Category Archives: ಹನಿಹರವು (ಕವಿತೆ)

Kannada poems written by Raghavendra Hegde

ಮತ್ತೆ ಮತ್ತೆ ಕವಿತೆ


ಹರಿದು ಬಿಡು ಸುಮ್ಮನೆ
ಕಣ್ಣೀರು ನನ್ನೆದೆ ತಲುಪದಂತೆ
ಬರೆದುಬಿಡು ಒಮ್ಮೆಗೆ
ಕವಿತೆ ಮತ್ತೆ ನೆನಪಾಗಿ ಕಾಡದಂತೆ

ನನ್ನ ಮೋಡದ ಬುಟ್ಟಿ
ತಳಒಡೆದು ಹನಿಸುವಲ್ಲಿ
ನಿನ್ನ ಒನಪಿನ ಕುಡಿಕೆ
ಮನದ ಮುಗಿಲೊಳು ಬಿರಿಯೆ
ಚಿತ್ತಭಿತ್ತಿಯೊಳಿನ್ನಾವ ಮೂರ್ತರೂಪ
ಒಲವ ಭರವಸೆಯೊಂದೆ ಸುಪ್ತದೀಪ?

ನಿನ್ನ ನೋಟದ ಸೆಳೆತ
ನನ್ನೆದೆಯ ನದಿಗಿಲ್ಲ
ನಗುಮೊಗವು ಅಲೆಯುಲಿವ ಕಡಲಿನಂತೆ
ಭೋರ್ಗರೆವ ಮನಸಿನಲಿ
ಸುಡುವ ಬೆಳದಿಂಗಳೊಳು
ತಂಗಾಳಿ ಕವಿಯುವುದೆ ಆಪ್ತ ಕವಿತೆಯಂತೆ?

ತಲುಪಿಲ್ಲ ನಾನಿನ್ನೂ ನಿನ್ನೊಲವಿನ ತಟವ
ಹಾರಬೇಕಿನ್ನು ಕವಿತೆಯೊಳಗಿನ ಸ್ವರದಗೂಡೆ
ಹೂವ ಕಟ್ಟಿದ ದೀಪ ಮೊಗ್ಗಿನೆಸಳನು ಮೀಟಿ
ಮುಸ್ಸಂಜೆರಂಗಂತೆ ಇನ್ನಾದರೂ ನಿನ್ನ ತಲುಪಬಹುದೇ?


ಡಿಸೆಂಬರ್ 3ಕ್ಕೆ ‘ರಾ ಗ ನೌ ಕೆ’ಗೆ 7 ತುಂಬಿತು. ಬರಹಗಳಿಗೆ ಪ್ರೋತ್ಸಾಹಿಸಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಕೃತಜ್ಞತೆಗಳು.

— ರಾಘವೇಂದ್ರ ಹೆಗಡೆ


ದಾರಿ ಕೂಡುವ ಬುಡಕೆ..


