Monthly Archives: ಫೆಬ್ರವರಿ 2010

ಧರಣಿ


The Earth
ನೀನೆ ಸೂರು, ನೀನೆ ಬೇರು
ಅದೇನು ನಿನ್ನ ಮೇರು . .

ನೀನೆ ಜನ್ಮ, ನೀನೆ ನಾಶ
ಅದೆಂತು ನಿನ್ನ ವೇಷ . .

— ರಾಘವೇಂದ್ರ ಹೆಗಡೆ

ಇರುಳ ಉರುಳು



ಉರುಳಿ ಬರುವ ಇರುಳ

ನಾ ನೂಕಲಾಗದಿರೂ..

ಒಂದಷ್ಟು ಹೊತ್ತು ಇರಲಿ ಬೆಳಕು

ಎಂಬುದೊಂದೇ ಆಸೆ..

ಭವದ ಬೇಗೆಯ ಸುಟ್ಟು

ಒಂದಿನಿತು ಹಸನ ಹಾಸಲು

ಕೊನೆಯ ಚಿಂತೆ ನನಗಿಲ್ಲ

ನೆಣೆಯು ಉರಿವಷ್ಟು ಹೊತ್ತು ನನ್ನ ಬಣ್ಣ

ಅಷ್ಟೇ ಸಾಕು ..

— ರಾಘವೇಂದ್ರ ಹೆಗಡೆ

ಅಸ್ಪಷ್ಟ



ಹೊರಟಿಹುದು ಹಡಗು
ಗುರಿಯ ಸ್ಪಷ್ಟತೆಯಿಲ್ಲ
ದಡದ ಪರಿಚಯವಿಲ್ಲ
ಅಲೆಯ ಅಬ್ಬರವಿಲ್ಲ,
ಘನ ಬಂಡೆಯ ಕುರುಹೂ ಇಲ್ಲ
ತೇಲುತಿದೆ ಶಾಂತ ಸಾಗರದಿ.

ಸುಳಿಗಾಳಿ ಕಾಡುತಲಿಲ್ಲ
ಹಿತವನ್ನೂ ನೀಡುತಲಿಲ್ಲ
ಹತೋಟಿ ಮರೆತು ನರ್ತಿಸುವುದು
ಮರುಕ್ಷಣದಲೇ ಮತ್ತೆ
ಶಾಂತವಾಗುವುದು..
ತೆಲುತಲಿ ಪ್ರಶಾಂತ ಕಡಲಲ್ಲಿ.

ಬೆಳ್ಳಿ ಮೋಡದ ರಂಗಿನ ತೇರು ಇಲ್ಲ
ಬೆಳದಿಂಗಳ ಹಕ್ಕಿಯ ಸಲ್ಲಾಪವಿಲ್ಲ
ಶಾಂತ ನೀರವ ಶಾಂತ ಎಲ್ಲೆಲ್ಲು
ಅಂತ:ಕರ್ಣ ತೇಲುವಷ್ಟು ಶಾಂತ
ಇರಲಿ ಆತ್ಮ ದೀವಿಗೆಯೇ ನಿನ್ನ ದಯ
ಇರುವೊಂದು ಬಿಂದಿ ಜೀವಜಲ ಆಗಲೆಂದೆಂದೂ ಅಕ್ಷಯ.

ಅಚಲ ಗುರಿಯಾಗುತಿಹುದು ಚಂಚಲ
ಇರಲಿ ಉದಯ ಕಿರಣದ
ಅಭಯ ನಿರ್ಮಲ.
ಬದುಕಿಸುತಿಹುದು ಕ್ಷಣಕ್ಷಣಕೂ ನಿಟ್ಟುಸಿರು
ಉಳಿಸುತ ಕನಸ ಮತ್ತೆ ಮತ್ತೆ
ಗುರಿಯ ಆ ತಂಪ ಹಸಿರು

— ರಾಘವೇಂದ್ರ ಹೆಗಡೆ

ತರಗೆಲೆ. .



ಬೀಸು ಗಾಳಿ ನೂಕಬೇಡ
ನಾನು ಒಂದು ತರಗೆಲೆ ..

ಸಾಗು ಸಲಿಲ ಸಲಹು ಜೀವ
ಉಕ್ಕದಿರು ನಾ ಉಳಿಯಲೇ . . . .!?

– ರಾಘವೇಂದ್ರ ಹೆಗಡೆ

ಮನಸು. .



ಗಾಳಿ ಗೋಪುರವಾಗಿ ಹಾರುತ
ಕಡಲ ಅಲೆಯಂತೆ ಭೋರ್ಗರೆಯುತ
ಇರುವಜಗದಿ ಇರುವಿಕೆಯ ಮರೆತು
ಕಲ್ಪನೆಯ ಕನಸುಗಳನೇರಿ ಕುಳಿತು
ಗರಿಯ ಬಿಚ್ಚಿ ಬಾನೆಡೆ ನೆಗೆಯುತ
ನೋವು-ನಲಿವುಗಳ ನಡುವೆ ಧುಮುಕುವ ಭಾವನೌಕೆ ಮನಸು..


ಕೊಳದ ತಾವರೆಯಂತೆ ಅರಳುತ
ಕಂಪ ಸಂಪಿಗೆಯಂತೆ ಗಂಧಬೀರುತ
ಮಾತುಗಳನೂ ಮರೆಸಿ
ಎದೆಯೊಳಗೆ ಮೌನವಾಗಿಸಿ
ಒಲವು/ನೋವುಗಳ ನಡುವೆ ಬೆರೆಯುತ
ನಡೆವ ಅಸ್ತಿತ್ವದ ಕುರುಹು ಮನಸು. .


ಪುಟದ ಕೊನೆಯ ಪದದಲವಿತು
ಮೌನ ವಾಂಛೆಯ ಛಾಪನೊತ್ತಿ
ತನ್ನ ಇರುವಿಕೆಯ ಸಾರಿ
ಕಲ್ಪನೆಯ ತೆರೆಸರಿಸಿ, ಲೌಕಿಕದೆಡೆ ಜಾರಿ
ಎದೆಯಲಿ ನವಿರು ಕಲ್ಪನೆಯ ತುಂಬುತ
ತನುವ ಮುನ್ನಡೆಸುವ ನಾವಿಕ – ಮನಸು. .

— ರಾಘವೇಂದ್ರ ಹೆಗಡೆ

ಯಾವ ಹನಿಯಿದು, ಬಂತೆಲ್ಲಿಂದ ಇಲ್ಲಿಗೆ..


ಯಾರ ಕೈವಾಡವಿದು ಈ ಹಾಸಲಿ ಅರಳಿದೆ ನಾ
ನಭದಿಂದ ಧರೆಗುರುಳುವಲ್ಲಿ
ಇನ್ನು ಎಷ್ಟು ಹೊತ್ತೋ ನನ್ನ ಆಟ
ಉಳಿಯುವೆನೇ ದಿನವು ಮುಗಿಯುವಲ್ಲಿ ..

– ರಾಘವೇಂದ್ರ ಹೆಗಡೆ

(ಚಿತ್ರಕೃಪೆ : ಗೂಗಲ್)