Monthly Archives: ನವೆಂಬರ್ 2010

ಭಯೋತ್ಪಾದನೆ ಮತ್ತು ಬದುಕು ಎಂಬ ಪಳೆಯುಳಿಕೆ.!


ನೆತ್ತರ ಹೊಳೆಯಲ್ಲಿ ಮಿಂದೆದ್ದು ಬರುತ ಪಾತಕ ಶಕ್ತಿ
ಜಗವ ಕಟ್ಟುವ ಬದಲು ನಶಿಸಲು ಬಳಸುತಿದೆ
ತನ್ನ ಅಮೂಲ್ಯ ಯುಕ್ತಿ,
ವರ್ಷಗಳೇ ಉರುಳಾಯ್ತು, ಕಾಲಘಟ್ಟಗಳ ಏರಿಳಿತ ಕಂಡಾಯ್ತು,
ದುಷ್ಟ ಶಕ್ತಿ ನಿರ್ನಾಮವಾಯ್ತು ಎಂದುಕೊಳ್ಳುತ್ತಿರುವಂತೆ
ಮತ್ತೆ ಮೈಕೊಡವಿ ನಿಲ್ಲುವ ಈ ರಾಕ್ಷಸರು, ರಾಕ್ಷಸತ್ವವು..

ರಕ್ತ ಬೀಜಾಸುರರಂತೆ ಬೆಳೆಯುತ ಗಲ್ಲಿಗಲ್ಲಿಗಳ ನಡುವಲ್ಲಿ
ಮರೆಯಲ್ಲಿ ಕಾರ್ಯಾಚರಿಸುವ ಮಹಾಪಾತಕಿಗಳು, ಭಯೋತ್ಪಾದಕರು..
ಅಮಾಯಕರ ರಕ್ತ ಹೀರಿ ಬದುಕುತ, ದರ್ಪ ಪ್ರದರ್ಶಿಸುತ
ಕಾಲಪರ್ವದಿ ತಮ್ಮ ಪರ್ವದ ಕೆಟ್ಟ ಛಾಪೊತ್ತುತ
ಪ್ರಕೃತಿಗೇ ಸವಾಲೆಸೆವವರು..

ಬೆದರಿಸಿ ಕದ್ದೊಯ್ದು, ಗಾಯದಮೇಲೆ ಬರೆಯೆಳೆದಂತೆ
ಹೇಯ ಅಮಾನುಷವ ಪ್ರದರ್ಶಿಸುವವರು
ಪ್ರಚೋದನೆಯ ಪುಂಗಿಯೂದುತ ಕಾಲಸರ್ಪವ
ಬಡಿದೆಬ್ಬಿಸುವರು, ಬೆಚ್ಚಿಬೀಳಿಸುವರು.!

ಮನುಜ ಪಥದಿ ಹೊರಟ ಬಂಡಿಯ ಅಲಗುಗಳ
ಅಲುಗಿಸುತ, ದುಷ್ಟಸಾಮರ್ಥ್ಯ ಹಿಗ್ಗುತಿದೆ;
ವಿಕೃತ ನಗೆಯ ಬೀರುತಿದೆ..
ರಕ್ಷಣೆಗೆ ತುಕಡಿಗಳ ನಿರೀಕ್ಷೆ, ಆದರಿಲ್ಲಿ
ಜೀವದ ಬೆಲೆಯ ತಕಡಿಗಳಲ್ಲಿಟ್ಟು ಅಳೆವ ಪರೀಕ್ಷೆ !
ಇದು ಮನುಕುಲದ ಅಂತ್ಯದ ಕುರುಹೆ..?

ಬೇಡವೆಂದರೂ ಕರೆದವರಂತೆ ಮನದಿ ಬಂದಡಗುವ ಭಯ
ಧೈರ್ಯದಿ ದುಷ್ಟರನೆದುರಿಸಲು ಮುನ್ನುಗ್ಗಿದರೂ
ಒಂದರೆಕ್ಷಣ ಹಿಂಜರಿವ ಸ್ಥೈರ್ಯ
ಅತ್ತ ಜೀವತೆಗೆದು ತಾನೂ ಅವಸಾನ ಕಾಣುವ
ಪ್ರೇತಜಾತಿಯ ಜೀವ ಎಂಬ ಪಿಡುಗು..!