ಮೋಡದ ಆವರ್ತನಕೆ
ಕಡಲು ಪೊರೆಯೊಡೆವಂತೆ
ಉಸಿರ ಜ್ವಾಲೆಗೆ ಹನಿವ ಮಳೆಹನಿ ನೀನು

**

ಬಾನ ಮಂಟಪದಲ್ಲಿ
ಘಮಿಪ ಹೂ ಪಕಳೆಯ ಚೆಲ್ಲಿ
ಚಿತ್ತಭಿತ್ತಿಗೆ ಚಿತ್ತಾರವಾದ ನೀನೇ ರಂಗವಲ್ಲಿ

**

ಅನಂತ ಚುಕ್ಕಿ ಬಟ್ಟಲೊಳಗೆ
ಮೊಗೆದಷ್ಟೂ ತೀರದ
ನಿನ್ನ ಮೊಗದ ನಗುವದು ಮುಗಿಯದ ಕವಿತೆ

**

ಒಲವ ಕಿಡಿ ಹಚ್ಚಿದ ಬಿಸಿಗೆ
ನಿನ್ನ ನೋಟದ ಬೆಚ್ಚನೆಯ ಬೆಸುಗೆ
ಬಾನಾಡಿ ನುಲಿದಂತೆ ನಿನ್ನ ಒಲುಮೆ

**

ದಾರಿ ಕೂಡುವ ಬುಡಕೆ
ನಿನ್ನ ಹೆಜ್ಜೆ ಗುರುತಿನ ಹೊದಿಕೆ
ಬರೆಯಬೇಕಿಲ್ಲ ಮತ್ತೆ ಧರೆಯ ಸೊಬಗು

**

ಹಾದಿಯೊಂದರ ಹಾಡು


ಹಾದಿಯೊಂದರ ಹಾಡು

ಈ ಹಾದಿಯಲ್ಲೀಗ ಕೋಗಿಲೆ ಮಡಿದಿದೆ
ಹಸಿನೆನಪ ಹಾವಳಿಗೆ ಬಿರಿದು ಮೋಡ ತುಸು ಬಿಕ್ಕಿದೆ

ಎದೆಯ ಜೋಗುಳ ಮೊರೆವ ಕಾನನ
ಮೌನ ಸರಣಿಯ ಮಂಥನ
ಕೊರೆವ ಹೆಸರ ಬರೆವ ಉಸಿರೇ
ನೋವ ಕವಿತೆಗೆ ಬಂಧನ

ಹರಿಯಲಿಲ್ಲ ಹನಿಸಲಿಲ್ಲ
ಅಬ್ಧಿಯಂಗಳ ಪಾತ್ರಕೆ
ಉರಿಯಲಿಲ್ಲ ಆರಲಿಲ್ಲ
ಮರೆತು ಹೊರಟ ಮಾತ್ರಕೆ

ತಡಿಯ ಮೋಹ ಕಡಲ ನೋವ
ಬಲ್ಲ ಹೆಜ್ಜೆಗೆ ಯಾವ ಪಾಡು
ನೀಲ ಸ್ಥಂಭಿನಿ ಭಾವ ಸ್ಪಂದಿನಿ
ಭ್ರಮಿಪ ಮಾತ್ರಕೆ ಯಾವ ಹಾಡು?

ಅಡ್ಡ ಸಾಲಿನ ಉದ್ದ ಪದಕೆ
ಇನ್ನು ಬದ್ದವದಾವ ಸಂಕಲ್ಪ?
ಚೂರು ಚೂರೇ ಜಿಟಿವ ಮಳೆಗೆ
ಬಿದ್ದರೂ ಕವಿತೆಗೆ ನೋವು ಅಲ್ಪ ?

ತಿರುಗಿ ಅರಳದ ಕನಸ ಹೂವಿಗೆ
ಪಡಿಯಚ್ಚುಳಿದು ಅಳಿಸದ ಹೆಸರ ಗುಂಗು
ದೂರವಾದ ಹಾಡಿನೆದೆಗೆ
ಮತ್ತೇಕೆ ನನ್ನ ಪದದ ಹಂಗು?

-ರಾಘವೇಂದ್ರ ಹೆಗಡೆ

ಈ ಕವಿತೆ ‘ಪಂಜು‘ವಿನಲ್ಲಿ ಪ್ರಕಟಗೊಂಡಿದೆ.

ಬರತವೇರುವ ಹೊತ್ತು


ಬೆವರುತ್ತದೆ ಬೀಸಿ ಬರದ ಗಾಳಿ
ಬತ್ತಿದ ಸಿಹಿನೀರಲಿ
ಬರತವೇರುವ ಹೊತ್ತು
ಕಿಟಕಿ ಗಾಜಲಿ ಕಂಡ ಹನಿ
ನಿರೂಪಿಸಿದವಗೇ ಗೊತ್ತು
ಊರ ತೊರೆದದ್ದು ಹಾದಿಯೋ ಹೆಜ್ಜೆಯೋ?

