟದ ಪರಿಕರಗಳು.

ಕಂಡದ್ದು ಹಣತೆಯಲ್ಲ
ಹಣತೆಯೆಂಬ ಭ್ರಮೆ
ತೆರೆಗಳ ನಡುವೆ ಬಿದ್ದು
ಹಿಂದೆ ಮುಂದೆ ಹೊಯ್ದಾಡುವ
ಕವಿತೆಯ ಶಮೆ
ಕತ್ತುರಿದು ಬಿದ್ದ ಕಿಡಿ
ಊರಲ್ಲ
ಹಾನತೆಗೆದೆಳೆಯಲು ತೇರಿಲ್ಲ

ಅಗ್ರವಾಗಿ ಕಂಡದ್ದೆಲ್ಲ ಉಗ್ರವಾಗಿ
ಮರಳಿಗಿಳಿಯಲು ಅಡ್ಡಡ್ಡ ಸೀಳಿ
ಕಾಲ್ತಡೆಸುತ್ತ ವ್ಯಘ್ರವಾಗಿ
ಮಿಸುಕಾಡುವ ನಡಿಗೆ
ಧರೆಗೂ
ತುಸುತಾಪ ಅಡಿಗೆ.

ಜಾರಿಸರಿದವುಗಳು ಹಲವು
ಹಾರಿದವು ಮರೆತು ದೂರ
ಅರೆಮಬ್ಬಿನಲಿ ಮುರಿದ
ರೆಕ್ಕೆಯ ಬಳಚುತ್ತ
ಹಾರಲೆತ್ನಿಸಿದ್ದು ಬರಿ ಕವಿತೆಯಲ್ಲ
ಕೊಳದ ತಿಳಿನೀರಲ್ಲಿ ಕಾಣುವ
ಕಟುವಾಸ್ತವ
ಅದಕ್ಕೆ ನೋವಿದೆ
ಅಲ್ಲಲ್ಲ ತುಸು ನೆಮ್ಮದಿಯಿದೆ
ಮೋಡ ನೀನಳಬೇಡ
ಮುರಿಯದಿರಲಿ ಮತ್ತೊಂದು ರೆಕ್ಕೆ

******

— ರಾಘವೇಂದ್ರ ಹೆಗಡೆ

******

... ಶುಭಾಶಯ...

ಕೊ: ತಮ್ಮೆಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.. 🙂

******

[image source: picassaweb]

******

ಚೌಕಟ್ಟುಗಳ ಸಂಕೀರ್ಣ ದಾಟಿ ಬರಲು..


ಹಣತೆ – ಬೆಸುಗೆ ಬತ್ತಿಯ ಜೊತೆಗೆ,
     ಚೌಕಟ್ಟುಗಳ ಸಂಕೀರ್ಣ 
     ದಾಟಿ ಬರಲು ಬೆಳಕು, 
     ಭಾವಸ್ಥರಗಳ ಅನಂತದವರೆಗೆ..

ನೆಣೆ - ಬೆಳಕಿಗೆ ಹೊಣೆ
    ಹರಿವ ಕಿರಣಗಳಿಗೆ ಎಣೆ/ಹಣೆ..

ಎಣ್ಣೆ - ಬೆಳಕ ಜೀವಕೆ ಇಂಧನ
    ಬದುಕ ಭಾವಗಳಿಗೆ ಬಂಧನ/ಸ್ಪಂದನ.

ಚಿತ್ತಾರ –ಬೆಳಗಲು ಬಾನಲಿ 
     ಬಾಣ ಬಿರುಸುಗಳ ಚಿತ್ತಾರ,
     ನಾಚಿತು ಆ ಸೊಬಗಿಗೆ 
     ತಲೆಬಾಗಿ ನಕ್ಷತ್ರ..!

ದೀಪ - ತೊಳೆಯಲು ಪಾಪ
     ತೊಲಗಲು ಶಾಪ..
	 ಕಡೆಯುತ ಮನಸುಗಳ ಕಡಲಲ್ಲಿ
	 ಸಧ್ಬಾವ ಮಂಥನ,
	 ಉರಿಯುತ ವಿಶಾಲದೆಡೆಗೆ 
	 ಒಯ್ವ ಚೇತನ….

****
ದೀಪಾವಳಿ ಹಬ್ಬದ ದಿನಗಳಲ್ಲಿ ಮಾತ್ರವಲ್ಲ, ಪ್ರತಿದಿನವೂ ಮನೆ-ಮನಗಳಲ್ಲಿ ನಂದದೆ ನಂದಾದೀಪ ಬೆಳಗುತಿರಲಿ ಎಂಬುದೇ, ನೌಕಾಭಿಯಾನದ ದಾರಿಯಲ್ಲಿ ಮೌನದಿ ಮನದಲೆಗಳ ನಡುವೆ ಮಾರ್ದನಿಸುವ ರಾಗದ ಆಶಯ.
****

— ರಾಘವೆಂದ್ರ ಹೆಗಡೆ

ನಕ್ಷತ್ರ ಹನಿ!


ರೂಮಿನಾಚೆಯ ಕಲ್ಲ ಬೆಂಚಿನ
ಮೇಲೆ ಕುಳಿತು
ಕಳೆದ ದಿನಗಳನೆಣಿಸುತ್ತಿದ್ದೆ..
ಮೊನ್ನೆತಾನೆ ಪೌರ್ಣಿಮೆಯ
ಪೂರ್ಣ ಚಂದ್ರನ ಕಂಡ ನೆನಪು..
ಶುಭ್ರ ಬಾನಲಿ ಬೆಳದಿಂಗಳ
ನುಂಗಿ ಮುಸುಕಿದ
ಕತ್ತಲ ಸೀಳಿ ಮಿಣು ಮಿಣು
ಗುಡುತ್ತಿದ್ದ ನಕ್ಷತ್ರಗಳ
ದಂಡ ಕಂಡು ಒಮ್ಮೆಲೆ ಬೆಚ್ಚಿಬಿದ್ದೆ.!

****

ಮೊಂಬತ್ತಿಯ ದೀಪಗಳನ್ನು
ಅನಿವಾರ್ಯವಲ್ಲದಿರೂ
ಹಚ್ಚಿಡುತ್ತಿದ್ದ ಜಾಗವದು..
ಎಣ್ಣೆ ತುಂಬಿದ ಮಣ್ಣ
ಹಣತೆಯಲಿ ಪುಟ್ಟ ದೀಪ
ಇಂದು ಅಲ್ಲಿ ಲಕ್ಷಣದಿ
ಉರಿಯುತಿಹುದು….

****

ಪಾಗಾರದಾಚೆಯ ಮನೆಯ
ಮಗುವ ಕೈಯಲ್ಲಿ ಕಂಡೆ
ಉರಿವ ಸುರುಸುರು ಬತ್ತಿ..
ತಡೆಯಲಾಗಲೇ ಇಲ್ಲ
ಬಾಲ್ಯದ ನೆನಪುಗಳ ಕನವರಿಕೆಯ..
ಅವು ತೋಯ್ದು ಮನಮುದ್ರಿಕೆಯ,
ಬಸಿದಿವೆ ಹನಿಯ
ಆ ನೆನಪುಗಳನೆಲ್ಲ
ಮತ್ತೊಮ್ಮೆ ಕಣ್ಣಂಚಲಿ ಬಿತ್ತಿ..!

****

ಸರ್ವರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
— ರಾಘವೆಂದ್ರ ಐ. ಹೆಗಡೆ