ಬ್ಲಾಗ್ ಸಂಗ್ರಹಗಳು

ಬರತವೇರುವ ಹೊತ್ತು


ಬೆವರುತ್ತದೆ ಬೀಸಿ ಬರದ ಗಾಳಿ
ಬತ್ತಿದ ಸಿಹಿನೀರಲಿ
ಬರತವೇರುವ ಹೊತ್ತು
ಕಿಟಕಿ ಗಾಜಲಿ ಕಂಡ ಹನಿ
ನಿರೂಪಿಸಿದವಗೇ ಗೊತ್ತು
ಊರ ತೊರೆದದ್ದು ಹಾದಿಯೋ ಹೆಜ್ಜೆಯೋ?

ಕವಿತೆ ಮುದುಡಿದ್ದ ಜಾಗದಿ
ಹರಿದ ಹೊಳೆಗೆ ಕೊಚ್ಚಿಹೋದದ್ದೆಷ್ಟು
ತಪ್ಪಿ ನಿನ್ನೆದೆ ತಲುಪಿದ್ದೆಷ್ಟು?
ಗಿಜಗುಡುವ ಬಯಲಿನಲ್ಲಿ
ಉರಿಬೆಂದ ಒಡಲಿನಲಿ
ಅರೆಬೆಂದ ಒಲವಿನಲಿ..

ಕೆನೆಗಟ್ಟಿದ ಕಾಡಿಗೆ
ಮೋಡ ಮಳೆ ಹಕ್ಕಿ
ಕವಲೊಡೆಯದ ಹೆಣೆಗೆ
ಹಡೆದ ನೆರಳ ರಂಗವಲ್ಲಿ
ಬಿರಿವ ಕುಡಿಗೆ ದಾರದ ಕುಣಿಕೆ
ಸಿಕ್ಕಿದ್ದೆಷ್ಟು, ಹಣಿದಿದ್ದೆಷ್ಟು, ಜೀವ ಹೆಣೆದಿದ್ದೆಷ್ಟು?

ತೊರೆಯ ನಿರಂತರತೆಯ
ಅಂತರಾಳದಲಿ ಹೊಸೆದ
ಹಸಿನೆನಪು ಹಸಿದು
ಬೀಸಿಬರದೇ ಗಾಳಿ ಬೆವರುತ್ತಿದೆ
ಬತ್ತಿದ ಸಿಹಿನೀರಲಿ
ಬರತವೇರುವ ಹೊತ್ತು

— ರಾಘವೇಂದ್ರ ಹೆಗಡೆ

ಮತ್ತೆ ಮತ್ತೆ ಹನಿ…


-೧-
ಹರಿವಿರಲು ಹೊಳೆಗೆ
ಕೆನೆಯಿರಲು ಮಳೆಗೆ
ಅವಿತಿರುವುದೇ ನೆನಪು
ತುಸು ಸೋರದೆ ಅಡಿ ಇಳೆಗೆ ?

***

-೨-
ಹನಿಯ ಆಯುವ ಸಲುವೇ
ಕಾದಿತ್ತೆ ಕಡಲು
ತಾರೆ ಸೆಳೆಯಲೆಂದೇ
ಗರಿ ಬಿಚ್ಚಿತ್ತೆ ನವಿಲು
ನೀಲ ಕಂಗಳಲಿ ರಹದಾರಿ
ಪ್ರತಿಬಿಂಬವಾಗುವುದರೊಳಗೆ
ಕಂಡದ್ದು ಮೋಡ ಕವಿದ ಮುಗಿಲು?

***

-೩-
ಮತ್ತೆ ಮತ್ತೆ ಬರೆಸುವುದಿಲ್ಲ
ಎಂದೆದ್ದು ಹೊರಟದ್ದು ಕವಿತೆ
ಕಂಡರೂ ಕಾಣದಂತೆ
ಖುದ್ದು ಮರುಗಿ ನೀನೇಕೆ ಅವಿತೆ?

***

-೪-
ಗಾಳಿ ತಂಗಾಳಿಯಾದದ್ದೇ ಸೊಂಪು
ಬೀಸದ ದಾಳದಲಿ ಎಲೆಯುದುರಿದ
ಪದಸಾಲು ಚಿಲಿಪಿಲಿ
ಮಳೆ ಮಣ್ಣ ಹರನೀರಕೆಂಪು
ಒಡಲಾಳದ ನೆನಪ ಘಮಲೇ ಕಂಪು?

***

-೫-
ನೋಟದಲ್ಲೇ ನೀ
ಹರಡಿಟ್ಟ ನೀಲಿತೀರ
ಕಳೆದೇ ಹೋಯಿತಾ
ಕಡೆಗೂ ಸರಿದು ದೂರದೂರ?

***

-೬-
ಹೂವು ಕಟ್ಟಿದ್ದು ಹಕ್ಕಿಯಲ್ಲ
ಗೂಡು ನೇಯ್ದದ್ದು ದುಂಬಿಯಲ್ಲ
ವಾಸ್ತವದ ಹಾವಳಿಯಲಿ ಕವಿತೆ
ಮತ್ತೆ ಮತ್ತೆ ಹನಿಯೊಡೆಯುತ್ತದೆ
ಹಾಸಿಬಿದ್ದ ಬೇಸಿಗೆಗೆ
ಬೆದರಿ ಬತ್ತುವ ಜಲಧಾರೆಗೆ ಮರುಗಿ…

***

— ರಾಘವೇಂದ್ರ ಹೆಗಡೆ

ನಿಮ್ನ ಮತ್ತು ಪೀನ


ಸಮಭಾಜಕಕ್ಕೆ ಅಕ್ಷಾಂಶ ರೇಖಾಂಶ
ಉರಿಬಿಸಿಲ ನಡುವೆ ಮೂರುಹೊತ್ತಿನ ಮಳೆ
ಹಿಮದ ಹೊದಿಕೆಗೆ ಬಣ್ಣದ ಅಂಗಿ
ಮನಸೋ ಶಾಪಗ್ರಸ್ಥ ಹೊಳೆ?

