ಬ್ಲಾಗ್ ಸಂಗ್ರಹಗಳು

ನೆನಪುಗಳ ಮಾತು.. : ಕೊಡಚಾದ್ರಿ ಚಾರಣ – ಅಂಕಣ ೩


..ಹಿಂದಿನ ಸಂಚಿಕೆಯಿಂದ

ಇದು ಶ್ರೀ ಶಂಕರಾಚಾರ್ಯರ ತಪೋಭೂಮಿ. ಇದೇ ಮೂಕಾಂಬಿಕೆಯ ಮೂಲ ಎಂಬುದು ನಂಬಿಕೆ. ಕೊಲ್ಲೂರಿಗೆ ಬರುವ ಬರುವ ಬಹುತೇಕ ಯಾತ್ರಾರ್ಥಿಗಳು ಕೊಡಚಾದ್ರಿಗೆ ಹೋಗಿಬರದೇ ಇರುವುದಿಲ್ಲ. (ಅದರಲ್ಲೂ ವಿಶೇಷವಾಗಿ ಕೇರಳ ಮತ್ತು ತಮಿಳುನಾಡಿನ ಭಕ್ತರು.)

ಚಿತ್ರದಲ್ಲಿ: (ಎಡದಿಂದ) ಹರೀಶ್ ಎಂ ಮತ್ತು ವಿಶುಕುಮಾರ್





ಅಪರೂಪದ ವನ್ಯ ಪ್ರಭೇದಗಳನ್ನು ತನ್ನೊಳಗಿಟ್ಟುಕೊಂಡ ತಾಣ ಈ ಕೊಡಚಾದ್ರಿ. ಇದಕ್ಕೆ ಸಂಜೀವಿನಿ ಪರ್ವತ ಎಂಬ ಪ್ರತೀತಿ ಇದೆ. ಇಲ್ಲಿ ಹಲವಾರು ಬಗೆಯ ಸಂರಕ್ಷಣೀಯ ಔಷಧೀಯ ಸಸ್ಯಗಳಿವೆ. ಪಶ್ಚಿಮ ಘಟ್ಟಗಳಲ್ಲಷ್ಟೇ ಕಂಡುಬರುವ ವಿಶಿಷ್ಟ ವನ್ಯಸಂಕುಲ ಇಲ್ಲಿ ಆಶ್ರಯ ಪಡೆದಿವೆ. ಉತ್ತರ ಕನ್ನಡದ ಶಿರಸಿ, ಸಿದ್ದಾಪುರ, ಕುಮಟಾ ಮತ್ತು ಹೊನ್ನಾವರದ ಅರಣ್ಯಗಳಲ್ಲಿ ಮಾತ್ರ ಹೆಚ್ಚಾಗಿ ಕಂಡುಬರುವ ಸಿಂಘಳೀಕ(ಉತ್ತರ ಕನ್ನಡದಲ್ಲಿ ಅದನ್ನು ’ಕೋಡ’ ಎಂದು ಕರೆಯುತ್ತಾರೆ) ಈ ಬೆಟ್ಟಗಳಲ್ಲೂ ಕಂಡುಬರುತ್ತದೆ.
***
ಕೊಲ್ಲೂರಿನಿಂದ ಕೊಡಚಾದ್ರಿವರೆಗೆ ಹೋಗಲು ಬಾಡಿಗೆಗೆ ಜೀಪುಗಳು ದೊರಕುತ್ತವೆ. ನಿಟ್ಟೂರು-ಕೊಡಚಾದ್ರಿ ನಡುವೆ ರಸ್ತೆ ಸಂಪರ್ಕವಿದೆ. ಆದರೆ ಅದು ತುಂಬಾ ಅಪಾಯಕಾರಿ ತಿರುವುಗಳನ್ನು, ದೊಡ್ಡದೊಡ್ಡ ಗುಂಡಿಗಳನ್ನು ಹೊಂದಿದ ಮಣ್ಣುರಸ್ತೆ. ಹಾಗಾಗಿ ಪರಿಣಿತ ಚಾಲಕರು ಮಾತ್ರ ಈ ಮಾರ್ಗಕ್ಕೆ ಬರಲು ಒಪ್ಪುತ್ತಾರೆ.
***
ಏಪ್ರಿಲ್ ಹತ್ತರ ಬೆಳಗ್ಗೆ ೧೦:೩೦ ರ ಹೊತ್ತಿಗೆ ಬಂದ ಹಾದಿಯಲ್ಲೇ ಇಳಿಯಲಾರಂಭಿಸಿದೆವು. ಬರುವಾಗ ಮತ್ತೆ ಮತ್ತೆ ಹಿಂದಿರುಗಿದಾಗೆಲ್ಲ ಬಹಳ ದೂರದವರೆಗೂ ಗಾಳಿಯಂತ್ರದ ರೆಕ್ಕೆಗಳು ಗೋಚರವಾಗುತ್ತಿದ್ದವು. ನೆನಪ ಬುತ್ತಿ ತುಂಬಿಕೊಳ್ಳುತ್ತ ಹೆಜ್ಜೆ ಭಾರವಾಗುತ್ತಿತ್ತು. ಪವಿತ್ರಸ್ಥಳದ ಅಪೂರ್ವ ನಿಸರ್ಗರಮಣೀಯತೆಯನ್ನು ಸೆರೆಹಿಡಿದುಕೊಂಡಿದ್ದ ಕಣ್ಣುಗಳು ಧನ್ಯವಾಗಿದ್ದವು.

