Monthly Archives: ಜುಲೈ 2010

ಹನಿಯೊಡೆದ ಮಳೆಯಲಿ ಕೊಚ್ಚಿಹೋದ ಹನಿಗಳಿವು.!


ಅರಳಿ ಬಂದ ನಗುವ ಹಿಂದೆ
ಅಡಗಿ ನಿಂತ ನೋವ ದನಿಯು
ನೆನಪ ಪುಟದ ಸಾಲಿಗೆರಗಿ
ಒತ್ತಿ ಬರುವ ಮೌನ ದನಿಯು .,
ಶಬ್ದವಾಗಿ ಪದವ ಮರೆತು
ಮಾತನಾಡ ಹೊರಟಿದೆ
ಅದೇನ ಕುರಿತು..?
ಕೇಳುತಿದೆ ಮೌನವಾಗಿಯೇ
ಭಾವಕಿಲ್ಲವೇ ಬೆಲೆ ಒಂದಿನಿತು..?!

———————-

ತಲೆದೂಗಿದೆ ಮರ
ನಿತ್ಯ ಜೀವ ಕೊಡುವ
ನೇಸರನ ಶೃದ್ಧೆಗೆ,
ಆದರೆ ಆ ಮರದ
ತಲೆ ಉರುಳಿಸಲು
ಹವಣಿಸುತಿಹೆವಲ್ಲ ನಾವು..!
ಅದೇನು ಕವಿದಿದೆ ನಮ್ಮ ಬುದ್ದಿಗೆ..?!

———————–

ನಿಲ್ಲದ ಕನವರಿಕೆಗೆ
ಉಸಿರು ಸೇರಿ
ಮುಗಿಯದ ಕಥೆಯ ನಡುವೆ
ಹೆಸರು ಬರೆದು
ಹಬ್ಬಿದ ಮಬ್ಬು
ಸಾಲಿನ ಕಿಟಕಿಯಲಿ
ಬೆಳಕ ಕಿಡಿಯನು
ಇಣುಕಿ ಅರಸಿ..
ಕಾಣಲಾರೆನಾ ಎಂಬ
ಕೊಂಚ ದಿಗಿಲ
ಗೊಂದಲದೊಡೆ ಬೆರೆಸಿ
ಮಾನವ ಕದಡುತ
ಒದ್ದೆಯಾದ ಹನಿ
ಕೊಚ್ಚಿ ಹೋಗಿದೆ ಈಗ
ಹನಿಯೊಡೆದ ಮಳೆಯಲಿ..!

——————–

ತಮ್ಮ ಪ್ರತಿಕ್ರಿಯೆಗೆ ಸದಾ ಸ್ವಾಗತ.
ಇಂತಿ
ರಾಘವೇಂದ್ರ ಹೆಗಡೆ

Advertisements

ಮುಖವಾಡದ ಹಿಂದೆ..


ಕಣ್ಣೋಟದ ತಪ್ಪಲಿನ ಹಸಿರ ಹಾಸಿನ ಆಚೆ
ಗೀಚಿರುವ ಲೆಕ್ಕಗಳ ಹರಿದ ಹಾಳೆಯ ಎಸೆದು
ತೋರ್ಪಡಿಕೆಗೆ ಮುಗುಳ್ನಗುವ ಮುಖಕೆ ಲೇಪಿಸಿ
ಇರದ ನಲಿವನು ಇರುವಂತೆ ಉಸುರುತ
ನೋವು, ಹತಾಷೆಗಳನೆಲ್ಲ ತುಟಿಕಚ್ಚಿ ನುಂಗಿ
ಹಾಯಾಗಿರುವಂತೆ ಹೇಳಿ ಮೌನದಿ
ಕಂಬನಿಸುತ್ತಿದೆಯ ನಿನ್ನ ಮನ ಮುಖವಾಡದ ಹಿಂದೆ..!

