Category Archives: ಪದಗೊಂಚಲು

two, three lines description about a word by Raghavendra Hegde.

ನೀಲಿ ಮುಗಿಲಿನಡಿ ಅವಿತ ಸಾಲು ನಕ್ಷತ್ರದಂತೆ…


ನೀಲಿ ಮುಗಿಲಿನಡಿ ಅವಿತ
ಸಾಲು ನಕ್ಷತ್ರದಂತೆ
ನನ್ನೆದೆಯಲಿ ನಿನ್ನ ನೆನಪು

***

ಪ್ರಶಾಂತ ನದಿಯಲಿ
ಜಲತರಂಗ
ನೀ ಎದುರು ನಿಂತಾಗ

***

ಹನಿಯಾಗಲೆಂದೇ
ಬಂದ ಪದ
ನಿನ್ನ ನೋಟಕೆ ಸ್ಥಬ್ದ

***

ನಿನ್ನ ತಲುಪಲಾಗದ್ದಕ್ಕೇ
ಗಾಳಿ ಅಸುನೀಗಿದ್ದು
ಸುರಿಯದೆ ಜಡಿಮಳೆ ಬತ್ತಿದ್ದು

***

ನೀನೋ ಸುಮ್ಮನೆ
ಹೊರಟುಹೋದೆ, ಕಾಮನಬಿಲ್ಲಿನಡಿ
ಹಕ್ಕಿಯ ಗೂಡು ಕಳಚಿಬಿತ್ತು

***

ನಿನ್ನ ತಲುಪಿರದುದಕ್ಕೇ
ಗಾಳಿ ತುಸು ಕೊಸರಿದ್ದು
ಮತ್ತೆಲ್ಲೋ ಹನಿ ಉಸುರಿದ್ದು?

***

— ರಾಘವೇಂದ್ರ ಹೆಗಡೆ

ದನಿಯಾಗದ ಮೂರು ಹನಿ…


ತೀರದ ಬಾಹುಗಳಲಿ ತೊರೆ
ನದಿ – ಸಂಸಾರದ ಹೊರೆ
ನೊಗವೆನಿತು ಒಂದು ಬದುಕು

***

ಊರು ದಾರಿಗೆ
ದಿಕ್ಕು ದೆಸೆಗಳ ಪರಿಧಿ
ಮನಸೋ ಅಗಣಿತ ಪುಟ

***

ಅನಾಥ ಬಯಲಲಿ ಕಿಟಕಿ
ಸರಳುಗಳನನವರಿಸಿ ಕುಳಿತದ್ದು
ನೀ ತಿರುಗಿನೋಡಿದಷ್ಟೇ ದಿಟ!

***

— ರಾಘವೇಂದ್ರ ಹೆಗಡೆ

ಆಗುತ್ತದೆ ಹೀಗೂ…


೧. ನಡುಮಧ್ಯಾಹ್ನ ಸುಡುಬಿಸಿಲಲ್ಲಿ ಸೈಕಲ್ ತುಳಿಯುತ್ತ ಬಂದು ಡಜನುಗಟ್ಟಲೆ ಎಫ಼್.ಡಿ. ಸೆರ್ಟಿಫಿಕೇಟುಗಳನ್ನು ನವೀಕರಿಸಲು ಬ್ಯಾಂಕಿಗೆ ಕೊಡುವ ಎಪ್ಪತ್ತರ ವ್ಯಕ್ತಿಯನ್ನು ನೋಡುತ್ತ ಬದುಕಿನ ಬಗ್ಗೆ ವಿಪರೀತ ಹೆಮ್ಮೆ, ವ್ಯಾಮೋಹ, ಅಭಿಮಾನ ಪಡುತ್ತಲೆ ನಾನು ಬೈಕಿಗೆ ಪಕ್ಕೆಹೊಡೆಯುತ್ತೇನೆ; ಆಗೊಮ್ಮೊಮ್ಮೆ ನ್ಯೂಟನ್ನನ ಮೂರನೇ ನಿಯಮ ಎಂಜಿನ್ ನ ಬದಲು ನನ್ನಮೇಲೆ ಅನ್ವಯವಾಗಿಬಿಡುತ್ತದೆ.