ಹಿಂದಿನ ರಾತ್ರಿ ಇದೇ ದಾರಿಯಲ್ಲೇ ಸಾಗಿದ್ದು!


ನಮ್ಮ ಟೀಂ: (ಎಡದಿಂದ) ಲತೇಶ್, ಸುದರ್ಶನ್, ನಾಗರಂಜಿತ್, ವಿಶುಕುಮಾರ್, ರೆನ್ನಿ, ರಾಘವೇಂದ್ರ ಹೆಗಡೆ, ಮೋಹನ್.


*****

ಕಡೆಗೊಂದು ಮಾತು:

ಇಂಥ ಪವಿತ್ರ ಸ್ಥಳವೂ ಮಾಲಿನ್ಯತೆಯಿಂದ ಮುಕ್ತವಾಗಿಲ್ಲ. ದಾರಿಯುದ್ದಕ್ಕೂ ಮತ್ತು ಶಿಖರದ ತುದಿಯ ಮಂದಿರದ ಆಸುಪಾಸು ಕೂಡ ಅಲ್ಲಲ್ಲಿ ಪ್ಲಾಸ್ಟಿಕ್ ಕವರ್ ಗಳು, ಪೆಪ್ಸಿ-ಕೋಕ್, ಬಿಸ್ಲೇರಿ ಮುಂತಾದ ಬಾಟಲಿಗಳು ಹರಡಿಬಿದ್ದಿರುವು ಕಣ್ಣಿಗೆ ರಾಚುತ್ತದೆ. ಎಂಥವರ ಮನಸ್ಸಿಗೂ ಇವು ಒಂದುಕ್ಷಣ ಖೇದವನ್ನುಂಟುಮಾಡದೆ ಇರುವುದಿಲ್ಲ.
(ಇದೇ ವಿಚಾರ ಮನದಲ್ಲಿ ಬಹಳಷ್ಟು ಕೊರೆದು ಕಾಡುತ್ತಿತ್ತು. ರೂಮಿಗೆಬಂದವನೆ ಒಂದು ಹಾಳೆಯನ್ನು ಹಿಡಿದು ಒಂದಷ್ಟು ಸಾಲುಗಳನ್ನು ಗೀಚಿಬಿಟ್ಟಿದ್ದೆ. ನಂತರದ ದಿನದಲ್ಲಿ ’ನಿಸರ್ಗದ ಈ ಕೂಗು ನಮಗೆ ಕೇಳುವುದೆಂದು…..?!’ ಎಂಬ ಶೀರ್ಶಿಕೆಯಲ್ಲಿ ಕವನವಲ್ಲದ ಆ ಕವನವನ್ನು ಬ್ಲಾಗಿಗೇರಿಸಿದ್ದೆ.)

ನಮ್ಮ ಮನಸ್ಸು ಹೇಗೆ ಸೂಕ್ಷ್ಮವೋ ಹಾಗೆ ನಮ್ಮನ್ನು ಸಲಹುವ ನಿಸರ್ಗ ಕೂಡ. ನಾವೆಲ್ಲ ನಮ್ಮ ಜವಾಬ್ದಾರಿಯನ್ನು ಅರಿತು ವರ್ತಿಸುವುದು ಅನಿವಾರ್ಯ ಮತ್ತು ಅತ್ಯವಶ್ಯ. ಸಕಲವನ್ನೂ ತನ್ನೊಳಗಿಟ್ಟುಕೊಂಡು ಪೊರೆವ ಪ್ರಕೃತಿಗೆ ನಾವು ಆಮೂಲಕ ಅಷ್ಟಾದರೂ ಕೃತಜ್ಞತೆ ತೋರಬೇಕಿದೆ.
********
(ಮುಗಿಯಿತು.)
– – – – – – – – – – – – – – – – – – – – – – – – – – – – – – – – – –
— ರಾಘವೇಂದ್ರ ಹೆಗಡೆ.