ಒಂದೊಮ್ಮೆ ಮುಗಿಲ ನೋಡಿ
ಮಗದೊಮ್ಮೆ ಬಯಲ ನೋಡಿ
ಅದೇನನೋ ತೊದಲುವ ನಿನ್ನ ಮನ..
ಕ್ಷಣಮಾತ್ರದಿ ಕಾಲದಿ ಹಿನ್ನಡೆದು,
ಮರುಕ್ಷಣದಿ ಮತ್ತೆಲ್ಲೋ ಮುನ್ನಡೆದು..
ಮೌನವನೆ ಕದಡಿ ಮಾತಾಡಿಸುತ
ಮನದುಂಬಿ ಬಾರದ ಮುಗುಳ್ನಗೆಯ
ಕೃತಕದಿ ಸೃಷ್ಟಿಸಿ ಬಿಕ್ಕಳಿಸುವುದು
ಅದೇಕೆ ಮುಖವಾಡದ ಹಿಂದೆ..!

ಕತ್ತಲೆಯ ಸಂತೆಯ ಮುಗಿಸಲು
ಸಾಲು ದೀಪಗಳ ಕನಸ ಕಂಡು
ಹಣತೆಯೊಂದನು ಹಚ್ಚಿ ಇಟ್ಟು
ದೂರದೂರಕೆ ಕೊಂಡೊಯ್ದು
ಬೆಳಕ ಪಸರಿಸುವಂತ ಸದ್ವಿಚಾರಗಳ
ನಡುವೆಯೇ ಎಣ್ಣೆ ಆರಬಹುದೆಂಬ
ಅಳುಕನು ಹೂತು ಮುನ್ನುಗ್ಗುವ
ಸದ್ಭಾವವಿದೆಯಲ್ಲ ನಿನ್ನ ಮನದಲ್ಲಿ..,
ಅದು ಬೆಳೆದು, ಹಣತೆಯ ಬೆಳಗುತ
ವಿಶ್ವ ವ್ಯಾಪಿಸುತ ನಿರಂತರವಾಗಲಿ
ಮುಖವಾಡದ ಹಿಂದೆ – ಮುಂದೆ….!

— ರಾಘವೇಂದ್ರ ಹೆಗಡೆ

ಕಥೆ ಹೇಳುವ ಮತ್ತೊಂದಿಷ್ಟು ಸಾಲುಗಳು. .


೧. ಬಹಳ ಹೊತ್ತು ಒಂದು ಸಾಲಿಗಾಗಿ ಯೋಚಿಸಿ ಕಡೆಗೆ ಬಂದ ವಿಷಯಗಳನ್ನು ಬಹಳ ತಲ್ಲೀನನಾಗಿ ಬರೆಯ ಹೊರಟ ಅವನಿಗೆ ಪೆನ್ನ ಇಂಕು ಮುಗಿದಿದ್ದೇ ತಿಳಿಯಲಿಲ್ಲವಂತೆ.!
೨. ಸಾಗಿಬಂದ ಹಾದಿಯ ಅವಲೋಕಿಸುತ್ತ ಸಾಕಷ್ಟು ಹಿನ್ನಡೆದಿದ್ದ ಆತನಿಗೆ ಮನೆಯ ಹಾದಿಯೇ ಮರೆತುಹೋಗಿತ್ತು.!
೩. ಆ ಅಪ್ರತಿಮ ಯುವ ಪ್ರತಿಭೆಯ ಚಿತ್ರಕಲೆ ಎಲ್ಲರ ಕಣ್ಣನ್ನು ಕುಕ್ಕಿದರೆ ಆತನ ಅಂಗವೈಕಲ್ಯದ ವಿಷಯದಲ್ಲಿ ಎಲ್ಲರೂ ಕುರುಡರಂತೆ ವರ್ತಿಸುತ್ತಿದ್ದರು.!
೪. ಬಾನಿಯೆಡೆ ಗೋವು ಬಂದರೆ ಓಡಿಸುತ್ತಾರೆ. ಅದರಲ್ಲಿ ನೀರು ತುಂಬಿಡುವುದರ ಉದ್ದೇಶ ಕೇವಲ ಅವರು ಕೈ-ಕಾಲು-ಮುಖ ತೊಳೆದುಕೊಳ್ಳಲು ಮಾತ್ರ!
೫. ಹಗಲಿಡೀ ಪರಿಸರ ಪ್ರೇಮಿಯೆಂದು ಫೋಸುಕೊಟ್ಟು ಭಾಷಣ ಮಾಡುವ ಆತ ರಾತ್ರಿಯಿಡೀ ಹಂದಿ, ಮತ್ತಿತರ ವನ್ಯಜೀವಿಗಳ ಬೇಟೆಗೆ ಗನ್ನು ಹಿಡಿದು ತಿರುಗುತ್ತಾನೆ.!
೬. ಸಾವಿನ ಸುತ್ತ ಸಾಕಷ್ಟು ಕತೆಗಳನ್ನು ಬರೆದ ಆತನ ಒಂದು ಕತೆ ಪ್ರಪ್ರಥಮ ಬಾರಿ ಪತ್ರಿಕೆಯೊಂದರಲ್ಲಿ ನಿನ್ನೆ ಪ್ರಕಟಗೊಂಡಿತ್ತು. ಇಂದು ಆತನೇ ಕೇವಲ ಒಂದು ಕಥೆಯಾಗಿ ಹದಿಮೂರನೇ ದಿವಸ!