೨. ಪ್ಲಾಸ್ಟಿಕ್ ಬಳಕೆ ನಿಷೇಧಿಸಿ – ಪರಿಸರ ಉಳಿಸಿ ಎಂಬೆಲ್ಲ ಘೋಷಣೆ-ಜಾಗ್ರತಿಗಳಿಗೆ ತಲೆದೂಗುತ್ತಲೆ ನಂದಿನಿ ಶಾಪಿನವನ ಬಳಿ ’ಹಾಲಿನ ಪ್ಯಾಕೆಟ್ಗೊಂದು ಪ್ಲಾಸ್ಟಿಕ್ ಕವರ್ ಹಾಕಿಕೊಡಪ್ಪ’ ಎಂದು ಆಗ್ರಹಿಸುವ ನನ್ನ ಧೋರಣೆಗೆ ಧಿಕ್ಕಾರವಿರಲಿ.

೩. ಬದುಕಿನ ಅನುಭವಗಳಿಗೆಲ್ಲ ಪದವಿ ಕೊಡುವ ವಿಶ್ವವಿದ್ಯಾಲಯವೊಂದಿದ್ದರೆ ಅರ್ಜಿ ಗುಜರಾಯಿಸಿಬಿಡಬಹುದಿತ್ತು ಎಂದು ’ಅಡ್ವಾನ್ಸ್ಡ್ ಅಲ್ಗಾರಿದಮ್ಸ್’, ’ಫಾರ್ಮಲ್ ಮಾಡೆಲ್ಸ್’ ಮುಂತಾದ ವಿಚಿತ್ರ-ವಿಚಿತ್ರ ಹೆಸರಿನ ತರ್ಕಕ್ಕೆ ನಿಲುಕದ ವಿಷಯಗಳನ್ನು ಓದುವಾಗ ಹಲವು ಬಾರಿ ಅನಿಸುವುದಿದೆ.

೪. ಅರೆವಾಹಕ, ಉಷ್ಣವಾಹಕ, ವೇಗವರ್ಧಕ, ಸಂಸ್ಕಾರಕ, ಸಂಗ್ರಾಹಕ, ಕಾರ್ಯನಿರ್ವಾಹಕ, ಸೂಚಕ, ನಿಯಂತ್ರಕ, ಡಯೋಡು-ಚಿಪ್ಪು ಮುಂತಾದವುಗಳ ಜೊತೆಜೊತೆಗೇ ತೆಂಗಿನ ಚಿಪ್ಪು, ಅಡಿಕೆ ಶಿಪ್ಪು ಎಲ್ಲ ಅನುಭಾವ ಒತ್ತರಿಸಿ ಸಾಲುಸಾಲಾಗುತ್ತಿದ್ದಂತೆ ಯಾರೋ ತಿಳಿದವರು ಅದು ಕವಿತೆಯೇ ಅಲ್ಲ ಅಂದುಬಿಡುತ್ತಾರೆ.

೫. ಈ ಬಾರಿ ಖಂಡಿತ ಸೂರ್ಯನ ಬಿಂಬ, ನೀರಿನ ಪ್ರತಿಫಲನ, ಬೆಳಕ ವಕ್ರೀಭವನ-ಚದುರುವಿಕೆ ಮುಂತಾದ ಎಕ್ಸ್ ವೈ ಝಡ್ ಎಫೆಕ್ಟುಗಳನ್ನೆಲ್ಲ ತೋರಿಸುತ್ತೇನೆಂದು ನಂಬಿಸುವ ಕ್ಯಾಮರ ಲೆನ್ಸು ಕಡೆಗೂ ನೇತ್ರದ್ವಯಗಳೆದುರು ಸೋತುಬಿಡುತ್ತದೆ.