ಕೊಡಚಾದ್ರಿಯ ಬಗ್ಗೆ ಮತ್ತಷ್ಟನ್ನು ಓದಲು ಇಲ್ಲಿ ಕ್ಲಿಕ್ಕಿಸಿ

ಆಕಾಶ ದೀಪವು ನೀನು..: ಕೊಡಚಾದ್ರಿ ಚಾರಣ – ಅಂಕಣ ೨


….ಹಿಂದಿನ ಸಂಚಿಕೆಯಿಂದ

ನಂತರ ಸಾವರಿಸಿಕೊಂಡು, ಕಾಡುಕೋಣ ದೂರ ನಡೆದದ್ದನ್ನು ಖಚಿತಪಡಿಸಿಕೊಂಡು ನಾವು ಮೆಲ್ಲನೆ ಮುನ್ನಡೆದೆವು. ರಾತ್ರಿಯಾದುದ್ದರಿಂದ ಬೆಳಕು ಬಿಡುವಷ್ಟೇ ಜಾಗದಲ್ಲಿ ದಾರಿ ತೋರುತ್ತಿತ್ತು. ಕಣಿವೆಯಂತ ಕಾನನದ ಒಂದು ಮಗ್ಗುಲ ಬದಿಯಲ್ಲಿ ಬಳೆಪಟ್ಟಿಯಂತೆ ಸೀಳಿ ಸವೆದಿದ್ದ ಕಾಲುದಾರಿಯ ಬದಿಯ ಪ್ರಪಾತ ಗೋಚರವಾಗದುದರಿಂದ ಹಾದಿಯ ಬಗೆಗೆ ಯಾವುದೇ ಭಯಕ್ಕೆ ಜಾಗಸಿಗದೇ ನಮ್ಮ ಅಭಿಯಾನ ಸಾಂಗವಾಗಿ ಮುಂದುವರಿಯಿತು.

ಬೆಟ್ಟದ ತುದಿಯಲ್ಲಿ ಸೆಳೆಯುತ್ತಿದ್ದ ಬೆಳಕು, ಸೀತಾರಾಮನವರ ಮನೆ ಸಮೀಪಿಸುತ್ತಿದ್ದುದನ್ನು ಖಾತರಿಪಡಿಸಿದವು. ಅಲ್ಲಿ ತಲುಪುವಾಗ ಸಮಯ ಒಂಬತ್ತುವರೆ ದಾಟಿತ್ತು. ಗಿರಗಿಟ್ಲೆಯಂತೆ ತಿರುಗುತ್ತ ಗುಂಯ್ ಗುಡುತ್ತಿದ್ದ ಗಾಳಿಯಂತ್ರ ಮತ್ತು ಅಲ್ಲಲ್ಲೇ ಇದ್ದ ಎರಡು ಸೌರಫಲಕಗಳು ಈ ಪ್ರದೇಶದ ವಿದ್ಯುತ್ ಆಗರವೆಂದು ತಿಳಿದುಬಂತು.

ಬೇಗನೆ ಊಟಮುಗಿಸಿ, ಮೈಯನ್ನು ಹೊದ್ದು ಓಡುತ್ತಿದ್ದ ಮೋಡವ ಆಸ್ವಾದಿಸುವ ತವಕದಲ್ಲಿ ಅಲ್ಲೇ ಹೊರಗಡೆ ಕೊರೆವ ಚಳಿಯ ನಡುವೆಯೇ ಆಚೀಚೆ ಅಲೆಯಲಾರಂಭಿಸಿದೆವು.

ದಟ್ಟ ಮೋಡದ ನಿರೀಕ್ಷೆಯಲ್ಲಿ ವಿನಾಯಕ ಹೆಗಡೆ

ರಾತ್ರಿ ೧೧ ದಾಟುತ್ತಿದ್ದಂತೆ ಹಾಲ್ನೊರೆಯಂತೆ ಕವಿಯುತ್ತ ಮೋಡ, ಒಬ್ಬರ ಮುಖ ಮತ್ತೊಬ್ಬರಿಗೆ ಕಾಣದಷ್ಟು ದಟ್ಟವಾಗುತ್ತ ಸಾಗುತ್ತಿತ್ತು.

