Monthly Archives: ಡಿಸೆಂಬರ್ 2010

ದಿನದಿನವು ಹೊಸತಹುದು..


ದಿನದಿನವು ಹೊಸತಹುದು,
ದಿನದಿನವು ಹಳತಹುದು
ಹೊಸತದುವೆ ಹಳತದುವೆ
ಭೇದವುಂಟೇನು?
ಇರುವೆನೆಂಬುದು ಹಳಮೆ
ಬರುವೆನೆಂಬುದು ಹೊಸಮೆ
ಒಂದೆಕಾಲದ ಮಾತು
ಹಿಂದೆ ಮುಂದೆ!

ಶಾಲಾದಿನಗಳಲ್ಲಿ ಓದಿದ್ದ ಕವಿತೆಯ ಸಾಲುಗಳಿವು. ’ಇರುವೆನೆಂಬುದು ಹಳಮೆ, ಬರುವೆನೆಂಬುದು ಹೊಸಮೆ’ ಎಂಬ ಸಾಲು, ಮುಂಜಾವಿನ ಸಣ್ಣ ಗಾಳಿಯಲ್ಲಿ, ಧಾವಂತದ ದಾರಿಯಲಿ ಮುಗ್ಗರಿಸಿದಲ್ಲಿ, ತರಚುಗಾಯ ಮಾಡಿಕೊಂಡಲ್ಲಿ, ಗಾಯ ಮಾಗಿ ಕಲೆ ಉಳಿದಲ್ಲಿ, ಒಂದಕ್ಕೊಂದು ಪ್ರತಿಸ್ಪರ್ಧಿಸುವಂತೆ ಓಡೋಡಿ ಮಿಂಚುವ ಗಡಿಯಾರದ ಮುಳ್ಳುಗಳಲ್ಲಿ, ಬಿಸಿಲು-ಮಳೆಯಲ್ಲಿ…. ಹೀಗೆ ಎಲ್ಲೆಂದರಲ್ಲಿ ದಿನದಿನ ಎದುರಾಗುತ್ತ, ಕಾಡಿ ಮನದ ಪುಟಗಳಲ್ಲಿ ಅಚ್ಚಾಗಿಕುಂತಿದೆ. ಆದರೆ ಅದನ್ನು ಬರೆದ ಕವಿಯ ಹೆಸರು ಸ್ಪಷ್ಟವಾಗಿ ನೆನಪಿರದುದಕ್ಕೆ ಬೇಸರವಿದೆ.

****

ನಾಳೆಯಿಂದ ಹೊಸ ಕ್ಯಾಲಂಡರ್ ವರ್ಷ. ಗೋಡೆಯ ಮೇಲೆ ನೇತುಹಾಕಿಟ್ಟ ದಿನದರ್ಶಿಕೆ ನಿವೃತ್ತವಾಗಿ ಮತ್ತೊಂದು ಆವರ್ತನಕೆ ಸಜ್ಜಾಗಿದೆ. ವರ್ಷಗಳಿಂದ ಅಂಟಿಕೊಂಡ ಧೂಳು ಗಂಟು ಬಿಡಿಸಿದಂತೆ ಮುಕ್ತವಾಗುತ್ತಿದೆ….

ಇರುಳು ಅಸುನೀಗುತ್ತದೆ
ಮುಂಜಾವ ಮರುಹುಟ್ಟಿನೊಂದಿಗೆ
ತೆರೆದುಕೊಳ್ಳಲು..
ಇದು ಮುಗಿಯದ ಕಥೆ-
ಮುಗಿಯುವುದು
ಬದುಕ ಸಾಲುಗಳಷ್ಟೆ..!

ತಮ್ಮೆಲ್ಲರಿಗೂ ಹೊಸ ಕ್ಯಾಲೆಂಡರ್ ವರ್ಷದ(ಕ್ರಿಸ್ತ ವರ್ಷ 2011) ಹಾರ್ದಿಕ ಶುಭಾಶಯಗಳು.

ಶುಭಾಶಯ

— ರಾಘವೇಂದ್ರ ಹೆಗಡೆ

’ಗಿಡ’ ಮತ್ತು ’ಮರ’!


