ಬ್ಲಾಗ್ ಸಂಗ್ರಹಗಳು

ಹಾದಿಯೊಂದರ ಹಾಡು


ಹಾದಿಯೊಂದರ ಹಾಡು

ಈ ಹಾದಿಯಲ್ಲೀಗ ಕೋಗಿಲೆ ಮಡಿದಿದೆ
ಹಸಿನೆನಪ ಹಾವಳಿಗೆ ಬಿರಿದು ಮೋಡ ತುಸು ಬಿಕ್ಕಿದೆ

ಎದೆಯ ಜೋಗುಳ ಮೊರೆವ ಕಾನನ
ಮೌನ ಸರಣಿಯ ಮಂಥನ
ಕೊರೆವ ಹೆಸರ ಬರೆವ ಉಸಿರೇ
ನೋವ ಕವಿತೆಗೆ ಬಂಧನ

ಹರಿಯಲಿಲ್ಲ ಹನಿಸಲಿಲ್ಲ
ಅಬ್ಧಿಯಂಗಳ ಪಾತ್ರಕೆ
ಉರಿಯಲಿಲ್ಲ ಆರಲಿಲ್ಲ
ಮರೆತು ಹೊರಟ ಮಾತ್ರಕೆ

ತಡಿಯ ಮೋಹ ಕಡಲ ನೋವ
ಬಲ್ಲ ಹೆಜ್ಜೆಗೆ ಯಾವ ಪಾಡು
ನೀಲ ಸ್ಥಂಭಿನಿ ಭಾವ ಸ್ಪಂದಿನಿ
ಭ್ರಮಿಪ ಮಾತ್ರಕೆ ಯಾವ ಹಾಡು?

ಅಡ್ಡ ಸಾಲಿನ ಉದ್ದ ಪದಕೆ
ಇನ್ನು ಬದ್ದವದಾವ ಸಂಕಲ್ಪ?
ಚೂರು ಚೂರೇ ಜಿಟಿವ ಮಳೆಗೆ
ಬಿದ್ದರೂ ಕವಿತೆಗೆ ನೋವು ಅಲ್ಪ ?

ತಿರುಗಿ ಅರಳದ ಕನಸ ಹೂವಿಗೆ
ಪಡಿಯಚ್ಚುಳಿದು ಅಳಿಸದ ಹೆಸರ ಗುಂಗು
ದೂರವಾದ ಹಾಡಿನೆದೆಗೆ
ಮತ್ತೇಕೆ ನನ್ನ ಪದದ ಹಂಗು?

-ರಾಘವೇಂದ್ರ ಹೆಗಡೆ

ಈ ಕವಿತೆ ‘ಪಂಜು‘ವಿನಲ್ಲಿ ಪ್ರಕಟಗೊಂಡಿದೆ.

ಬರತವೇರುವ ಹೊತ್ತು


ಬೆವರುತ್ತದೆ ಬೀಸಿ ಬರದ ಗಾಳಿ
ಬತ್ತಿದ ಸಿಹಿನೀರಲಿ
ಬರತವೇರುವ ಹೊತ್ತು
ಕಿಟಕಿ ಗಾಜಲಿ ಕಂಡ ಹನಿ
ನಿರೂಪಿಸಿದವಗೇ ಗೊತ್ತು
ಊರ ತೊರೆದದ್ದು ಹಾದಿಯೋ ಹೆಜ್ಜೆಯೋ?

ಕವಿತೆ ಮುದುಡಿದ್ದ ಜಾಗದಿ
ಹರಿದ ಹೊಳೆಗೆ ಕೊಚ್ಚಿಹೋದದ್ದೆಷ್ಟು
ತಪ್ಪಿ ನಿನ್ನೆದೆ ತಲುಪಿದ್ದೆಷ್ಟು?
ಗಿಜಗುಡುವ ಬಯಲಿನಲ್ಲಿ
ಉರಿಬೆಂದ ಒಡಲಿನಲಿ
ಅರೆಬೆಂದ ಒಲವಿನಲಿ..

ಕೆನೆಗಟ್ಟಿದ ಕಾಡಿಗೆ
ಮೋಡ ಮಳೆ ಹಕ್ಕಿ
ಕವಲೊಡೆಯದ ಹೆಣೆಗೆ
ಹಡೆದ ನೆರಳ ರಂಗವಲ್ಲಿ
ಬಿರಿವ ಕುಡಿಗೆ ದಾರದ ಕುಣಿಕೆ
ಸಿಕ್ಕಿದ್ದೆಷ್ಟು, ಹಣಿದಿದ್ದೆಷ್ಟು, ಜೀವ ಹೆಣೆದಿದ್ದೆಷ್ಟು?