ನಾನು ಮತ್ತು ವಿನಾಯಕ ೧೧:೩೦ರ ಹೊತ್ತಿಗೆ ರೂಮಿಗೆ ಬಂದು ಮಲಗಿದೆವು. ರಾತ್ರಿ ಚಾರಣ ಮಾಡಿದ್ದಕ್ಕೆ ಅಷ್ಟೊಂದು ಪ್ರಯಾಸದ ಅನುಭವ ಆಗಿರಲಿಲ್ಲ. ನಾನು ಮಾತ್ರ ಬೆಳಗ್ಗೆ ೫ಕ್ಕೆ ಅಲಾರಾಂ ಇಟ್ಟು ನಿದ್ದೆಹೋದೆ. ಉಳಿದರು ಎಷ್ಟೊತ್ತಿಗೆ ಬಂದು ಮಲಗಿದರೋ ಗೊತ್ತಿಲ್ಲ. ಬೆಳಗ್ಗೆ ಅಲಾರಾಂಗೆ ಮುಂಚೆ, ಉಳಿದವರೆಲ್ಲ ಏಳುವ ಮೊದಲೇ ನಾ ಎದ್ದು ಎಲ್ಲರನ್ನು ಎಬ್ಬಿಸಲಾರಂಭಿಸಿದೆ. ಭಾನು ಉದಯದ ಮುಂಚಿನ ಬಾನಂಗಳದ ಚಿತ್ತಾರವನ್ನು ಕೊಡಚಾದ್ರಿಯ ತುತ್ತತುದಿಯಲ್ಲಿಯ ಶ್ರೀಶಂಕರಾಚಾರ್ಯರ ಪುಟ್ಟ ಗುಡಿಯ ಸನಿಹ ತಲುಪಿ ನೋಡುವ ಉದ್ದೇಶಹೊಂದಿದ್ದರಿಂದ ನಾವು ನಸುಕಿನಲ್ಲೇ ಅಲ್ಲಿ ತಲುಪುವುದು ಅವಶ್ಯವಿತ್ತು. ಸೀತಾರಾಮರ ಮನೆಯಿಂದ ಆ ಸ್ಥಳ ಸುಮಾರು ಮುಕ್ಕಾಲು ಕಿ.ಮಿ.
ಸುಮಾರು ನಸುಕಿನ ೫:೪೫ಕ್ಕೆ ಮೊದಲ ಗುಡ್ಡದ ತುದಿ ಏರಿ, ರಂಗೇರುತ್ತಿದ್ದ ಮೂಡಣವನ್ನು ಆಸ್ವಾದಿಸುತ್ತಿದ್ದೆವು.


ಕುಂಕುಮ ಧೂಳಿಯ ದಿಕ್ಕಟವೇದಿಯ ಓಕುಳಿಯೊಳು ಮಿಂದೇಳುವನು..


ಆಕಾಶ ದೀಪವು ನೀನು., ನಿನ್ನ ಕಂಡಾಗ ಸಂತೋಷವೇನು….


ಮೋಡದ ಮೇಲೆ ಚಿನ್ನದ ನೀರು, ಚೆಲ್ಲುತ ಸಾಗಿದೆ ಹೊನ್ನಿನ ತೇರು..


ಸಪ್ತಸಾಗರದಾಚೆಯೆಲ್ಲೋ ಸುಪ್ತ ಸಾಗರ ಕಾದಿದೆ..


ಮೊಳೆಯದಲೆಗಳ ಮೂಕ ಮರ್ಮರ ಇಂದು ಇಲ್ಲಿಗೂ ಹಾಯಿತೆ..?!

ಬೆಟ್ಟವನ್ನಾವರಿಸಿದ್ದ ಬಿಳಿಯ ದಟ್ಟಮೋಡ ಸಮುದ್ರದ ತೆರೆಯಂತೆ ಭಾಸವಾಗುತ್ತಿತ್ತು.ಬೆಳಗು ಮೂಡುತ್ತಿದ್ದಂತೆ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದ ಮೋಡಾವ್ರತವಾಗಿದ್ದ ಸುತ್ತಲ ಪರ್ವತದ ಚಿತ್ರಣ, ಪರದೆ ಸರಿದಂತೆ ಮೋಡ ಕರಗಿದ ಬಳಿಕ ಸ್ಪಷ್ಟವಾಗಿ ಕಾಣಲಾರಂಭಿಸಿತು. ಮತ್ತೊಂದು ಏರು ಹತ್ತಿ ಶ್ರೀ ಶಂಕರಾಚಾರ್ಯರ ಮಂದಿರದ ಬಳಿ ನಡೆದೆವು. ಅದು ಕೊಡಚಾದ್ರಿಯ ಶೃಂಗ. ಎಲ್ಲಾ ದಿಕ್ಕಿಗೂ ಕಣ್ಣುಹಾಯಿಸುತ್ತ ದೂರದಲ್ಲಿ ಗೋಚರಿಸುವ ಊರುಗಳನ್ನೆಲ್ಲ ವೀಕ್ಷಿಸುತ್ತ, ಅಷ್ಟೂ ಹೊತ್ತು ಸುತ್ತಲ ದೃಶ್ಯಗಳನ್ನು ಕ್ಯಾಮರಾ ಕಣ್ಣಲ್ಲಿ ಮತ್ತು ಕಣ್ಣ ಕ್ಯಾಮರಾದಲ್ಲಿ ಬಿಡುವಿರದೆ ಕ್ಲಿಕ್ಕಿಸತೊಡಗಿದೆವು.

ಮಂದಿರದ ಬಳಿ (ಎಡದಿಂದ) ವಿನಾಯಕ, ಮೋಹನ್, ಸುದರ್ಶನ


ಬೆಟ್ಟವು ನಿನ್ನದೆ, ಬಯಲೂ ನಿನ್ನದೆ..


ಆಗೊಂದು ಸಿಡಿಲು, ಈಗೊಂದು ಮುಗಿಲು ನಿನಗೆ ಅಲಂಕಾರ


ಎಲ್ಲುಂಟು ಆಚೆ ತೀರ..!