೬. ಊರುಬೆಸೆವ ಸಲುವಾಗಿ ದಾರಿಯೊ ಅಥವಾ ದಾರಿಬೆಸೆವ ಸಲುವಾಗಿ ಊರೋ, ಜೀವಕೆ ಬದುಕೋ ಅಥವ ಬದುಕಿಗೆ ಜೀವವೋ ಎಂಬ ಉನ್ಮತ್ತ ಗೊಂದಲದಲ್ಲೇ ರೈಲು ಭಾವಸೇತುಗಳನ್ನು ಹಾಯುತ್ತಿರುತ್ತದೆ; ಅಕ್ಷರಗಳು ಪದವಾಗದೇ ಹಳಿಗಳಮೇಲೆ ಉಳಿದುಹೋಗುತ್ತವೆ.

— ರಾಘವೇಂದ್ರ ಹೆಗಡೆ

ಚೌಕಟ್ಟುಗಳ ಸಂಕೀರ್ಣ ದಾಟಿ ಬರಲು..


ಹಣತೆ – ಬೆಸುಗೆ ಬತ್ತಿಯ ಜೊತೆಗೆ,
          ಚೌಕಟ್ಟುಗಳ ಸಂಕೀರ್ಣ 
          ದಾಟಿ ಬರಲು ಬೆಳಕು, 
          ಭಾವಸ್ಥರಗಳ ಅನಂತದವರೆಗೆ..

ನೆಣೆ - ಬೆಳಕಿಗೆ ಹೊಣೆ
        ಹರಿವ ಕಿರಣಗಳಿಗೆ ಎಣೆ/ಹಣೆ..

ಎಣ್ಣೆ - ಬೆಳಕ ಜೀವಕೆ ಇಂಧನ
        ಬದುಕ ಭಾವಗಳಿಗೆ ಬಂಧನ/ಸ್ಪಂದನ.

ಚಿತ್ತಾರ –ಬೆಳಗಲು ಬಾನಲಿ 
          ಬಾಣ ಬಿರುಸುಗಳ ಚಿತ್ತಾರ,
          ನಾಚಿತು ಆ ಸೊಬಗಿಗೆ 
          ತಲೆಬಾಗಿ ನಕ್ಷತ್ರ..!

ದೀಪ - ತೊಳೆಯಲು ಪಾಪ
         ತೊಲಗಲು ಶಾಪ..
	 ಕಡೆಯುತ ಮನಸುಗಳ ಕಡಲಲ್ಲಿ
	 ಸಧ್ಬಾವ ಮಂಥನ,
	 ಉರಿಯುತ ವಿಶಾಲದೆಡೆಗೆ 
	 ಒಯ್ವ ಚೇತನ….

****
ದೀಪಾವಳಿ ಹಬ್ಬದ ದಿನಗಳಲ್ಲಿ ಮಾತ್ರವಲ್ಲ, ಪ್ರತಿದಿನವೂ ಮನೆ-ಮನಗಳಲ್ಲಿ ನಂದದೆ ನಂದಾದೀಪ ಬೆಳಗುತಿರಲಿ ಎಂಬುದೇ, ನೌಕಾಭಿಯಾನದ ದಾರಿಯಲ್ಲಿ ಮೌನದಿ ಮನದಲೆಗಳ ನಡುವೆ ಮಾರ್ದನಿಸುವ ರಾಗದ ಆಶಯ.
****

— ರಾಘವೆಂದ್ರ ಹೆಗಡೆ

ವಸಂತದ ಮುಸ್ಸಂಜೆಯೊಂದು ಪದಗೊಂಚಲೊಳು ಸಿಲುಕಿದಾಗ


ಮರಿಹಕ್ಕಿ: ಹಾಡಿನಿಂದ ಗೂಡಿನೆಡೆಗೆ 
             ಭಾವವಿಹಾರ ಮುಗಿಸಿ ಬಂಧದೆಡೆಗೆ 
             ಗರಿಯ ಮಡಚಿ ತಾಯ ತೋಳಿನೆಡೆಗೆ.

vasantada ondu mussanje
(ಚಿತ್ರಕೃಪೆ:http://www.murweh.qld.gov.au/attractions/)

ಹೂವು: ಕಡಲಿಗಿಳಿದ ರವಿಯನೋಡಿ 
          ನಾಚಿ ತಾನೂ ತಲೆಯಬಾಗಿ 
          ಗಿಡದ ಜತನ ಬಂಧದಿಂದ ಮುಕ್ತವಾಗಿ.. 


