ಬ್ಲಾಗ್ ಸಂಗ್ರಹಗಳು

ಮಳೆ ನೆರಳು


ಕಿಟಕಿಯಿಂದಾಚೆ ಇಣುಕುತ್ತೇನೆ

ಹೊಗೆ ಮೋಡಗಳ ಪಟ್ಟಿ

ಹಸಿರು ತರಂಗಗಳ ಹೊದ್ದು ಹಾಸುವ ನಕ್ಷತ್ರ

ತೊಳೆದು ಒಣಗಿಸಿಟ್ಟ ಬೆರಳಿಗೆ

ಅಂಟಿದ ನೀಲಿಶಾಯಿಯಲಿ ಕಂಡ ಆಕಾಶ

ಮತ್ತು ಒದ್ದೆ ಮಣ್ಣು ತೂಕ ಅಳೆದು

ಹೊತ್ತದ್ದು ನಿನ್ನ ನೆರಳೇ ಇರಬೇಕು

 

ಬೆಳಗ್ಗೆ ಹೂವ ದಳದ ಮೇಲೆ ಕೂತ ಉಲ್ಕೆ

ಈಗ ಈ ಅಲ್ಯೂಮಿನಿಯಂ ಫ್ರೇಮಿನ

ಕಪ್ಪು ಗ್ಲಾಸುಗಳ ದಾಟಿ ಬಂದಿದೆ

ಕೆಮೆಸ್ಟ್ರಿ ಲ್ಯಾಬಿನ ನಿರ್ವಾತದಿ ಬಚ್ಚಿಟ್ಟ

ಗುಡುಗು ಮತ್ತು ಫಿಸಿಕ್ಸ್ ಲ್ಯಾಬಿನ

ಡಾರ್ಕುರೂಮಿನ ಮಿಂಚು ಬಲಾಬಲಕ್ಕೆ ಇಳಿದಿರಬೇಕು

 

ಬಿಡಿಸಿಟ್ಟ ನೆರಳ ಬೊಗಸೆಯಲ್ಲಿ ಮಡಚಿ

ಹೊತ್ತೋಡಿಹೋದ ಬೆಳಕ

ಕಣಕೆ ಜೀವದ ಹಂಗಿಲ್ಲ

ಇದಕ್ಕೆ ಸರಕ್ಕನೆ ಎದೆಯಿಂದೆದ್ದು

ಅಂತರಾಳವನನವರಿಸಿ ಕಡಲೊಡಲಾಳಕ್ಕಿಳಿವಂತೆ

ಹೋದ ಕವಿತೆ ಸಾಲುಗಳೇ ಸಾಕ್ಷಿ

 

ಪ್ರಾಸಗಳನ್ನು ಬಿಟ್ಟು ಹಾರುತ್ತದೆ

ಮೋಡ ಚಾದರದಡಿ ಹಕ್ಕಿ

ತ್ರಾಸುಗಳ ಬದಿಗಿರಿಸಿ

ಬಾಗಿ ಬಾಗಿ ನಿಲ್ಲುವ ಮರಕ್ಕೆ ತೂಫಾನುಗಳ ಲೆಕ್ಕವಿಲ್ಲ

ನೀಲಿಗೆಂಪು ಬಣ್ಣದ ಶೀಟಿನ ಈ ಹಾಳು ಮಾಡಿಗೆ

ಪಟಪಟ ಸಪ್ಪಳ ಮಾಡಲಷ್ಟೇ ಗೊತ್ತು;

ಇರುಳ ಬೀದಿ ದೀಪಕೆ ಗಿರಕಿ ಹೊಡೆವ ಹಾತೆಯಂತೆ

 

******

ಈ ಕವಿತೆ ‘ಅವಧಿ‘ಯಲ್ಲಿ ಪ್ರಕಟಗೊಂಡಿದೆ.  

 

— ರಾಘವೇಂದ್ರ ಹೆಗಡೆ 

 

ದನಿಯಾಗದ ಮೂರು ಹನಿ…


ತೀರದ ಬಾಹುಗಳಲಿ ತೊರೆ
ನದಿ – ಸಂಸಾರದ ಹೊರೆ
ನೊಗವೆನಿತು ಒಂದು ಬದುಕು

***

ಊರು ದಾರಿಗೆ
ದಿಕ್ಕು ದೆಸೆಗಳ ಪರಿಧಿ
ಮನಸೋ ಅಗಣಿತ ಪುಟ

***

ಅನಾಥ ಬಯಲಲಿ ಕಿಟಕಿ
ಸರಳುಗಳನನವರಿಸಿ ಕುಳಿತದ್ದು
ನೀ ತಿರುಗಿನೋಡಿದಷ್ಟೇ ದಿಟ!

***

— ರಾಘವೇಂದ್ರ ಹೆಗಡೆ