ಪೈಶಾಚಿಕತೆಯ ವಿಶ್ವಕೇ ತೆರೆದಿಡುತ
ಭಯವ ಮೂಡಿಸುತ ದಿನದಿನ
ರಕ್ತ ಬೀಜಾಸುರರಂತೆ ಹುಟ್ಟಿಬೆಳೆವ
“ಭಯೋತ್ಪಾದಕ” ಸಂಘಟನೆಗಳು..
ಇದು ಮನುಕುಲದ ಅಂತ್ಯದ ಕುರುಹೇ..?!

* * * *

ಒಮ್ಮೆ ನೆನಪಿಸಿಕೊಳ್ಳಿ. ಎರಡು ವರ್ಷಗಳ ಹಿಂದೆ ಇದೇ ದಿನ…
ಭಯೋತ್ಪಾದನೆಯ ವಿಕೃತ ಮುಖ ನಗೆ ಬೀರಿದ್ದು, ಮುಂಬೈ ಹೊತ್ತಿ ಹೊಗೆಯಾಗಿದ್ದು…!

ಅದೆಷ್ಟೋ ಅಮಾಯಕ ಜೀವಗಳ ಬಲಿ ಪಡೆದಿದ್ದು..

ವಿಪರ್ಯಾಸ ನೋಡಿ; ಜೀವಂತ ಸೆರೆಸಿಕ್ಕ ಒಬ್ಬನೇ ಒಬ್ಬ ಪಾತಕಿ ಜೈಲಿನಲ್ಲಿ ಇಂದಿಗೂ ರಾಜಾಥಿತ್ಯವ ಅನುಭವಿಸುತ್ತಿದ್ದಾನೆ.
ಅದೆಷ್ಟೋ ಕೋಟಿ ಕೇವಲ ಅವನಿಗಾಗೇ ವ್ಯಯಿಸಲಾಗಿದೆ. ಛೆ..!
* * * *

ಆ ಧಾಳಿಯಲ್ಲಿ ಮಡಿದವರೆಲ್ಲರ ಆತ್ಮಕ್ಕೆ ಶಾಂತಿ ಸಿಗಲಿ. ಮುಂದೆಂದೂ ಇಂತಹ ದುರ್ಘಟನೆ ಸಂಭವಿಸದಿರಲಿ. .

— ರಾಘವೇಂದ್ರ ಹೆಗಡೆ

ಚಿತ್ರ ಕೃಪೆ:
http://www.jeetscbce.wordpress.com
http://www.islandcrisis.net
http://www.srai.org
http://www.thehindu.com

ಚೌಕಟ್ಟುಗಳ ಸಂಕೀರ್ಣ ದಾಟಿ ಬರಲು..


ಹಣತೆ – ಬೆಸುಗೆ ಬತ್ತಿಯ ಜೊತೆಗೆ,
          ಚೌಕಟ್ಟುಗಳ ಸಂಕೀರ್ಣ 
          ದಾಟಿ ಬರಲು ಬೆಳಕು, 
          ಭಾವಸ್ಥರಗಳ ಅನಂತದವರೆಗೆ..

ನೆಣೆ - ಬೆಳಕಿಗೆ ಹೊಣೆ
        ಹರಿವ ಕಿರಣಗಳಿಗೆ ಎಣೆ/ಹಣೆ..

ಎಣ್ಣೆ - ಬೆಳಕ ಜೀವಕೆ ಇಂಧನ
        ಬದುಕ ಭಾವಗಳಿಗೆ ಬಂಧನ/ಸ್ಪಂದನ.

ಚಿತ್ತಾರ –ಬೆಳಗಲು ಬಾನಲಿ 
          ಬಾಣ ಬಿರುಸುಗಳ ಚಿತ್ತಾರ,
          ನಾಚಿತು ಆ ಸೊಬಗಿಗೆ 
          ತಲೆಬಾಗಿ ನಕ್ಷತ್ರ..!

ದೀಪ - ತೊಳೆಯಲು ಪಾಪ
         ತೊಲಗಲು ಶಾಪ..
	 ಕಡೆಯುತ ಮನಸುಗಳ ಕಡಲಲ್ಲಿ
	 ಸಧ್ಬಾವ ಮಂಥನ,
	 ಉರಿಯುತ ವಿಶಾಲದೆಡೆಗೆ 
	 ಒಯ್ವ ಚೇತನ….

