Monthly Archives: ಜನವರಿ 2013

ಸರಗೋಲು


ಕಡಲು ಕಾಣದೇ ಉಳಿದೀತು
ಅಲೆ ಸೋತರೆ
ಯಾವ ಬಾನಿ ಮತ್ತೆ ಜಗಕೆ
ಬಣ್ಣ ಕಟ್ಟೀತು ಮುಗಿಲು
ನೀ ತುಸು ನಕ್ಕರೆ
ಹೆಗಲುಗಳು ಯಾಕೆ
ವ್ಯಕ್ತ ಯುಗಕೆ

ಈಜುವುದು ಮೋಡ
ಬಾನಾಡಿಗಳ ಹಾವಳಿಯಲ್ಲಿ
ಮೀಯುವುದು ಮುಸಲಧರೆ
ಹಸಿಬೆಳಕ ಚಾವಡಿಯಲ್ಲಿ
ತೀರದ ದಾಹದಲಿ
ಹರಿವ ನಾಗಾಲೋಟದಲಿ
ಇರುಳಿನಲಿ ನಸುಕಿನಲಿ
ಒಲೆಯಡಿಯ ಕೆಂಡದಲಿ
ಉಗಿಯ ಹಾಸುವ ಉಸಿರು
ಎಲೆ ಮೊಗ್ಗುಗಳ
ಕಿಡಿ-ಕುಡಿಬಸಿರು

ಹಾಯ್ವ ಹಾದಿಯ ತೆರೆದು
ಕಾಯ್ವ ಕಥನವ ಬರೆದು
ಕಾಲ ಬರಮಾಡುವ
ದೀವಟಿಗೆ ನೀನು
ಸುಳಿಯ ಸಂಚಿಯಲವಿತು
ಹಿಂದೆ-ಮುಂದಕೆ
ಈಜ ಭೃಮಿಸುತಲಿ
ನಡೆವ ಧೂಳು ನಾನು?
—————

— ರಾಘವೇಂದ್ರ ಹೆಗಡೆ