Monthly Archives: ಮೇ 2011

ಇತ್ತೀಚಿನ ದಿನಗಳು..!


ಹೊಸ ಡಾಂಬರು ಬಿದ್ದು ಸಪಾಟು ಮಲಗಿದ ರಸ್ತೆಗೆ ಮಣ್ಣಬಿರುಕು
ಬಿದ್ದ ಗಾಯಕೆ ಒದ್ದೆನೋಟದ ಅಣಕು
ಸ್ತಬ್ಧತೀರದ ಬಿಸಿಮರಳ ಮೇಲ್ನೆಟ್ಟ ಸೂರು
ಅರೆ ಝೂಮುಲೆನ್ಸಿನ ಮೇಲೆ ಬೆರಳಿಟ್ಟದ್ದು ಯಾರು.?

ನಾಲ್ಕುಮಳೆಹನಿಯ ಉಡಾಯಿಸುವಂತೆ ಬಂದ ಮೋಡ
ನಾಡಿಹಿಡಿಯುತ ಅದರ ಬಿಂದಾಸ್ ಹಾರಿಸುವ ಗಾಳಿ
ಅವರಿಗೇನೋ ಇಂದು ಒಪ್ಪತ್ತಂತೆ
ಅಡಿಗೆ ಮಾಡಿಗೆ ಹಚ್ಚಲು ರಾಶಿಬಿದ್ದದ್ದು ಪೂರ ಮಡಲುಗರಿಕಂತೆ

ಮೊನ್ನೆಯಷ್ಟೆ ಬಸ್ ನಲ್ಲಿ ಸಿಕ್ಕಿದ್ದೇನೆಂದವನೊಬ್ಬ ಈಗ ನಕ್ಕಿದ್ದಾನೆ
ಊರೂರು ತಿರುಗಿಬಂದವ ಅಂಗಳದಲಿ ಬಿಕ್ಕ ನಿತ್ಯಪುಷ್ಪಗಳ ನಡುವೆ ನಿಂತಿದ್ದಾನೆ
ದಾರಿ ದಣಪೆಯವರೆಗೇನೋ ಸರಿ
ಅದರಾಚೆಯ ಪರಿಸ್ಥಿತಿಯ ಈಗ ದಾಟೇ ನೋಡಬೇಕು..

ಶುದ್ದಬಿಸಿಲಿನ ಕುಡಿಗೆ ಕಾವು ಕೊಟ್ಟದ್ದು ಯಾರು
ತಂಪು ಗಾಳಿಯ ಕಸಿದು ಬೆವರ ಬಸಿಸಿದ್ದು ಯಾರು
ಮುನ್ನುಡಿಯ ಬೆನ್ನುಚುಚ್ಚುವ ಪ್ರಶ್ನೆಗಳ ಸುತ್ತು
ನೆತ್ತಿಮೇಲೆ ಸುಟ್ಟಿದ್ದು ಬಿಸಿಲೋ ಹೊಳೆಯೋ ಯಾರಿಗ್ಗೊತ್ತು.!?

ನಾನೂ ಮೌನವಾಗೇ ನೋಡುತ್ತಿದ್ದೆ ಏoಗಲ್ಲು ಬದಲಿಸುತ್ತಿದ್ದ ನೆರಳ
ನಾಲ್ಕುಪಥದ ರಹದಾರಿಯಲ್ಲಿ ಹೊರಟಮನಕೆ ಹಿಡಿಯಲಾಗಲಿಲ್ಲ ತೊರೆಯಮೇಲಿಟ್ಟ ಬೆರಳ
ಅರ್ಜಂಟು ಬರುವಾಗ ತರಲು ಮರೆತ ಕ್ಯಾಮರಾ ಈಗ್ಯಾಕೆ ಬೇಕು..
ಅಂದು ಇಂದು ನಿನ್ನೆ ನಾಳೆಗಳ ಸಂತೆಯಲಿ ಬಾಕಿಚಿಂತೆಗಳ ಹೋಲ್ ಸೇಲ್ ಮಾರಿಬಿಡಬೇಕು