ಬಿಸಿಲ ಧಗೆಯಲ್ಲಿ ನಡೆದು ಸಾಗುತ್ತಿದ್ದೆ
ಎಲ್ಲಿ ನೋಟ ನೆಟ್ಟರೂ ಬರೀ
ಉದ್ದುದ್ದ ರಸ್ತೆಗಳು, ಕಾರು,
ಕಾಂಕ್ರೀಟು ಕಾಡುಗಳು..
ಜೋಲು ಮೋರೆಯ
ಕೈಯಲ್ಲಿ ಉದ್ದಿಕೊಳ್ಳುತ್ತ
ಹೆಜ್ಜೆ ಕಿತ್ತಿಡುವಲ್ಲಿ ಎದುರಾದ

ಬಾಲಕನೊಬ್ಬನ ಕೇಳಿದೆ-
ಸನಿಹ ಗಿಡಮರಗಳಿವೆಯೆ ಎಂದು;

ಆತ ಯೋಚಿಸುತ್ತ ನಿಂತದ್ದ ಕಂಡು
ಕನ್ನಡ ಗೊತ್ತಿರದಿರಬಹುದೆಂದು
ಇಂಗ್ಲಿಷಿನಲ್ಲಿ ಮತ್ತದನ್ನೇ ಕೇಳಿದೆ,
ಕಪಾಳಕ್ಕೆ ಹೊಡೆದಂತಾಯಿತು
ನೋಡಿ, ಆತ ಹಣಕಕ್ಕುವ
ಯಂತ್ರಗಳನ್ನು ಒಡಲಲ್ಲಿಟ್ಟುಕೊಂಡಿರುವ
ಗಾಜಿನ ಮನೆಗಳತ್ತ ಬೊಟ್ಟುಮಾಡಿ
ತೋರಿಸಿದ-
ಅದೇ ಅಲ್ಲಿ”Plant “ಮತ್ತೆ ಅಲ್ಲಿ “Tree”.. !!

— ರಾಘವೇಂದ್ರ ಹೆಗಡೆ

ಚಿತ್ರ ಕೃಪೆ : ಇಂಟರ್ನೆಟ್

ಮುಗಿಯದ ಕಥೆಯಲಿ ಮುಗಿವ ಸಾಲು..


ಸಮಯ ಸುಮ್ಮನೆ
ಕಾಲ್ನಡಿಗೆಯಲ್ಲಿ ಸಾಗುತ್ತದೆ
ಅದನ್ನು ಬೆಂಬತ್ತಿ ಓಡುವವರ
ಅಣಕಿಸುವಷ್ಟು ವೇಗದಲ್ಲಿ..

****

ಚೇಷ್ಟೆಗೆಂದು ಗೆಳೆಯನೊಬ್ಬನ
ಹೀಯಾಳಿಸಿದ್ದೆ.
ಇನ್ನೂ ಕಾಲಿಡಬೇಕಿದ್ದ ಜಾಗದಲ್ಲಿ
ಕರ್ರ್ರನೆ ಬೀಳುತ್ತಿದ್ದ ನನ್ನ ನೆರಳು
ತಲೆ ಎತ್ತದಷ್ಟರ ಮಟ್ಟಿಗೆ
ನನ್ನನ್ನುಹೀಯಾಳಿಸಿತ್ತು.!

****

ಹಿಂದೆಲ್ಲ ಇಲ್ಲಿ ದೇವರೆಂದು ಪೂಜಿಸಿ
ಧಾನ್ಯಗಳನ್ನು ಬೆಳೆಯುತ್ತಿದ್ದರಂತೆ,
ಈಗ ದಿನಂಪ್ರತಿ ನೂರಾರು ಜನ
ಬರುತ್ತಾರೆ, ಇಲ್ಲಿ ದೇಗುಲವಿಲ್ಲ
ಆದರೆ ಎ.ಟಿ.ಎಂ. ಕೌಂಟರು ತಲೆಯೆತ್ತಿದೆ!

****

— ರಾಘವೇಂದ್ರ ಹೆಗಡೆ

ಮೋಡದ ಮೇಲೊಂದು ವರ್ಷದ ನಡಿಗೆ..