ಸುನೀಲ, ನಿರ್ಮಲ ತರಂಗ ಶೋಭಿತ…

ನಂತರ ಅದೇ ಗುಡ್ಡದಲ್ಲಿರುವ ಗಣಪತಿಗುಹೆಯ ಗಣೇಶನಿಗೆ ಕೈಮುಗಿದು ನಿಧಾನವಾಗಿ ದೊಡ್ಡಬೆಳಗಾದನಂತರ ಅಂದರೆ ೭:೩೦ ಹೊತ್ತಿಗೆ ಆ ಗುಡ್ಡದವರೋಹಣವ ಆರಂಭಿಸಿ ಉಳಿದುಕೊಂಡಿದ್ದ ಮನೆಯ ಕಡೆ ಹೆಜ್ಜೆಹಾಕಲಾರಂಭಿಸಿದೆವು.


ನೆಳಲೋ, ಬಿಸಿಲೋ ಎಲ್ಲವೂ ನಿನ್ನದೆ…

ಈಗಾಗಲೇ ಪ್ರವಾಸಿಗರ ದಂಡು ನಿಧಾನವಾಗಿ ಅಲ್ಲೆಲ್ಲ ನೆರೆಯುತ್ತಿತ್ತು. ಹೋಗುವಾಗ ಪರ್ವತಕ್ಕೆಲ್ಲ ಮುತ್ತಿಕೊಂಡಿದ್ದ ಬಿಳಿಯ ಮೋಡಗಳು ಈಗ ಯಾವವೂ ಉಳಿದುಕೊಂಡಿರಲಿಲ್ಲ. ದೂರದಲ್ಲಿ ರವಿಯ ಕಿರಣವ ಪ್ರಥಿಫಲಿಸುತ ಚಿನ್ನದ ನೀರಿನಂತೆ ಹರಿಯುತ್ತಿರುವ ನದಿ ಶರಾವತಿ ಎಂದು ವಿನಾಯಕ ಮತ್ತು ವಿಶುಕುಮಾರ ಹೇಳಿದಾಗ ನಂಬಲಾಗಲಿಲ್ಲ.

ಮುಂದುವರಿಯುತ್ತದೆ….


— ರಾಘವೇಂದ್ರ ಹೆಗಡೆ.

ಚಿತ್ರಗಳು: ವಿನಾಯಕ ಹೆಗಡೆ, ನಾಗರಂಜಿತ್, ವಿಶುಕುಮಾರ್, ರಾಘವೇಂದ್ರ ಹೆಗಡೆ, ಸುದರ್ಶನ ಹೆಗಡೆ, ರೆನ್ನಿ ಮ್ಯಾಥ್ಯೂ, ಮೋಹನ್ ಕುಮಾರ್, ಹರೀಶ್ ಎಂ ಮತ್ತು ಲತೇಶ್ ವಾಲ್ಕೆ.
– – – – – – – – – – – – – – – –


ಇದು ’ರಾ ಗ ನೌ ಕೆ’ ಬ್ಲಾಗಿನ ಐವತ್ತನೆ ಪೋಸ್ಟ್!

ಮೋಡವ ಹಿಡಿವ ತವಕದಲ್ಲಿ..: ಕೊಡಚಾದ್ರಿ ಚಾರಣ – ಅಂಕಣ ೧


ಸಹೃದಯಿ ಓದುಗರಿಗೆ ಆತ್ಮೀಯ ನಮಸ್ಕಾರಗಳು. ಬ್ಲಾಗಿಗೆ ವರ್ಷ ಸಂದ ಸಂದರ್ಭದಲ್ಲಿ ಕೊಡಚಾದ್ರಿಯ ಕೆಲ ಚಿತ್ರಗಳನ್ನು ನಿಮ್ಮಮುಂದಿಟ್ಟಿದ್ದೆ ಮತ್ತು ಆ ಕುರಿತು ನಾಲ್ಕುಸಾಲುಗಳನ್ನು ಗೀಚುವ ಆಕಾಂಕ್ಷೆ ಇರುವುದಾಗಿಯೂ ಹೇಳಿಕೊಂಡಿದ್ದೆ. ಕಳೆದ ಎಪ್ರಿಲ್ ನಲ್ಲಿ ಕೈಗೊಂಡಿದ್ದ ಚಾರಣವಾದರೂ ಕಾರಣಾಂತರಗಳಿಂದ ಆಗೆಲ್ಲ ಬರೆಯಲು ಸಾಧ್ಯವಾಗಿರಲಿಲ್ಲ. ನಮ್ಮ ಚಾರಣದ ಬಗ್ಗೆ ಮತ್ತು ಕೊಡಚಾದ್ರಿಯ ರಮಣೀಯತೆಯನ್ನು ಸಂಕ್ಷಿಪ್ತವಾಗಿ ಬರೆಯುವ ಇರಾದೆಯಿಂದ ಈಗ ಆ ’ವಿಹಾರ ವಿಚಾರ’ವನ್ನು ಆರಂಭಿಸುತ್ತಿದ್ದೇನೆ.