ಕವಿತೆ ಮುದುಡಿದ್ದ ಜಾಗದಿ
ಹರಿದ ಹೊಳೆಗೆ ಕೊಚ್ಚಿಹೋದದ್ದೆಷ್ಟು
ತಪ್ಪಿ ನಿನ್ನೆದೆ ತಲುಪಿದ್ದೆಷ್ಟು?
ಗಿಜಗುಡುವ ಬಯಲಿನಲ್ಲಿ
ಉರಿಬೆಂದ ಒಡಲಿನಲಿ
ಅರೆಬೆಂದ ಒಲವಿನಲಿ..

ಕೆನೆಗಟ್ಟಿದ ಕಾಡಿಗೆ
ಮೋಡ ಮಳೆ ಹಕ್ಕಿ
ಕವಲೊಡೆಯದ ಹೆಣೆಗೆ
ಹಡೆದ ನೆರಳ ರಂಗವಲ್ಲಿ
ಬಿರಿವ ಕುಡಿಗೆ ದಾರದ ಕುಣಿಕೆ
ಸಿಕ್ಕಿದ್ದೆಷ್ಟು, ಹಣಿದಿದ್ದೆಷ್ಟು, ಜೀವ ಹೆಣೆದಿದ್ದೆಷ್ಟು?

ತೊರೆಯ ನಿರಂತರತೆಯ
ಅಂತರಾಳದಲಿ ಹೊಸೆದ
ಹಸಿನೆನಪು ಹಸಿದು
ಬೀಸಿಬರದೇ ಗಾಳಿ ಬೆವರುತ್ತಿದೆ
ಬತ್ತಿದ ಸಿಹಿನೀರಲಿ
ಬರತವೇರುವ ಹೊತ್ತು

— ರಾಘವೇಂದ್ರ ಹೆಗಡೆ

ಭ್ರಮೆ ಮತ್ತು ಕವಿತೆ


ಹರಿಯಲಿಲ್ಲ ಕವಿತೆ
ಕಡಲು ಕನವರಿಸಿದಂತೆ ತಟವ
ಬರೆಯಲಿಲ್ಲ ಕನಸು
ಭ್ರಮೆ ಸೆರೆಯೊಡೆದಂತೆ ಜೀವ

ಈಗ ಹರಿದ ಕಾಗದದ ಎದೆಗಂಟಿದ ದೋಣಿಗೆ
ನೆರೆ ಮಾರುತಗಳ ಭೀತಿಯಿಲ್ಲ
ಮತ್ತೆ ಮತ್ತೆ ಇಬ್ಬನಿಯಲಿ
ಕಾಣುತ್ತದೆ ರಾತ್ರಿ
ಭವಿತವ್ಯದ ಬೆಳಕಿಗೆ
ಇಲ್ಲಿಯ ಕತ್ತಲಿನದೇ ಚಿಂತೆ

ಈಗೂ ಕಂಪ ಪಸರುತ್ತಿದೆ
ಬೋಳು ಸಂಪಿಗೆ ಮರ
ನಭ ನೀಲಿಗಳ ಮೀರಿ
ದಿನ ಹಾಯುತಿದೆ ಚರ

ಒಡೆದು ಹೋಗಲಿ ಕಣ್ಣೀರ ಹನಿ
ಈ ಪಾಪನಾಶಿನಿ ನೀರಲ್ಲಿ
ಕರಗಿ ಉದುರಲಿ ಮೋಡ
ಎದೆಯ ಗಂಧ ಗಾಳಿಯಲ್ಲಿ;
ಹಾರಿ ಗೆಲ್ಲಬಹುದು ಬಾನಾಡಿ
ಪಂಜರದ ಒಂಟಿತಂತಿ
ಸುಪ್ತಸ್ವರವ ಮೀಟುವಲ್ಲಿ..

