ಬ್ಲಾಗ್ ಸಂಗ್ರಹಗಳು

ನೀಲಿ ಮುಗಿಲಿನಡಿ ಅವಿತ ಸಾಲು ನಕ್ಷತ್ರದಂತೆ…


ನೀಲಿ ಮುಗಿಲಿನಡಿ ಅವಿತ
ಸಾಲು ನಕ್ಷತ್ರದಂತೆ
ನನ್ನೆದೆಯಲಿ ನಿನ್ನ ನೆನಪು

***

ಪ್ರಶಾಂತ ನದಿಯಲಿ
ಜಲತರಂಗ
ನೀ ಎದುರು ನಿಂತಾಗ

***

ಹನಿಯಾಗಲೆಂದೇ
ಬಂದ ಪದ
ನಿನ್ನ ನೋಟಕೆ ಸ್ಥಬ್ದ

***

ನಿನ್ನ ತಲುಪಲಾಗದ್ದಕ್ಕೇ
ಗಾಳಿ ಅಸುನೀಗಿದ್ದು
ಸುರಿಯದೆ ಜಡಿಮಳೆ ಬತ್ತಿದ್ದು

***

ನೀನೋ ಸುಮ್ಮನೆ
ಹೊರಟುಹೋದೆ, ಕಾಮನಬಿಲ್ಲಿನಡಿ
ಹಕ್ಕಿಯ ಗೂಡು ಕಳಚಿಬಿತ್ತು

***

ನಿನ್ನ ತಲುಪಿರದುದಕ್ಕೇ
ಗಾಳಿ ತುಸು ಕೊಸರಿದ್ದು
ಮತ್ತೆಲ್ಲೋ ಹನಿ ಉಸುರಿದ್ದು?

***

— ರಾಘವೇಂದ್ರ ಹೆಗಡೆ

ಬರುಕಿಹನು ಕಾಲದೂರಿಗೆ ಶಿಶಿರ


ಶಿರಬಾಗಿ ಮುದುಡಿರುವ ಮೊಗ್ಗು
ಕಾಯುತ ಭಾನರಶ್ಮಿಯ ಸ್ಪರ್ಶಕೆ
ಅದರೊಳಗೆ ಅವಿತಿರುವ ಹನಿಯು
ತವಕಿಸುತಲಿ ಇಳೆಮುತ್ತಿ ಮುಕ್ತಿಗೆ
ದನಿಯಾಗಿ ಸಣ್ಣನೆಯ ಚಳಿಗಾಳಿಗೆ
ಸಾರುತಿದೆ ಶಿಶಿರನಾಗಮವ ಕಾಲದೂರಿಗೆ

ಒಣಗಿದೆಲೆಗಳ ಉದುರಿಸಿ,
ನಿಂತಿರುವಲಿ ಬೆಚ್ಚನೆಯ
ಆಸರೆಯ ಸಂಕಲ್ಪಿಸಿ ಮರ,
ಹಂಚುತ ತನ್ನ ತರಗೆಲೆಯ ಗೊಬ್ಬರ
ಆಮಂತ್ರಿಸುವುದು ಧರೆ
ಮೈಮುದುಡಿ ಬರುವಂತೆಯೆ ಶಿಶಿರ.

ರವಿಯ ಇಷಾರೆಯೊಂದು
ತಾಕಿ ಉದುರಲು ತುಷಾರಬಿಂದು
ಸುತ್ತೆಲ್ಲ ಕೊರೆವ ಚಳಿ ಇಳಿಯೆ
ಗೂಡಿಂದ ಹೊರಗಿಣುಕಿ ಹಕ್ಕಿ ಮೈಗೊಡವಲು
ಮರಿದುಂಬಿ ಹೂವೆಡೆಗೆ ಗುಂಯ್ ಗುಡುತ ನುಲಿಯೆ
ಮೈಮರೆತು ಮನದುಂಬಿ ಬರುತಿಹನು ಶಿಶಿರ..

— ರಾಘವೇಂದ್ರ ಹೆಗಡೆ