****

ಎಪ್ರಿಲ್ ೯, ೨೦೧೦. ಮೊದಲೇ ಹೊರಟು ಬ್ರೆಡ್, ಬಿಸ್ಕತ್, ಹಣ್ಣುಗಳನ್ನು ಬ್ಯಾಗಿಗೆ ತುರುಕಿಕೊಳ್ಳುತ್ತಿದ್ದ ಸ್ನೇಹಿತರಾದ ಸುದರ್ಶನ, ಮೋಹನ್, ನಾಗರಂಜಿತ್, ಲತೇಶ್, ವಿಶುಕುಮಾರ್, ರೆನ್ನಿ, ವಿನಾಯಕ ಮತ್ತು ಹರೀಶ್ ಅವರುಗಳನ್ನು ಸಂಜೆ ನಾಲ್ಕರ ಸುಮಾರಿಗೆ ಕುಂದಾಪುರದಲ್ಲಿ ಸೇರಿಕೊಂಡೆ. ೪:೩೦ ರ ಸುಮಾರಿಗೆ ಅಲ್ಲಿಂದ ಕೊಲ್ಲೂರು ಬಸ್ ಹತ್ತಿ ನಮ್ಮ ಪಯಣ ವಿದ್ಯುಕ್ತವಾಗಿ ಆರಂಭಗೊಂಡಿತು. ಸಂಜೆ ಐದುವರೆ ಹೊತ್ತಿಗೆ ಕೊಲ್ಲೂರು ತಲುಪಿದ್ದೆವು. ಅಲ್ಲಿ ಶಿವಮೊಗ್ಗ ಮಾರ್ಗದ ಲೋಕಲ್ ಬಸ್ನ ಸಮಯವನ್ನು ವಿಚಾರಿಸಲಾಗಿ, ಅದಕ್ಕಿನ್ನೂ ಒಂದು ಘಂಟೆ ಬಾಕಿ ಇರುವುದಾಗಿ ತಿಳಿದುಬಂತು. ಆದರೆ ಅದಾಗಲೇ ಕತ್ತಲಾವರಿಸಲು ಆರಂಭವಾಗಿದ್ದರಿಂದ ಆದಷ್ಟು ಶೀಘ್ರ ನಾವು ಕಾರಿಘಾಟ್ ತಲುಪಬೇಕಿತ್ತು. (ಅಂದಹಾಗೆ ಈ ಕಾರಿಘಾಟ್, ಕೊಲ್ಲೂರು-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಕೊಲ್ಲೂರಿನಿಂದ ಸುಮಾರು ಹತ್ತು ಕಿ.ಮಿ. ದೂರದಲ್ಲಿದೆ. ) ಹಾಗಾಗಿ ಮೂಕಾಂಬಿಕೆಗೆ ದೇಗುಲದ ದಾರಿಯ ಬಳಿಯಿಂದಲೇ ವಂದಿಸಿ ಒಂಬತ್ತು ಜನರಿದ್ದ ನಮ್ಮ ತಂಡದ ಪಯಣ ಕಾರಿಘಾಟ್ ವರೆಗೆ ಜೀಪ್ ನಲ್ಲಿ ಮುಂದುವರಿಯಿತು. ಅಲ್ಲಿ ಕೊಡಚಾದ್ರಿ ಮಾರ್ಗದ ತಿರುವಿನಿಂದ ಮುಂದೆ ಸುಮಾರು ಐದು ಕಿ.ಮಿ. ವರೆಗೂ ಕಿರಿದಾದ ಆದರೂ ಜೀಪ್ ಸಾಗುವಷ್ಟರ ಮಟ್ಟಿಗೆ ಮಣ್ಣುರಸ್ತೆಯಿದೆ. ಆದರೆ ಚಾರಣದ ಮೂಡ್ ನಲ್ಲಿದ್ದ ನಾವು ಆ ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸುವುದನ್ನು ಪೂರ್ವನಿರ್ಧರಿಸಿಕೊಂಡಿದ್ದರಿಂದ ಅಲ್ಲೇ ಇಳಿದುಕೊಂಡು ಒಬ್ಬರನ್ನೊಬ್ಬರು ತಮಾಷೆಮಾಡಿಕೊಳ್ಳುತ್ತ, ಹರಟುತ್ತ ನಿಧಾನವಾಗಿ ಹೆದ್ದಾರಿಯ ಬಲತಿರುವಿನ ಕೊಂಚ ಕಡಿದಾದ ಮಾರ್ಗದಲ್ಲಿ ನಡೆಯಲಾರಂಭಿಸುವಾಗ ವಾಚು ಸರಿಯಾಗಿ ಆರು ಗಂಟೆಯನ್ನು ತೋರಿಸುತ್ತಿತ್ತು. ಕೆಲ ವರ್ಷಗಳ ಹಿಂದೆ ಒಮ್ಮೆ ಕೊಡಚಾದ್ರಿಯನ್ನು ನೋಡಿದ್ದ ವಿನಾಯಕನಿಗೆ ಮಾತ್ರ ಸ್ವಲ್ಪಮಟ್ಟಿಗೆ ಈ ದಾರಿಯ ಪರಿಚಯವಿತ್ತು.

