ಬ್ಲಾಗ್ ಸಂಗ್ರಹಗಳು

ಎದೆಯ ಪದ ಹಾಯುವಲ್ಲಿ …


ಹಸಿರೆಲೆಯು ಚಿಗುರುತಿದೆ
ಮತ್ತೆ ಚೈತ್ರದ ಬೆಳಕು
ನಿಂತ ನಿಲುನೆಲವು ನವ್ಯ
ಹೊಸತಾಗಿ ಹರಿಯುತಿದೆ
ಹಳೆಯ ಮಂದಾಕಿನಿಯು
ನಿನ್ನೆದೆಗಡಲದರ ಗಮ್ಯ.

ಮರಳ ತೀರದಿ ಶಬ್ದ
ಸ್ಥಬ್ದವಾದಷ್ಟೇ ಹೊತ್ತು
ಮೌನದಲಿ ಉಸಿರೆಲ್ಲ ದನಿಯುಸುರಿದ್ದು
ದೀಪಸಾಲಿನ ಸ್ಥಂಭ
ಬೆಳಗಲಣಿಯಾದಷ್ಟೇ ಹೊತ್ತು
ಹೆಗಲಿನಲಿ ಜಗದ ಅಲೆ ನಗುವತೇಲಿದ್ದು

ಹಾದಿಹಾದಿಗಳಿಗೆಲ್ಲ
ನಕ್ಷತ್ರ ಕಾವಲುಂಟು
ರಿಂಗಣಿಸುವುದದೇಕೆ
ಮತ್ತೆ ಮೌನ!
ರಿಂಗಣಿಸದಿರದೇಕೆ
ಮತ್ತೆ ಮೌನ!?

ಹಗಲುಗಣ್ಣಲಿ ಇನ್ನೊಂದಿಷ್ಟಿರುಳು
ಕಳೆದೇ ಹೋಗಲಿ
ಹರಿದಾದರೂ ನಿನ್ನ ನಾ ತಲುಪುವೆನು;
ಚಕ್ರ ಕಟ್ಟಾಗಿದೆ
ರೆಕ್ಕೆ ಬಿಚ್ಚುವುದೊಂದೇ ಬಾಕಿ
ಈಗಾದರೂ ನಾ ಮುಂದೆ ಹಾಯಬೇಕು
ಇಲ್ಲವಾದರೆ ಮತ್ತೆ ಕಾಯಬೇಕು?

ಹಸಿರೆಲೆಯು ಚಿಗುರುತಿದೆ
ಮತ್ತೆ ಚೈತ್ರದ ಬೆಳಕು…

— ರಾಘವೇಂದ್ರ ಹೆಗಡೆ

***

ಸರ್ವರಿಗೂ ‘ವಿಜಯ’ಸಂವತ್ಸರ ಸನ್ಮಂಗಲವನ್ನುಂಟುಮಾಡಲಿ.
ರಾ ಗ ನೌ ಕೆ‘ಯ ಓದುಗರಿಗೆಲ್ಲ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು 🙂
|| ಹರೇ ರಾಮ ||

— ರಾಘವೇಂದ್ರ ಹೆಗಡೆ

***

ಹರಿಯಲಿ ಹೊಳೆಯಲಿ ಹೊಸ ನೀರು..


ನವ ಚಿಗುರಿಗೆ ಒನಪಾಗಲಿ ಬೇರು

ಹರಿಯಲಿ ಹೊಳೆಯಲಿ ಹೊಸ ನೀರು

ನಡೆಸಲಿ ಬದುಕ ದಿನದಿನ ಯಶದ ತೇರು

ಸಕಲ ಜೀವಕೆ ಯುಗಾದಿ ಶುಭತರಲಿ ನೂರುನೂರು ..

– – – – – – – – – – – – – – – – – –

ಖರ ಸಂವತ್ಸರದ ಮತ್ತು ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

— ರಾಘವೇಂದ್ರ ಹೆಗಡೆ

ಚಿತ್ರಕೃಪೆ :: ಈ ವೆಬ್ ತಾಣ