ದುಂಬಿ: ಈಗಲೇ ಬೆಳಗಾಗಬೇಕು.
        ಹೂವು ಗಂಧವ ಸೂಸಬೇಕು..
        ನಾ ಮಕರಂಧವ ಹೀರಬೇಕು..

 
ಜಿಗುಪ್ಸಿತ: ಬಂದೇಬಿಟ್ಟಿತಲ್ಲ ಮತ್ತೊಂದು ಮುಸ್ಸಂಜೆ..
          ಇನ್ನೆಷ್ಟೋ ನನ್ನ ಬಾಳಲಿ ಈ ತರಹ ಸಂಜೆ..!


ಕಿರಾಣಿ ವ್ಯಾಪಾರಿ: ಹೇಗೂ ಮುಸ್ಸಂಜೆ,
               ಜನವೂ ಜಾಸ್ತಿ..,
               ಇನ್ನೇನು ನಾನು ಮಾಡಿದ್ದೇ ತೂಕ..!


ಪಡುವಣ ತೀರ: ಹೊನ್ನರಾಶಿಯಂತೆ ಹೊಳೆವ ಮರಳ ರಾಶಿ
                    ಬೆಳ್ಳಿಯ ಅಲೆಗಳಿಗೆ ಚಿನ್ನದ ಲೇಪ...!


ರಸ್ತೆ: ಕೊನೆಯಿಲ್ಲದ ನಡಿಗೆಗೆ ಕೊಂಡಿ,
      ದಾರಿಹೊಕನಮನೆಗೆ ರಾಜಮಾರ್ಗ..
      ಕುಡಿದ ಅಮಲಿನಲ್ಲಿ ತೂರಾಡುತ್ತಿರುವವಗೆ
          - ಕಾಲು ಚಾಚಿದಷ್ಟೂ ಮುಗಿಯದ ಹಾಸಿಗೆ....!

ಕವಿತೆ: ಒಲವು ಜೊತೆಗಿರಲು ಯುಗಳಗೀತೆ..
      ಎದೆಯು ತುಂಬಿಬರಲು ಭಾವಗೀತೆ..    
      ಏಕಾಂತದ ಏಕತಾನತೆಯಲ್ಲಿ ಮೌನಶಬ್ಧ .,
      ಮನದ ವ್ಯಥೆಯ ಗೊಂಚಲೊಳಗಿನ ಸ್ಥಿತಿಯ ಅಭಿವ್ಯಕ್ತತೆಯಲಿ ಒಂದು ನೋವಕಥೆ....!

                       ****
ಹನಿಹರವು, ಒಂಚೂರು, ನಾಲ್ಕೇಸಾಲು ವಿಭಾಗಗಳಲ್ಲಿ ಕವಿತೆಗಳನ್ನು 
ಬರೆಯುತ್ತಿದ್ದ  ನನ್ನ ಮತ್ತೊಂದು ಪ್ರಯತ್ನ ಈ ಪದಗೊಂಚಲು. 
ಇದು ಕವಿತೆಯ ಹಾಗೆ, ಕಥೆಯ ಹಾಗೆ, 
ಒಂದು ಸಮಯದಿ ಸಂಭವಿಸಬಹುದಾದ ವಿಭಿನ್ನತೆಯ 
ಒಂದು ಶಬ್ದದೊಡೆ ಪೂಣಿಸಲು ನನ್ನದೊಂದು ಪ್ರಯತ್ನ.
ನಿಮ್ಮ ಪ್ರತಿಕ್ರಿಯೆಗೆ ಸದಾ ಸ್ವಾಗತ.
 
                       -- ರಾಘವೇಂದ್ರ ಹೆಗಡೆ 
                                             ****