Monthly Archives: ಏಪ್ರಿಲ್ 2012

ತೂಫಾನ್


ಮೂರು ದಾರಿಗೋ
ನೂರು ಕಲ್ಲ ಕೊರೆತ
ಬೊಗಸೆ ಬೊಗಸೆಗೆ
ನಾಳೆಯ ಚೆಂದ ಸಂಗತ

ದಾರಿ ತೋರಲೂ, ಧಗಧಗಿಸಲೂ
ಸಾಕಾದ ಒಂಟಿಕಿಡಿ
ದಡದಿ ಮೂರೆಲೆಗೆ
ಉಸಿರ ಹಾಸುವ ಜಂಟಿಸುಳಿ

ನಿಂದು ಅಳತೆ ಬುದ್ದಿ
ನಾನೋ ವ್ಯಕ್ತ ಅಗೋಚರ
ನನ್ನ ಮೌನ ನಿನಗೆ ಉಪೇಕ್ಷೆ
ಓದಿ ಮರೆತೆಯಾ ಸಿದ್ದಾಂತ ಸಾಪೇಕ್ಷೆ?

ನಾನು ನಿಶ್ಚಲ, ನಾನು ನಿಶ್ಚಿತ
ನಾನು ನಿರಂತರ, ನಾನು ಸರ್ವಾಂತರ
ನೀ ಕಲಿತ ಭೌತಶಾಸ್ತ್ರದ
ವೇಘೋತ್ಕರ್ಷದಷ್ಟೇ ಅಲ್ಲ
ಸ್ಥಿತ್ಯಂತರಿಸಿ ಗತ್ಯಂತರಿಸಿ ಬರುವ
ನಾನು ಅಖಂಡ ಪ್ರಚನ್ನ ಅವತಾರ

ವರ್ತಮಾನದ ಭವಿಷ್ಯ ನಿರ್ಮಾಣ
ಭೂತ-ವರ್ತಮಾನಗಳ ನಿರ್ವಾಣ
ನಿನ್ನ ಆಟ ಯಾವ ಅಂಕೆ?

ನಾ ಸೋತಿರಬಹುದು,
ಈ ಕ್ಷಣ ಸತ್ತಿರಲೂಬಹುದು
ಆದರೆ ನೆನಪಿಡು
ನಾನು ಅವ್ಯಕ್ತ-ಸುಪ್ತ-ಲಿಪ್ತ
ಇರುಳ ಕಡೆದೋ
ಎಸಳ ನಾಭಿ ಸೀಳೋ
ಧೂಳ ಕಣ ಒಡೆದೋ
ಮತ್ತೆ ಮರುಹುಟ್ಟಿ
ಪುಟಿದೆದ್ದು ಬರುತ್ತೇನೆ ನೋಡು!

***

— ರಾಘವೇಂದ್ರ ಹೆಗಡೆ