****
ದೀಪಾವಳಿ ಹಬ್ಬದ ದಿನಗಳಲ್ಲಿ ಮಾತ್ರವಲ್ಲ, ಪ್ರತಿದಿನವೂ ಮನೆ-ಮನಗಳಲ್ಲಿ ನಂದದೆ ನಂದಾದೀಪ ಬೆಳಗುತಿರಲಿ ಎಂಬುದೇ, ನೌಕಾಭಿಯಾನದ ದಾರಿಯಲ್ಲಿ ಮೌನದಿ ಮನದಲೆಗಳ ನಡುವೆ ಮಾರ್ದನಿಸುವ ರಾಗದ ಆಶಯ.
****

— ರಾಘವೆಂದ್ರ ಹೆಗಡೆ

ಬೆಳಕ ಹಬ್ಬಕ್ಕೊಂದು ಭಾವಗೀತೆ


 

ಭರವಸೆಯ ಬೆಳಕೆ, ಜ್ಞಾನಸಿರಿ ಬೆಳಕೆ
ಜಗತುಂಬಿ ಅರಳು ಬಾ ಬೆಳಕೆ
ಮುನ್ನಡೆಸು ಜಗವ ಸನ್ಮಾರ್ಗ ಪಥಕೆ.

ಭಾವಕೆ ಮೀರಿದ ಭಾವದ ಗುಚ್ಚ
ವಿಶ್ವವ ಮೀರಿದ ಚುಕ್ಕಿಯ ಕಳಶ
ಜೀವಾಭ್ಯುದಯ, ಭಾವಾಭ್ಯುದಯ
ಹೊನ್ನ ಹೊಳಪಿನ ಮಂಗಳ ದೀಪದುದಯ..
ಜ್ವಾಲೆಗೆ ತಣಿವ, ನೆರಳಿಗೆ ದಿಶೆಯ
ಹರಸುವ ಶಿಲ್ಪದ ಪ್ರಭೆಯು ನೀ
ಬಾ ಬೆಳಕೆ ಇರುಳಳಿಸಿ..

ಹಾದಿಯ ಕುರುಹಿನ ಗುರುತಿನ ಫಲಕ
ಅಂತಃಕರ್ಣ ಸ್ಪರ್ಶಿ ಅಂತರಂಗ ತಿಲಕ
ಮೆಲ್ಲನೆ ಓಡುವ ಕಾಲದ ಮಾರ್ದನಿ
ಇರುಳನು ಅಳಿಸಲು ಬೆಳಗುವ ನೀ ದನಿ
ಜೀವದ ಹಸಿರು, ಭಾವದ ಉಸಿರು
ಕಾಯುವ ಶಕ್ತಿಯ ಶಕ್ತಿ ನೀ
ಬಾ ಬೆಳಕೆ ಅವತರಿಸಿ..

*****

ದೀಪಾವಳಿಯ ಹಾರ್ದಿಕ ಶುಭಾಶಯಗಳು.

— ರಾಘವೆಂದ್ರ ಹೆಗಡೆ

ಸಾರಿಗೆ ಸಂಸ್ಥೆಗಳ ಲೆಕ್ಕಾಚಾರದ ಆಟ, ಊರು ತಲುಪುವ ಧಾವಂತದಲ್ಲಿ ಪ್ರಯಾಣಿಕರ ಪರದಾಟ..!


ನಾಳೆಯಿಂದ ಮೂರು ದಿನಗಳ ಕಾಲ ದೀಪಾವಳಿ. ಬಹುತೇಕ ಎಲ್ಲ ವರ್ಗಗಳ ಜನರೂ ಬಹಳ ಅದ್ದೂರಿಯಿಂದ ಆಚರಿಸುವ ಹಬ್ಬ.
ಸಾಮನ್ಯವಾಗಿ ಹಬ್ಬಕ್ಕೆ ಎರಡು ದಿನ ಮಾತ್ರ ರಜೆ ಇರುತ್ತದೆ. ಆದರೆ ಈ ಬಾರಿ ಆ ರಜೆಗಳ ಜೊತೆಗೇ ವಾರಂತ್ಯದ ಖಾಯಂ ರಜೆಯೂ ಅಂಟಿಕೊಂಡಿರುವುದರಿಂದ ನಗರ, ಮಹಾನಗರ ಸೇರಿದ ಬಹುತೇಕ ಎಲ್ಲರೂ ಊರಿಗೆ ಹೋಗಲು ಸಹಜವಾಗಿ ಹಾತೊರೆಯುತ್ತಾರೆ.