***

ರಾ ಗ ನೌ ಕೆ‘ಗೆ, ಡಿಸೆಂಬರ್ 3ಕ್ಕೆ ನಾಲ್ಕು ವರ್ಷ ತುಂಬಿತು. 🙂

ತಮ್ಮೆಲ್ಲರ ಪ್ರೋತ್ಸಾಹ ಸದಾ ಹೀಗೇ ಇರಲಿ 🙂

24

— ರಾಘವೇಂದ್ರ ಹೆಗಡೆ

ಮಳೆ ನೆರಳು


ಕಿಟಕಿಯಿಂದಾಚೆ ಇಣುಕುತ್ತೇನೆ

ಹೊಗೆ ಮೋಡಗಳ ಪಟ್ಟಿ

ಹಸಿರು ತರಂಗಗಳ ಹೊದ್ದು ಹಾಸುವ ನಕ್ಷತ್ರ

ತೊಳೆದು ಒಣಗಿಸಿಟ್ಟ ಬೆರಳಿಗೆ

ಅಂಟಿದ ನೀಲಿಶಾಯಿಯಲಿ ಕಂಡ ಆಕಾಶ

ಮತ್ತು ಒದ್ದೆ ಮಣ್ಣು ತೂಕ ಅಳೆದು

ಹೊತ್ತದ್ದು ನಿನ್ನ ನೆರಳೇ ಇರಬೇಕು

 

ಬೆಳಗ್ಗೆ ಹೂವ ದಳದ ಮೇಲೆ ಕೂತ ಉಲ್ಕೆ

ಈಗ ಈ ಅಲ್ಯೂಮಿನಿಯಂ ಫ್ರೇಮಿನ

ಕಪ್ಪು ಗ್ಲಾಸುಗಳ ದಾಟಿ ಬಂದಿದೆ

ಕೆಮೆಸ್ಟ್ರಿ ಲ್ಯಾಬಿನ ನಿರ್ವಾತದಿ ಬಚ್ಚಿಟ್ಟ

ಗುಡುಗು ಮತ್ತು ಫಿಸಿಕ್ಸ್ ಲ್ಯಾಬಿನ

ಡಾರ್ಕುರೂಮಿನ ಮಿಂಚು ಬಲಾಬಲಕ್ಕೆ ಇಳಿದಿರಬೇಕು

 

ಬಿಡಿಸಿಟ್ಟ ನೆರಳ ಬೊಗಸೆಯಲ್ಲಿ ಮಡಚಿ

ಹೊತ್ತೋಡಿಹೋದ ಬೆಳಕ

ಕಣಕೆ ಜೀವದ ಹಂಗಿಲ್ಲ

ಇದಕ್ಕೆ ಸರಕ್ಕನೆ ಎದೆಯಿಂದೆದ್ದು

ಅಂತರಾಳವನನವರಿಸಿ ಕಡಲೊಡಲಾಳಕ್ಕಿಳಿವಂತೆ

ಹೋದ ಕವಿತೆ ಸಾಲುಗಳೇ ಸಾಕ್ಷಿ

 

ಪ್ರಾಸಗಳನ್ನು ಬಿಟ್ಟು ಹಾರುತ್ತದೆ

ಮೋಡ ಚಾದರದಡಿ ಹಕ್ಕಿ

ತ್ರಾಸುಗಳ ಬದಿಗಿರಿಸಿ

ಬಾಗಿ ಬಾಗಿ ನಿಲ್ಲುವ ಮರಕ್ಕೆ ತೂಫಾನುಗಳ ಲೆಕ್ಕವಿಲ್ಲ

ನೀಲಿಗೆಂಪು ಬಣ್ಣದ ಶೀಟಿನ ಈ ಹಾಳು ಮಾಡಿಗೆ

ಪಟಪಟ ಸಪ್ಪಳ ಮಾಡಲಷ್ಟೇ ಗೊತ್ತು;

ಇರುಳ ಬೀದಿ ದೀಪಕೆ ಗಿರಕಿ ಹೊಡೆವ ಹಾತೆಯಂತೆ

 

******

ಈ ಕವಿತೆ ‘ಅವಧಿ‘ಯಲ್ಲಿ ಪ್ರಕಟಗೊಂಡಿದೆ.  

 

— ರಾಘವೇಂದ್ರ ಹೆಗಡೆ