ತೊರೆಯ ನಿರಂತರತೆಯ
ಅಂತರಾಳದಲಿ ಹೊಸೆದ
ಹಸಿನೆನಪು ಹಸಿದು
ಬೀಸಿಬರದೇ ಗಾಳಿ ಬೆವರುತ್ತಿದೆ
ಬತ್ತಿದ ಸಿಹಿನೀರಲಿ
ಬರತವೇರುವ ಹೊತ್ತು

— ರಾಘವೇಂದ್ರ ಹೆಗಡೆ

ಭ್ರಮೆ ಮತ್ತು ಕವಿತೆ


ಹರಿಯಲಿಲ್ಲ ಕವಿತೆ
ಕಡಲು ಕನವರಿಸಿದಂತೆ ತಟವ
ಬರೆಯಲಿಲ್ಲ ಕನಸು
ಭ್ರಮೆ ಸೆರೆಯೊಡೆದಂತೆ ಜೀವ

ಈಗ ಹರಿದ ಕಾಗದದ ಎದೆಗಂಟಿದ ದೋಣಿಗೆ
ನೆರೆ ಮಾರುತಗಳ ಭೀತಿಯಿಲ್ಲ
ಮತ್ತೆ ಮತ್ತೆ ಇಬ್ಬನಿಯಲಿ
ಕಾಣುತ್ತದೆ ರಾತ್ರಿ
ಭವಿತವ್ಯದ ಬೆಳಕಿಗೆ
ಇಲ್ಲಿಯ ಕತ್ತಲಿನದೇ ಚಿಂತೆ

ಈಗೂ ಕಂಪ ಪಸರುತ್ತಿದೆ
ಬೋಳು ಸಂಪಿಗೆ ಮರ
ನಭ ನೀಲಿಗಳ ಮೀರಿ
ದಿನ ಹಾಯುತಿದೆ ಚರ

ಒಡೆದು ಹೋಗಲಿ ಕಣ್ಣೀರ ಹನಿ
ಈ ಪಾಪನಾಶಿನಿ ನೀರಲ್ಲಿ
ಕರಗಿ ಉದುರಲಿ ಮೋಡ
ಎದೆಯ ಗಂಧ ಗಾಳಿಯಲ್ಲಿ;
ಹಾರಿ ಗೆಲ್ಲಬಹುದು ಬಾನಾಡಿ
ಪಂಜರದ ಒಂಟಿತಂತಿ
ಸುಪ್ತಸ್ವರವ ಮೀಟುವಲ್ಲಿ..

***

ರಾ ಗ ನೌ ಕೆ‘ಗೆ, ಡಿಸೆಂಬರ್ 3ಕ್ಕೆ ನಾಲ್ಕು ವರ್ಷ ತುಂಬಿತು. 🙂

ತಮ್ಮೆಲ್ಲರ ಪ್ರೋತ್ಸಾಹ ಸದಾ ಹೀಗೇ ಇರಲಿ 🙂

24

— ರಾಘವೇಂದ್ರ ಹೆಗಡೆ

ಬೆಳಕ ಹನಿ


ದಣಪೆ ತೆರೆದಷ್ಟೇ ದಾರಿ
ನೀ ನಕ್ಕಷ್ಟೇ ಕವಿತೆ

ಈ ಹಾಳು ಮಾಘಿಗೇನು ಗೊತ್ತು
ಹೂ ಎಸಳ ಮೇಲೆ ಹಾಸಿದ್ದು
ನಿನ್ನ ಕಣ್ಬೆಳಕೆಂದು

ದಣಪೆ ತೆರೆದಷ್ಟೇ ದಾರಿ
ನೀ ನಕ್ಕಷ್ಟೇ ಕವಿತೆ

ಗಾಳಿ ಘಮಲಿನಲಿ
ತಿಳಿನೀಲಿ ನೀರಿನಲಿ
ಮುಖವಿರದ ಕನ್ನಡಿಯಲಿ
ಇಣುಕಿದ್ದು ಕನಸಾ, ನೀನಾ?

ನೋಡು ಮತ್ತೆ
ದಣಪೆ ತೆರೆದಷ್ಟೇ ದಾರಿ
ನೀ ನಕ್ಕಷ್ಟೇ ಕವಿತೆ

ಆವರಿಸು ದಿನವ
ಸಾವರಿಸು ಕಥನ
ಕನವರಿಕೆಗೆ ಉಳಿದೇ ಹೋಗಲಿ
ಒಂದು ಹನಿ – ಕವನ

ಸೂರ್ಯ ಕಡಲ ಹಾದು
ಬರುವಂತೆ ನಿತ್ಯ;
ಚಂದ್ರ ಇರುಳ ಕಡೆದು
ಹೊಳೆವಷ್ಟೇ ಸತ್ಯ
ದಣಪೆ ತೆರೆದಷ್ಟೇ ದಾರಿ
ನೀ ನಕ್ಕಷ್ಟೇ ಕವಿತೆ!

— ರಾಘವೇಂದ್ರ ಹೆಗಡೆ

ಮತ್ತೆ ಮತ್ತೆ ಹನಿ…


-೧-
ಹರಿವಿರಲು ಹೊಳೆಗೆ
ಕೆನೆಯಿರಲು ಮಳೆಗೆ
ಅವಿತಿರುವುದೇ ನೆನಪು
ತುಸು ಸೋರದೆ ಅಡಿ ಇಳೆಗೆ ?