ಬೆಂಗಳೂರು ಸೇರಿರುವ ನಾಡಿನ ಮೂಲೆಮೂಲೆಗಳ ಜನರಲ್ಲಿ ಬಹುತೇಕರು ಈಗಾಗಲೇ ಕಷ್ಟಪಟ್ಟು ಬಸ್ಸೊಂದ ಹಿಡಿದು ಸೀಟಿಗಾಗಿ ತಡಕಾಡುತ್ತಿದ್ದಾರೆ, ಮತ್ತೆ ಕೆಲವರು ಮುಂದಿನ ಬಸ್ಸು ಖಾಲಿ ಬರಬಹುದೆಂಬ ಹಿಡಿ ವಿಶ್ವಾಸವ ಹಿಡಿದು ಮಸುಕಾದ ಬೋರ್ಡುಗಳತ್ತ ದೂರದೂರಕೆ ನೋಟ ನೆಟ್ಟಿದ್ದಾರೆ.!
ಮೆಜೆಸ್ಟಿಕ್ ನಲ್ಲಿರುವ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣವಂತೂ ಜನಜಾತ್ರೆಯಾಗಿಹೋಗಿದೆ. ಪಾವಗಡ, ಕುಣಿಗಲ್, ಬೆಳಗಾವಿ, ತುಮಕೂರು, ಬೀದರ್, ಚಿಕ್ಕೋಡಿ, ಬಿಜಾಪುರ, ಮಧುಗಿರಿ, ಬಳ್ಳಾರಿ, ಶಿವಮೊಗ್ಗ, ಸಾಗರ, ದಾವಣಗೆರೆ, ಗುಲ್ಬರ್ಗ, ಧಾರವಾಡ, ಶಿರಸಿ,ಕುಮಟಾ, ಕಾರವಾರ, ಚಿಕ್ಕಮಗಳೂರು, ಮಂಗಳೂರು………. ಹೀಗೆ ನಾಡಿನ ವಿವಿಧೆಡೆ ಸಾಗುವ ಎನ್.ಇ.ಕೆ.ಆರ್.ಟಿ.ಸಿ, ಎನ್.ಡ್ಬ್ಲೂ.ಕೆ.ಆರ್.ಟಿ.ಸಿ.,., ಕೆ.ಎಸ್.ಆರ್.ಟಿ.ಸಿ. ಬಸ್ಸುಗಳು, ಸಕ್ಕರೆ ಇರುವೆಗಳಿಂದ ಮುತ್ತಿಕೊಂಡಂತೆ ಜನರಿಂದ ಮುತ್ತಿಕೊಳ್ಳುತ್ತಿವೆ.!
ಅದು ಬೇಕಿದ್ದರೆ ಸೀಟು ಹರಿದ ಬಸ್ಸಾಗಿರಲಿ, ಬದಿಯ ಕಿಟಕಿಯ ಗಾಜು ಒಡೆದದ್ದಾಗಿರಲಿ, ಸಂಜೆಯ ತುಂತುರು ಮಳೆಗೆ ಬಸ್ಸಿನ ನಟ್ಟು ಬೋಲ್ಟುಗಳಿಂದ ನೀರು ಕರ್ರ್ರ್ ನೆ ಇಳಿಯುತ್ತಿರಲಿ.! ಅವುಗಳೆಲ್ಲ ಇಂದಿನ ಮಟ್ಟಿಗೆ ಲೆಕ್ಕದಿಂದ ಹೊರಕ್ಕೆ..! ಬಸ್ಸು ಹೇಗೇ ಇರಲಿ ಆದರೆ ಮುಂದುಗಡೆ ನಮ್ಮೂರ ಬೋರ್ಡೆ ಬರೆದಿರಲಿ ಎಂಬುದೇ ಕತ್ತು ವಾಲಿಸಿ, ಬ್ಯಾಗು ತೂಗಿಸಿ ಕಾತರಿಸಿರುವ ಪ್ರಯಾಣಿಕರ ಆಶಯವಾಗಿದೆ.!

ಇನ್ನು ನವರಂಗ್ ದಲ್ಲಿ ರಸ್ತೆ ಬದಿ ಬಸ್ಸಿಗಾಗಿ ಕಾದು ನಿಂತಿರುವ ಪ್ರಯಾಣಿಕರ ಪಾಡನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ..!