ಇಷ್ಟೆಲ್ಲ ಕಾದು ನಿರೀಕ್ಷಿಸಿದ್ದು ಹೌದಾದರೂ ಬಯಸಿದ್ದ ಮಳೆ ಅಚಾನಕವಾಗಿ ಬಿದ್ದಿದ್ದೇ ಹೆಚ್ಚು
ಹೂವು ಅರಳುವುದೇಇಲ್ಲ; ರೆಕ್ಕೆ ಬಲಿಯುವುದೇ ಇಲ್ಲ ಹಾಗೆ ಚಂದನೋಡುವ ಅಂದುಕೊಂಡವರಿಗೆಲ್ಲ
-ಈಗ ಪೆಚ್ಚುಪೆಚ್ಚು!
ಗೋಡೆಯ ಕಡೆ ಎರಗಿ ನೋಡಿದ್ದೇನೋ ಹೌದು ಆದರೆ ಈಗೆಷ್ಟು ಹೊತ್ತು..?
ಚಲಿಸುವ ಮುಳ್ಳುಗಳ ಮುನ್ನೆಲೆಯ ಗಾಜಪರದೆಯಲಿ ಅರ್ಧಮುಖ ಕಂಡದ್ದಷ್ಟೇ ಗೊತ್ತು..

— ರಾಘವೇಂದ್ರ ಹೆಗಡೆ.

Advertisements

ಬಸಿಯದ ಹನಿಗಳು..!


ಸಂಜೆ ಹೊರಟ ಬಸ್ಸಿನ ತುಂಬ
ರಾಶಿ ರಾಶಿ ಕನಸಿನ ಗಂಟು
ನಿರೀಕ್ಷಿಸುತ ಬರುವ ಬೈಗಬಿಂಬ
ದ ಅಬ್ಧಿಗೇಕೆ ಹಾದಊರಿನ ಹೆಸರ ನಂಟು.?

*****

ವೇಗಮಿತಿ ಸೂಚಿ ಫಲಕಕ್ಕೆ
ಕಾಲಮಿತಿ ಕಟ್ಟಳೆಯಿಲ್ಲ
ನಡೆದವರ ನೆಳಲು
ಗಾಳಿಯಿಂದೆದ್ದ ಧೂಳು
ಬಸಿದ ನೆತ್ತರ ಹನಿ
ಬದುಕು ಬದಲಿಸಿದ ಹಾದಿ
ಎಲ್ಲ ಅದರ ಅವಗಾಹನೆಯಲಿ ಸೆರೆಯಾಗಿವೆ..

*****

ಹೆಸರ ಹಂಗಿರದ ಊರಿನ
ಕನಸೆ ಬೀಳದ ಕಣ್ಣಲಿ
ಕಸ ಬಿದ್ದು ನರಳಿದೆ..
ಇರುಳ ಮಗ್ಗುಲ ದಾಳಕೆ
ಸಂಜೆ ಕಡೆವ ಗಾಳಿ ಸೀಳಿ
ಬರುವ ಪ್ರಭೆ ನಲುಗಿದೆ..

******

ಹೊಳೆಯಲ್ಲಿ ಬೆಳೆದುನಿಂತ
ಮರಕ್ಕೀಗ ಅನಾಥಪ್ರಜ್ಞೆ
ಬಿಂಬ ನೀರಲಿ ಕಂಡರೂ ನೆರೆಯ
ಕಾನನವ ತಲುಪದ ಸಂಜ್ಞೆ
ಏಕಾಂತದ ಬದುಕಿಗೆ ಬಳಗ ಮರೀಚಿಕೆ..
ಕೊರೆವ ಬೇರು ಧರಣಿಯಂತರಾಳವ
ತಲುಪಿ ಸ್ಪರ್ಷಿಸಲು ಜೀವಜಲವ
ಇನ್ನೇಕೆ ಮರಕೆ
ಹೊಳೆಯ ಹಂಗು..?

******

— ರಾಘವೇಂದ್ರ ಹೆಗಡೆ