ಸಂಜೆಯ ತಂಪಿನ ಗಾಳಿಯಲ್ಲಿ ಕಾನನದ ಗಾಢ ಮೌನವನ್ನು ಕಡೆಯುತ್ತಿದ್ದ ಹಕ್ಕಿಗಳ ಗಿಜಗುಡುವಿಕೆ, ಕಾಡುಜಿರಳೆಯ ಕೂಗು ಅಪೂರ್ವ ನಾದಲೋಕವನ್ನು ಸೃಷ್ಟಿಸಿತ್ತು. ಸಣ್ಣ ಕೀಟಲೆಗಳು, ಹಾಸ್ಯಗಳೊಂದಿದೆ ಎಲ್ಲರೂ ಹರಟುತ್ತ, ನಗುತ್ತ ಸಾಗಿದ ಹಾದಿಯ ದೂರವೇ ತಿಳಿಯಲ್ಲ. ಮೆಲ್ಲಮೆಲ್ಲನೆ ಆವರಿಸುತ್ತಿರುವ ಕತ್ತಲು ಒಮ್ಮಲೇ ದಟ್ಟವಾಗುತ್ತಿರುವಂತೆ ಭಾಸವಾಗಲಾರಂಭಿಸಿತು. ದಾರಿಯಲ್ಲಿ ಅಲ್ಲಲ್ಲಿ ನಿಂತಿದ್ದ ಮತ್ತು ಕೆಲವುಕಡೆ ಮುರಿದು ಮಲಗಿದ್ದ ಖಾಲಿ ಕಂಬಗಳು, ವಿದ್ಯುತ್ ಸಂಪರ್ಕ ಕಲ್ಪಿಸಲು ಯತ್ನಿಸಿ ಕೈಬಿಟ್ಟದಕ್ಕೆ ಮೂಕಸಾಕ್ಷಿಗಳಾಗಿದ್ದವು.

ಸಂಜೆಯ ಅರೆಮಬ್ಬಿನಲ್ಲಿ ಸೆರೆಯಾದ ಬೆಟ್ಟದ ಬುಡದ ಬಯಲು..

ಬಯಲಿನಂತ ಪ್ರದೇಶವೊಂದ ತಲುಪಿದ ನಮಗೆ ದೂರದಲ್ಲೊಂದು ಲಾಂದ್ರದ ದೀಪದಂತೆ ಗೋಚರವಾಗುತ್ತಿತ್ತು. ಅಲ್ಲಿ ಮಲಯಾಳಿಗನೊಬ್ಬನ ಅಂಗಡಿ ಇರುವುದಾಗಿ ವಿನಾಯಕ ಮೊದಲೇ ಹೇಳಿದ್ದ. ಅದಾಗಲೇ ೭:೧೫ ಆಗಿತ್ತು. ಆ ಅಂಗಡಿಯಾತನ ಹೆಸರು ತಂಗಪ್ಪನ್. ಸುತ್ತೆಲ್ಲೂ ಬೇರೆಮನೆ ಕಾಣಿಸಲಿಲ್ಲ. ಆ ಪ್ರದೇಶದಲ್ಲಿ ಅವನದ್ದೊಂದೇ ಮನೆ ಮತ್ತು ಅಂಗಡಿ. ಚಾರಣಿಗರಿಗೆ ಆತಿಥ್ಯಮಾಡುವುದೇ ಅವರ ಕಾಯಕ. ಏಳೆಂಟು ವರ್ಷಗಳ ಹಿಂದೆಯೆ ಇಲ್ಲಿ ಕುಟುಂಬಸಮೇತ ಬಂದು ನೆಲೆಸಿದ್ದಾರಂತೆ. ಕೇರಳದ ಜನಪ್ರಿಯ ದೈನಿಕ ’ಮಲಯಾಳ ಮನೋರಮಾ’ದಲ್ಲಿ ಒಮ್ಮೆ ಅವರ ಕುರಿತು ಸವಿಸ್ತಾರ ಲೇಖನ ಪ್ರಕಟಗೊಂಡಿತ್ತು.