ಹಬ್ಬ ಬಂತೆಂದರೆ ಸಾರಿಗೆ ಸಂಸ್ಥೆಗಳಿಗೂ ಹಬ್ಬವೆ. ಸಾಮಾನ್ಯ ದಿನಗಳಲ್ಲಿ ೩೫೦ ರೂ ಇರುವ ಟಿಕೆಟ್ ಬೆಲೆ ಹಬ್ಬಕ್ಕೆ ೩-೪ ದಿನ ಮುಂಚಿತದಿಂದ ಹಿಡಿದು ಹಬ್ಬ ಮುಗಿದು ೩-೪ ದಿನಗಳ ವರೆಗೆ ಅಂದರೆ ಸುಮಾರು ೧ ವಾರಗಳ ಮಟ್ಟಿಗೆ ೭೫೦ ಆಗಿರುತ್ತದೆ.ಅದೂ ಪ್ರಯಾಣಿಸುವ ೧೫ ದಿನಕ್ಕಿಂತ ಮುಂಚೆ ಟಿಕೆಟ್ ಕೊಂಡರೆ ಮಾತ್ರ..! ಆದರೆ ಹೊರಡಲು ೩-೪ ದಿನ ಮುಂಚೆ ಟಿಕೆಟ್ ಕೇಳಿದರೆ ಅದು ಸಿಗುವ ಬಗ್ಗೆ ಯಾವ ಖಾತ್ರಿಯೂ ಇರುವುದಿಲ್ಲ. ಸಿಕ್ಕರೂ ಅದೇ ಟಿಕೆಟ್ ಬೆಲೆ ೧೦೦೦, ೧೫೦೦ ಹೀಗೆ ಊಹೆಗೂ ತೋಚದಷ್ಟು ಏರಿರುತ್ತದೆ. ಹೀಗೆ ದರ ಏರಿಸುವ ಸಲುವಾಗೇ ಕೆಲವೊಮ್ಮೆ ಟಿಕೆಟ್ನ ಕೃತಕ ಅಭಾವ ಸೃಷ್ಟಿಯಾಗುತ್ತದೆ..! ಖಾಸಗೀ ಸಾರಿಗೆ ಸಂಸ್ಥೆಗಳಂತೂ ಬೆಲೆ ಏರಿಕೆ ಮತ್ತು ಟಿಕೆಟ್ ಅಭಾವಗಳಂತಹ ನಾಟಕಗಳಲ್ಲಿ ಮುಂಚೂಣಿಯಲ್ಲಿರುತ್ತವೆ.
ಅದೆಲ್ಲ ಏನೇ ಇರಲಿ, ತಾವು ಸುರಕ್ಷಿತವಾಗಿ ಮನೆಗೆ ತಲುಪಲಿ ಎಂಬುದೇ ಪ್ರತಿಯೊಬ್ಬ ಪ್ರಯಾಣಿಕನ ಮನದಾಳದ ಅಳಲಾಗಿದೆ.

ಇವೆಲ್ಲ ಈ ಸಂಜೆ ಉದ್ಯಾನನಗರಿಯಲ್ಲಿ ಕಂಡ ದೃಶ್ಯಗಳು. ಅಂದ ಹಾಗೆ ಬಸ್ಸಿನಲ್ಲಿ ಕಷ್ಟಪಟ್ಟು ಸೀಟುಹಿಡಿದವರಿಗೂ, ಸೀಟು ಸಿಗದೇ, ಬೇರೆ ಬಸ್ಸನ್ನೂ ಏರಲಾಗದೇ ನಿಂತೇ ಹೊರಟವರಿಗೂ, ಮುಂದಿನ ಬಸ್ಸಿಗಾಗಿ ಕಾಯುತ್ತಿರುವವರಿಗೂ, ಟಾಟಾ ಮಾಡಿ ಬೀಳ್ಕೊಡಲು ಬಂದವರಿಗೂ, ಸೀಟಿಲ್ಲ ರೈಟ್ ರೈಟ್ ಎನ್ನುವ ಕಂಡಕ್ಟರ್ ಗಳಿಗೂ, ಟ್ರಾಫಿಕ್ಕು ಸ್ವಲ್ಪ ಕ್ಲೀಯರಾಗಿದ್ದ ಕಂಡು ರಭಕ್ಕನೆ ಗಿಯರು ಬದಲಿಸಿದ ಡ್ರೈವರ್ ಗಳಿಗೂ…. ಮತ್ತು ನಿಮ್ಮೆಲ್ಲರಿಗೂ Wish You a Happy and Safe Journey… and also
…. WiSh YoU A HaPPy DEEPAVALI…..