“ಅಲೆಯುತ ಅಲೆಗಳ ಮೇಲೆ, ಬರೆಯುತ ಭಾವದ ಓಲೆ” ಎಂಬ ಒಕ್ಕಣೆಯೊಂದಿಗೆ ಆರಂಭಗೊಂಡು, ಅಳುಕುತ್ತಲೇ “ಭಾವಕಡಲಲ್ಲಿ ಒಂದು ಮೌನಯಾನ” ಹೊರಟು, “ಬರಲಿ ಮೆಲ್ಲನೆ ಗಾಳಿ, ಬಿರಿಯದಂತೆಯೆ ಮನದ ದೋಣಿ” ಎಂದು ಪ್ರಾರ್ಥಿಸುತ್ತ, ಕ್ಷಣ ಕ್ಷಣಕ್ಕೂ ಯಾತ್ರೆಯಲ್ಲಿ ಏಕಾಂತವ ಕದಡುವ, ತುಮುಲವುಂಟುಮಾಡುವ ಅಲೆಗಳ ಭೋರ್ಗರೆತದಿಂದ ಸಾಂತ್ವನಿಸಿಕೊಳ್ಳಲು “ದೂರವಾದರೂ ದಡ, ಭಾರವಾಗದಿರಲಿ ಹೃದಯ..” ಎಂಬ ಸ್ಪೂರ್ತಿಯುಕ್ತಿಯ ಸ್ತುತಿಸುತ್ತ, ಮನದ ಕಡಲಲ್ಲಿ ಮತ್ತು ಭಾವನೆಗಳ ಮೋಡದ ಮೇಲೆ ತೇಲುತ ಹೊರಟದ್ದು ರಾ ಗ ನೌ ಕೆ. ಹೀಗೆ ರಾಶಿ ರಾಶಿ ಪಂಕ್ತಿಯಲಿ ಭಾವಗಳ ಗರಿಬಿಚ್ಚಿ ಮನದ ನೌಕೆಯನೇರಿ ಅಭಿಯಾನ ಹೊರಟ ಕೆಲ ಅಲೆಗಳು ಉಸುರಿದ್ದು ಈ “ರಾ ಗ ನೌ ಕೆ”.

ಕವಿತೆಗಳನ್ನು ಮತ್ತು ಕವಿತೆಗಳ ಹಾಗೆ ಒಂದಷ್ಟನ್ನು ಗೀಚಿ ಹರಿದುಬಿಡುತ್ತಿದ್ದ ನಾನು, ಈ ಬ್ಲಾಗು ಲೋಕದಲ್ಲಿ ಯಾರೊಬ್ಬರ ಪರಿಚಯವೂ ಇರದೇ ಮತ್ತು ಅಸಲಿಗೆ ಇಂತವುಗಳ ಅಸ್ತಿತ್ವದ ಬಗ್ಗೆ ಎಳ್ಳಷ್ಟೂ ಅರಿವಿರದೆ ಇಲ್ಲಿಗೆ ಅಭ್ಯಾಗತನಾಗಿ ಬಂದದ್ದು ತೀರ ಆಕಸ್ಮಿಕವಾಗಿ. ಇಲ್ಲಿ ಹೆಚ್ಚಾಗಿ ನಾನು ಕವಿತೆಗಳನ್ನೇ ಬರೆದಿದ್ದೇನೆ ಮತ್ತು ಅವುಗಳ ವಿಭಾಗಕ್ಕೆ “ಹನಿ ಹರವು” ಎಂದು ನಾಮಕರಿಸಿದ್ದೇನೆ.

*****

ಅಕ್ಷರಗಳ ಸಂತೆಯಲಿ
ಬರಿ ನೆಪಮಾತ್ರನಾಗಿ ನಾನು
ಯುಕ್ತ ಪದಗಳನೆಲ್ಲ ಬಾಚಿ
ಹಿಡಿಯಹೋದೆ..
ತಪ್ತ ಪದಗಳ ಮರೆತು
ದುಃಖಿಸುತ ಸುಪ್ತವಾದವುಗಳ ಕುರಿತು,
ಬರಿಯ ಹಾಳೆಯೊಳಗೆಯೆ ಮುಳುಗಿ
ಅವುಗಳಿಗೇ ನಾ ಬೇಡವಾದೆ.!
ಬಂದ ನಾಲ್ಕು ಸಾಲನು
ಗೀಚುವಷ್ಟರೊಳಗೆಯೆ
ಒತ್ತರಿಸಿ ಬಂದು ನೆನಪೊಳು ನಿಲುಕದೆ
ಸಾವನಪ್ಪಿತು ಮುಂದಿನ ಸಾಲು..
ನೆನಪಿಸುತ ಶೀರ್ಷಿಕೆಯ
“ಅನಿಶ್ಚಿತತೆ ಎಂಬ ಕವಿತೆ;
ಕವಿತೆ ಎಂಬ ಅನಿಶ್ಚಿತತೆ..!”