ಅಲ್ಲೇ ತಿಂಡಿ- ಟೀ ಮುಗಿಸಿ ಅವರಿಂದ ಕೊದಚಾದ್ರಿಯಲ್ಲಿ ಇರುವ ಏಕೈಕ ಅಂಗಡಿ ಕಂ ಹೊಟೆಲ್ ಕಂ ಮನೆಯ ಮಾಲಿಕ ಸೀತಾರಾಮ ಅವರ ದೂರವಾಣಿ ಸಂಖ್ಯೆ ಪಡೆದು, ೯ ಜನ ಬರುತ್ತಿರುವುದಾಗಿಯೂ ಮತ್ತು ನಮ್ಮೆಲ್ಲರಿಗೆ ರಾತ್ರಿ ಊಟ-ವಸತಿ ಸಿದ್ದತೆ ಮಾಡಲು ತಿಳಿಸಿದೆವು. ನಾವು ಇನ್ನೂ ಸುಮಾರು ೭-೮ ಕಿ.ಮಿ. ದಟ್ಟ-ಕಡಿದಾದ ಬೆಟ್ಟದ ಕಾಲುದಾರಿಯಲ್ಲಿ ಸಾಗಬೇಕಿರುವುದು ತಿಳಿದುಬಂತು. ಅಲ್ಲಿಂದ ಹೊರಟು ಬೆಟ್ಟದ ಬುಡದ ದಾರಿಯ ಹಿಡಿಯುವಾಗ ಸಮಯ ಸರಿಯಾಗಿ ಸಂಜೆ ೭:೩೦. ನಮ್ಮ ಚಾರಣಕ್ಕೆ ನಿಜವಾದ ಸವಾಲು ಆರಂಭವಾಗಿದ್ದೇ ಇಲ್ಲಿಂದ.

ಒಂಬತ್ತೂ ಜನರೊಡಗೂಡಿ ಇದ್ದ ಮೂರು ಬ್ಯಾಟರಿಗಳು ಮತ್ತು ಬ್ಯಾಟರಿಯಂತೆ ಬೆಳಗಲು ಮೊಬೈಲುಗಳು ಕಾರ್ಯೋನ್ಮುಖವಾದವು. ಕೈಯಲ್ಲಿರುವ ಕೋಲನ್ನು ಊರುತ್ತ, ಒಮ್ಮೊಮ್ಮೆ ಎಡವುತ್ತ ಡಟ್ಟ ಕಾಡಿನಲ್ಲಿ ನಿಶಾಚರಿ ಜೀವಿಗಳಂತೆ ಪೊದೆ, ತೆರಕುಗಳ ಸದ್ದುಮಾಡುತ್ತ, ಸಣ್ಣ ದೊಡ್ಡ ಏರುಗಳನ್ನು ಸ್ಪರ್ಧಾತ್ಮಕವಾಗಿ ಏರುತ್ತ ಮುನ್ನಡೆದೆವು.

ಆ ನಿರ್ಜನ ಪ್ರದೇಶದ ಭೀತಬಡಿಸುವ ಅರಣ್ಯದೊಳಗೂ ಮಾತು-ಕಾಡುಹರಟೆಗಳಿಗೇನೂ ಕೊರತೆಯಿರಲಿಲ್ಲ ಮತ್ತು ಮೌನಕ್ಕೆ ಆಸೀನಗೊಳ್ಳಲು ಪುರುಸೊತ್ತಿರಲಿಲ್ಲ.!
ಹೀಗೆ ಸಾಗುವಾಗ ಪೊದೆಗಳ ನಡುವಿಂದ ದರಬರನೆ ಸ್ವಲ್ಪ ಜೋರಾಗಿ ಸದ್ದಾಯಿತು. ಯಾರದೋ ಕೈಯಲ್ಲಿದ್ದ ಬ್ಯಾಟರಿಯ ಬೆಳಕು ಪೊದೆಗಳ ಹಿಂದೆ ಅವಿತ ಅಲ್ಪಸ್ವಲ್ಪ ಗೋಚರವಾಗುತ್ತಿದ್ದ ದೊಡ್ಡ ದೇಹದ ಜೀವಿಯೊಂದರ ಮೇಲೆ ಬಿತ್ತು. ಕೂಡಲೇ ಅದನ್ನು ಕಾಡುಕೋಣವೆಂದು ಗುರುತಿಸಿದ ರೆನ್ನಿ, ಎಲ್ಲ ಬ್ಯಾಟರಿಗಳನ್ನು ಬಂದ್ ಮಾಡುವಂತೆಯೂ ಮತ್ತು ಯಾರೂ ನಿಂತಲ್ಲಿಂದ ಕದಡದೆ ಮೌನವಾಗಿರುವಂತೆಯೂ ಸೂಚಿಸಿದ. ಎಲ್ಲ ಒಮ್ಮೆ ಹೌಹಾರಿದೆವು. ಮಾತಿನ ಕಡಲಿನ ಜಾಗವನ್ನು ಒಂದರೆಕ್ಷಣದಲ್ಲಿ ಆಕ್ರಮಿಸಿದ್ದ ಮೌನ ಇಡೀ ಜಗತ್ತನ್ನೇ ತಾನು ಪ್ರತಿನಿಧಿಸುತ್ತಿರುವಂತೆ ಪ್ರತಿಧ್ವನಿಸುತ್ತಿತ್ತು.

ಮುಂದುವರಿಯುತ್ತದೆ….

****

— ರಾಘವೇಂದ್ರ ಹೆಗಡೆ.