***

-೨-
ಹನಿಯ ಆಯುವ ಸಲುವೇ
ಕಾದಿತ್ತೆ ಕಡಲು
ತಾರೆ ಸೆಳೆಯಲೆಂದೇ
ಗರಿ ಬಿಚ್ಚಿತ್ತೆ ನವಿಲು
ನೀಲ ಕಂಗಳಲಿ ರಹದಾರಿ
ಪ್ರತಿಬಿಂಬವಾಗುವುದರೊಳಗೆ
ಕಂಡದ್ದು ಮೋಡ ಕವಿದ ಮುಗಿಲು?

***

-೩-
ಮತ್ತೆ ಮತ್ತೆ ಬರೆಸುವುದಿಲ್ಲ
ಎಂದೆದ್ದು ಹೊರಟದ್ದು ಕವಿತೆ
ಕಂಡರೂ ಕಾಣದಂತೆ
ಖುದ್ದು ಮರುಗಿ ನೀನೇಕೆ ಅವಿತೆ?

***

-೪-
ಗಾಳಿ ತಂಗಾಳಿಯಾದದ್ದೇ ಸೊಂಪು
ಬೀಸದ ದಾಳದಲಿ ಎಲೆಯುದುರಿದ
ಪದಸಾಲು ಚಿಲಿಪಿಲಿ
ಮಳೆ ಮಣ್ಣ ಹರನೀರಕೆಂಪು
ಒಡಲಾಳದ ನೆನಪ ಘಮಲೇ ಕಂಪು?

***

-೫-
ನೋಟದಲ್ಲೇ ನೀ
ಹರಡಿಟ್ಟ ನೀಲಿತೀರ
ಕಳೆದೇ ಹೋಯಿತಾ
ಕಡೆಗೂ ಸರಿದು ದೂರದೂರ?

***

-೬-
ಹೂವು ಕಟ್ಟಿದ್ದು ಹಕ್ಕಿಯಲ್ಲ
ಗೂಡು ನೇಯ್ದದ್ದು ದುಂಬಿಯಲ್ಲ
ವಾಸ್ತವದ ಹಾವಳಿಯಲಿ ಕವಿತೆ
ಮತ್ತೆ ಮತ್ತೆ ಹನಿಯೊಡೆಯುತ್ತದೆ
ಹಾಸಿಬಿದ್ದ ಬೇಸಿಗೆಗೆ
ಬೆದರಿ ಬತ್ತುವ ಜಲಧಾರೆಗೆ ಮರುಗಿ…

***

— ರಾಘವೇಂದ್ರ ಹೆಗಡೆ

ಮೂರುಸಂಜೆ ದೀಪ


ಚೂರು ಚೂರಾಗಿ ಬಿಕ್ಕಿ ಹಾರುವ
ಮೋಡ ನಿನ್ನ ಜಿಟಿಜಿಟಿ
ಒಂಟಿಹಾದಿಗೆ ಮೂರುಸಂಜೆಯ ದೀಪ

ಅನಂತದ ತಿಳಿನೀಲಿ ಬಣ್ಣದಂತೆ ಹೊಳೆದು
ಟೆರೆಸ್ ಹತ್ತಿ ಕೂತು ನಿನ್ನ ಅಣಕಿಸುವ
ಡ್ಯೂರಶೈನ್ ಶೀಟು
ಒಂದು ಹುಲ್ಲೂ ಹುಟ್ಟದ
ಕಾಂಕ್ರೀಟು ರೋಡುಗಳನೆಲ್ಲ
ಬೈಪಾಸ್ ಹಾಯದೇ ಕ್ಷಮಿಸಿಬಿಡು.

ಆ ಬೋಳುಗದ್ದೆಯಲ್ಲಿ ಜಮಾನದಲ್ಲಿ
ಭತ್ತ ಬೆಳೆಯುತ್ತಿದ್ದರು
ಅಕೋ ಆ ಹಣೆಪಟ್ಟಿ
ಹಂಗಿರದ ಬೆಟ್ಟ ಮತ್ತಲ್ಲಿ
ಹರಿವ ಅಘನಾಶಿನಿ ಮಾತ್ರ
ಈಗ ಜೀವಂತ ಸಾಕ್ಷಿ

ವರವಾಗಿ ಸುರಿದುಬಿಡು
ಇಲ್ಲೇ ಆಚೀಚೆಯ
ಮಣ್ಣ ಕಣಕಣದ ಗಂಧ ಸೇಚುವಂತೆ

ಇರು ಒಂದೆರಡು ನಿಮಿಷ
ಉಳಿದರ್ಧ ಕಪ್ಪು ಚಹಾ ಹೀರಿ
ಈ ಮಾಡಿನಿಂದಾಚೆ ನಾನೂ ಬರುವೆ
ಬೀಸದ ನಿರ್ಜೀವ ಗಾಳಿ
ಪಂಜಿಯಲಿ ಮೊಳಕೆಯೊಡೆಯಲಿ
ಕವಿತೆಯಾದರೂ ಒಂದು
ಜತನವಾಗಿ, ಪತನವಾಗಿ,
ಇಲ್ಲ ಅನಾಥವಾಗಿ

–ರಾಘವೇಂದ್ರ ಹೆಗಡೆ