*****

ಮನಸ್ಸಿನ ಬಗೆಬಗೆಯ ಬಣ್ಣಗಳಾದ ಗೊಂದಲ, ತಳಮಳ, ಹೇಳಬೇಕೆಂದುಕೊಂಡ ಅಥವಾ ಹೇಳಲಾಗದೇ ನುಂಗಿಕೊಂಡ ವಾಂಛೆ, ತದಾಮ್ಯತೆ, ಏಕಾಂತ, ಮೌನ, ನೋವು, ಹತಾಶೆ, ದುಃಖ, ಶಾಂತ, ತಪ್ತ, ನಗು, ಖುಶಿ,…. ಇವುಗಳೆಲ್ಲ ಹದವಾಗಿ, ಮತ್ತೊಮ್ಮೊಮ್ಮೆ ಉದ್ವೇಗದ ರಾಡಿಯಾಗಿ, ಹೃದಯ ಮನಸುಗಳ ಮೂಲಕ, ಪದಗಳ ರೂಪದಿ ಸೃಜಿಸಲ್ಪಟ್ಟಾಗ ಕವಿತೆ, ಕತೆ ಅಥವಾ ಭಾವಗಳ ಗುಚ್ಚವಾಗಿಸುವ ಪ್ರಯತ್ನದ ಇನ್ನಾವುದೇ ಪ್ರಾಕಾರದ ಬರವಣಿಗೆ ಹುಟ್ಟುತ್ತದೆ; ಮರುಕ್ಷಣ ಮನಸ್ಸಿಗೆ ಒಂದಷ್ಟು ನಿರಾಳವ ನೀಡುತ್ತದೆ, ಅಲ್ಲದೇ ಮನಸ್ಸು ಹರಿವ ನೀರಿನಂತಾಗಲೂ ಸಹ ಇದು ಸಹಕಾರಿಯಾಗುತ್ತದೆ ಎಂಬುದು ನನ್ನ ಭಾವ. ಅಂತೆಯೆ ಈ ಬ್ಲಾಗ್..
ನನ್ನ ಬರಹಗಳನ್ನು ಓದಿ ಪ್ರತಿಕ್ರಿಯಿಸಿದ ಮತ್ತು ಪ್ರತಿಕ್ರಿಯಿಸದೇ ಓದಿದ ಪ್ರತಿಯೊಬ್ಬರಿಗೂ ನನ್ನ ಕೃತಜ್ಞತೆಗಳು. ‘ರಾ ಗ ನೌ ಕೆ’ ಪಯಣ ಆರಂಭವಾಗಿ ಇಂದಿಗೆ ಒಂದು ವರ್ಷ. ಈ ಅಭಿಯಾನಕ್ಕೆ ತಮ್ಮ ಆಶೀರ್ವಾದ ಮತ್ತು ಪ್ರೋತ್ಸಾಹ ಸದಾ ಇರಲಿ.

— ರಾಘವೇಂದ್ರ ಹೆಗಡೆ.

*****
ಅಂದಹಾಗೆ ಮೇಲಿನ ಚಿತ್ರಗಳೆಲ್ಲ ಕೊಡಚಾದ್ರಿಯ ಕೆಲ ವಿಹಂಗಮ ನೋಟಗಳು. ಶಂಕರಾಚಾರ್ಯರ ತಪೋಭೂಮಿ, ಮೂಕಾಂಬಿಕೆಯ ಆಸ್ಥಾನ, ಸಂಜೀವಿನಿಯ ನೆಲೆ, ಸುಪ್ರಸಿದ್ದ ಪ್ರವಾಸಿ ತಾಣ, ಕರ್ನಾಟಕದ ಮುಕುಟಗರಿ, ಸಹ್ಯಾದ್ರಿಯ ಮೇರು ’ಕೊಡಚಾದ್ರಿ’ ಯ ಕುರಿತು ಬಹಳದಿನಗಳಿಂದ ಬರೆಯಬೇಕೆಂದುಕೊಂಡಿದ್ದೆ. ಇವು ಅಲ್ಲಿನ ಕೆಲ ಚಿತ್ರಗಳಷ್ಟೆ. ಮುಂದೆಂದಾದರೂ ಇದರ ಕುರಿತು ವಿವರವಾಗಿ ಬರೆಯುತ್ತೇನೆ.
*****

— ರಾಘವೇಂದ್ರ ಹೆಗಡೆ.