ಮತ್ತೆ ಬರುವ ಹಂಬಲದಿ..ನಿನ್ನ ಹರಿವ ರಭಸದ ಮುಂದೆ
ನಾನ್ಯಾರು ನೀ ಹೇಳು..
ಬದುಕ ಬವಣೆಯಲಿ ಬೆಂದ
ಒಂದು ಕೇವಲ ಕಾಳು!
ಬಿದ್ದಾಯಿತು ನಾ ಜಾರಿ
ನಿನ್ನ ಸೆಳೆತದ ಸುಳಿಗೆ..
ಸುಳಿಯುವುದು ಇನ್ನೆಂದು
ನನ್ನೆದೆಗೆ ಬದುಕಹಾಡು..?!

ಆವೇಶದಿ ಉದ್ವೇಗದಿ
ಓಡಿ ಸಾಗರವ ಸೇರುವ
ಆತುರದಿ ನೀನು..
ಇಲ್ಲೇ ತೊರೆಯ ನಡುವೆ
ಗಿಡ ಪೊದೆಗಂಟಿ ಸೆರೆಸಿಕ್ಕು
ಬದುಕುವ ಕಾತರದಿ ನಾನು.!

ನಿನ್ನ ವಿರುದ್ದ ಈಜಿ
ದಡ ಸೇರುವೆನೆಂಬ
ಹುಚ್ಚು ಆಲೋಚನೆಯೆಲ್ಲ ಇಲ್ಲ
ಆದರೆ ನಂದೊಂದು ಪುಟ್ಟ
ಕೋರಿಕೆ ನಿನಗೆ-
ನನ್ನ ಉಳಿಸಿ ನೀ ದಡ ಸೇರಿಸುವೆಯಲ್ಲ.?!

ಅಂದೊಂದು ಖಾಲಿ ಪುಟದಿ
ಬಿತ್ತು ನನ್ನಾಕೃತಿ
ನೀ ಮುನಿದರೆ ಈ ಕ್ಷಣದಿಂದ ಅಲ್ಲೆಲ್ಲ
ನಾ ಕೇವಲ ಒಂದು ಸ್ಮೃತಿ!
ಇರಬಾರದೇಕೆ ನಿನಗೆ
ಈ ಜೀವದಮೇಲೊಂಚೂರು ಪ್ರೀತಿ.!?

ಕೊಚ್ಚಿಕೊಂಡು ಹೋಗುವಂತೆ
ರಭಸದಿ ಉಕ್ಕಿ ಬರುವ
ನಿನ್ನ ಉಗ್ರ ರೂಪದ
ಭೀತಿಯ ನಡುವೆಯೇ ಈ
ಎದೆಯಲಿ ಪುಟ್ಟ ಭರವಸೆಯ
ಕಿಡಿಯೊಂದು ಹೊತ್ತಿದೆ..
ಅದರ ಬೆಳಕನು ಉರಿಸಿ
ದಡ ಕಂಡು ಮತ್ತೆ
ಬದುಕಿ ಮೇಲೆದ್ದು ಬರುವ ಹಂಬಲದಿ ನಾನು…..!

— ರಾಘವೇಂದ್ರ ಹೆಗಡೆ
ಸಮರಸ‘ ಪತ್ರಿಕೆಯಲ್ಲಿ ಪ್ರಕಟಿತ
****
ಚಿತ್ರ ಕೃಪೆ: http://crunkish.com/