ಬ್ಲಾಗ್ ಸಂಗ್ರಹಗಳು

ಬರತವೇರುವ ಹೊತ್ತು


ಬೆವರುತ್ತದೆ ಬೀಸಿ ಬರದ ಗಾಳಿ
ಬತ್ತಿದ ಸಿಹಿನೀರಲಿ
ಬರತವೇರುವ ಹೊತ್ತು
ಕಿಟಕಿ ಗಾಜಲಿ ಕಂಡ ಹನಿ
ನಿರೂಪಿಸಿದವಗೇ ಗೊತ್ತು
ಊರ ತೊರೆದದ್ದು ಹಾದಿಯೋ ಹೆಜ್ಜೆಯೋ?

ಕವಿತೆ ಮುದುಡಿದ್ದ ಜಾಗದಿ
ಹರಿದ ಹೊಳೆಗೆ ಕೊಚ್ಚಿಹೋದದ್ದೆಷ್ಟು
ತಪ್ಪಿ ನಿನ್ನೆದೆ ತಲುಪಿದ್ದೆಷ್ಟು?
ಗಿಜಗುಡುವ ಬಯಲಿನಲ್ಲಿ
ಉರಿಬೆಂದ ಒಡಲಿನಲಿ
ಅರೆಬೆಂದ ಒಲವಿನಲಿ..

ಕೆನೆಗಟ್ಟಿದ ಕಾಡಿಗೆ
ಮೋಡ ಮಳೆ ಹಕ್ಕಿ
ಕವಲೊಡೆಯದ ಹೆಣೆಗೆ
ಹಡೆದ ನೆರಳ ರಂಗವಲ್ಲಿ
ಬಿರಿವ ಕುಡಿಗೆ ದಾರದ ಕುಣಿಕೆ
ಸಿಕ್ಕಿದ್ದೆಷ್ಟು, ಹಣಿದಿದ್ದೆಷ್ಟು, ಜೀವ ಹೆಣೆದಿದ್ದೆಷ್ಟು?

ತೊರೆಯ ನಿರಂತರತೆಯ
ಅಂತರಾಳದಲಿ ಹೊಸೆದ
ಹಸಿನೆನಪು ಹಸಿದು
ಬೀಸಿಬರದೇ ಗಾಳಿ ಬೆವರುತ್ತಿದೆ
ಬತ್ತಿದ ಸಿಹಿನೀರಲಿ
ಬರತವೇರುವ ಹೊತ್ತು

— ರಾಘವೇಂದ್ರ ಹೆಗಡೆ

ಹನಿ ಹೊತ್ತು ..


ಮೊಳೆತ ಹಾಗೆ ಮೊರೆವ ನೀರು
ಬೆಳೆತ ಬೆಳೆತ ಕೊರೆವ ಬೇರು
ಕನಸ ಹಾಗೆ ನೆಲದ ಹೂವು
ಮತ್ತೆ ಹುಟ್ಟು ಎಲ್ಲೊ..

****

ಮಳೆಯ ಮೇಲೆ ಮೇಘಗಡಲು
ಹನಿ ಹಾಯಿಸಂಕ ಸುಡಲು
ಕುಸಿದ ಪಾಗಾರ ಕಲ್ಲ ದಾರಿ
ಗುರುತ ಅಲ್ಲೋ ಮತ್ತೆಲ್ಲೊ..

****

ಹೊತ್ತು ಹೊತ್ತು ಸಾಗಿದಂತೆ
ಭಾರ ಸ್ವಲ್ಪ ಮಾಗಿದಂತೆ
ಕೊಡೆಯ ಬಸಿವ ಹುಂಡು ಹುಂಡು
ಕಡಲ ಸೆಲೆಗೊ, ಮಣ್ಣ ಕುಡಿಗೊ..

****

ಮೊನ್ನೆ ನಿನ್ನೆಗಳ ಇತಿಹಾಸದಲಿ
ಇದ್ದ ಹನಿಯೆ
ಇಂದು ನಾಳೆಗಳ ಸಾಂಭಾವ್ಯದಲಿ
ಮರುಹುಟ್ಟಿ
ಉರುಳುತದೆ
ಮತ್ತೆ ಹೊತ್ತುಹೊತ್ತಿಗೆ
ಹನಿ ಹೊತ್ತು ಸಾಗುತದೆ
ಕೊರಕಲು ದಾರಿ ಮತ್ತೊಂದು ತಿರುವ ಅರಸಿ..

****

— ರಾಘವೇಂದ್ರ ಹೆಗಡೆ