— ರಾಘವೇಂದ್ರ ಹೆಗಡೆ.

ನಕ್ಷತ್ರ ಹನಿ!


ರೂಮಿನಾಚೆಯ ಕಲ್ಲ ಬೆಂಚಿನ
ಮೇಲೆ ಕುಳಿತು
ಕಳೆದ ದಿನಗಳನೆಣಿಸುತ್ತಿದ್ದೆ..
ಮೊನ್ನೆತಾನೆ ಪೌರ್ಣಿಮೆಯ
ಪೂರ್ಣ ಚಂದ್ರನ ಕಂಡ ನೆನಪು..
ಶುಭ್ರ ಬಾನಲಿ ಬೆಳದಿಂಗಳ
ನುಂಗಿ ಮುಸುಕಿದ
ಕತ್ತಲ ಸೀಳಿ ಮಿಣು ಮಿಣು
ಗುಡುತ್ತಿದ್ದ ನಕ್ಷತ್ರಗಳ
ದಂಡ ಕಂಡು ಒಮ್ಮೆಲೆ ಬೆಚ್ಚಿಬಿದ್ದೆ.!

****

ಮೊಂಬತ್ತಿಯ ದೀಪಗಳನ್ನು
ಅನಿವಾರ್ಯವಲ್ಲದಿರೂ
ಹಚ್ಚಿಡುತ್ತಿದ್ದ ಜಾಗವದು..
ಎಣ್ಣೆ ತುಂಬಿದ ಮಣ್ಣ
ಹಣತೆಯಲಿ ಪುಟ್ಟ ದೀಪ
ಇಂದು ಅಲ್ಲಿ ಲಕ್ಷಣದಿ
ಉರಿಯುತಿಹುದು….

****

ಪಾಗಾರದಾಚೆಯ ಮನೆಯ
ಮಗುವ ಕೈಯಲ್ಲಿ ಕಂಡೆ
ಉರಿವ ಸುರುಸುರು ಬತ್ತಿ..
ತಡೆಯಲಾಗಲೇ ಇಲ್ಲ
ಬಾಲ್ಯದ ನೆನಪುಗಳ ಕನವರಿಕೆಯ..
ಅವು ತೋಯ್ದು ಮನಮುದ್ರಿಕೆಯ,
ಬಸಿದಿವೆ ಹನಿಯ
ಆ ನೆನಪುಗಳನೆಲ್ಲ
ಮತ್ತೊಮ್ಮೆ ಕಣ್ಣಂಚಲಿ ಬಿತ್ತಿ..!

****

ಸರ್ವರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು.
— ರಾಘವೆಂದ್ರ ಐ. ಹೆಗಡೆ

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.



ಭಾವನೆಗಳ ಥಳುಕಲ್ಲಿ
ಭಾಷೆಯ ಉಸಿರ ಹರಸಿದ ಬೆಳಕು
ಖುಷಿಯ ಮನಗಳ ಪುಳಕ
ಮತ್ತು ನೊಂದು ಬೆಂದ
ತುಮುಲಗಳ ಹರಿವಲ್ಲಿ
ಪದರೂಪದಿ ಬರುವ
ಅಕ್ಷರಗಳೆ ಬದುಕು.,
ಅಕ್ಕರೆಯಲಿ ಸಾಂತ್ವನಿಸುವ
ಸೊಗಡ ರೆಕ್ಕೆ ಪುಕ್ಕಗಳು ಇದಕೊಡಪು…
ಭಾವಲಹರಿ ಹರಿವಲ್ಲಿ
ಇರಬಹುದು ನೂರು ನೂರು ಭಾಷೆ,
ಕರುನಾಡ ಆರುಕೋಟಿ ಹಣತೆಗಳಿಗೆ
ಎಂದಿಗೂ ಕನ್ನಡವೇ ದಿಶೆ..
ಕೊನೆಯಿರದ ಮೇರುಗಳಿಗೆ
ಅದುವೆ ದಾರಿ ನಕ್ಷೆ..
ಕನ್ನಡದ ಪ್ರತಿಮನಕೂ
ಕನ್ನಡವೇ ರಕ್ಷೆ
ಕನ್ನಡವೇ ಕಕ್ಷೆ..

ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

— ರಾಘವೇಂದ್ರ ಹೆಗಡೆ