ಫಾಲ್ಗುಣ ಬಹುಳ ಸಪ್ತಮಿಯಂದು
ಸೂರ್ಯ ಮೀನಕ್ಕೆ ಸಂಕ್ರಮಿಸುವನಂತೆ
ಮುಂದಿನ ಬಹುಳ ಸಪ್ತಮಿಯಂದೂ
ಮೀನದಲ್ಲೇ ಇರುವನಂತೆ
ಪಾಪ ಅವನಿಗೇನು ಗೊತ್ತು
ನೀವು ಹೇಳುವ
ಹದಿನೆಂಟು ಘಟಿ ಇಪ್ಪತ್ತು
ಘಟಿಗಳ ಮೇಲಣ ತಿಥಿ

ಜೇನಿಗೆ ದುಂಬಿ; ಹಕ್ಕಿಗೆ ಬಿಂಬಿ
ಮುಗಿಯುವುದೂ ಒಂದು ನಿರಂತರ
ಇದಾ ಕಣ್ಣೆದುರ ರೂಪಾಂತರ?

ಕೂರ್ಮ, ವರಾಹ
ಸಾಲುಸಾಲು ಅವತಾರ
ಮೂಸೆಯಲಿ ಮುಗಿವ ಒಂದೊಂದೇ ದಿನ
ಅಸ್ತಿರ ದೇಹದಿ ಅಸ್ತಿಯ ಮೊಳೆ
ಪ್ರತಿ ಹನಿಗೂ ಒಂದು ಬಂದರ
ಮನಸು ವಿಮೋಚಿತ ಹೊಳೆ?

ವಿಸ್ತಾರ ತರಂಗಕೆ ಕಡಲ ಅನುಸಂಧಾನ
ಕೊನೆಯಿರದುದಕ್ಕೆ ಮುಂದುವರಿವ
ಜ್ಯಾಮಿತಿ ಅಳತೆ
ತಿರುತಿರುಗಿ ಬರುವುದಕೆ…
ತಿರುತಿರುಗಿ ಬರುವುದಕೆ
ಬೇಕಾ ಭಾವಾಂತರದ ಕವಿತೆ?

(ಸಶೇಷ)

— ರಾಘವೇಂದ್ರ ಹೆಗಡೆ

ಒಂದು, ಎರಡು……


ಇಡಿಯ ಪುಟದಿ ಖಾಲಿ ಪದ
ಬಣ್ಣ ನೀನೆ ಅಕ್ಷರ,
ಜಗದಲೆಲ್ಲಿ ಒಂದೆ ಹದ
ಎಲ್ಲ ತಾನೆ ನಶ್ವರ..?!

ಬೆಟ್ಟವು ನಿನ್ನದೆ, ಬಯಲೂ ನಿನ್ನದೆ.., ಹಬ್ಬಿ ನಗಲಿ ಪ್ರೀತಿ

***

ಹೂವ ಹಂಗು ಯಾಕೆ ಬೇಕು
ನೋವು ನುಂಗಿ ಹಾಡಲು?
ಹೊಳೆಯ ಹೊದಿಕೆ ಮಾತ್ರ ಸಾಕು
ನೆರಳಿಗೆ ನಿರಾಳದಿ ಮೈಚಾಚಲು.!

ಕೊಡುವುದೇನು ಕೊಂಬುದೇನು ಒಲವು-ಸ್ನೇಹ-ಪ್ರೇಮ..

***

ತೆರೆದ ತೀರದ ಗುಡಿಯ
ಹೊನ್ನ ಬಾನ್ಮುಡಿ ಕವಿತೆ
ಹೊಸಿಲ ಕಿಟಕಿ ರಂಗವಲ್ಲಿಯ
ಗಂಧಗಂಧದಲಿರಲಿ ನಿನ್ನ ಸ್ಮಿತೆ..

ಉದಯಾಸ್ತಗಳಲಿ ಲೋಕ ತಾನಲ್ಲ ಬರಿಯ ಮಣ್ಣು..

***

— ರಾಘವೆಂದ್ರ ಹೆಗಡೆ

******

* ‘ರಾ ಗ ನೌ ಕೆ’ ಯಾನ ಶುರುವಾಗಿ ಇಂದಿಗೆ ಎರಡು ಸಂವತ್ಸರಗಳು ಕಳೆದಿವೆ. ನನ್ನ ಬರಹಗಳಿಗೆ ಪ್ರೋತ್ಸಾಹ ನೀಡಿದ ಸರ್ವರಿಗೂ ಕೃತಜ್ಞತೆಗಳು. 🙂

* ಇದನ್ನೂ ಓದಿ: ಮೋಡದ ಮೇಲೊಂದು ವರ್ಷದ ನಡಿಗೆ..

* ಮೇಲಿನ ಚಿತ್ರಗಳ ಅಡಿಬರಹಕ್ಕೆ ಬಳಸಿಕೊಂಡಿರುವ ಸಾಲುಗಳು ಮತ್ತು ಚಿತ್ರಸ್ಥಳ :

(೧) ಬೆಟ್ಟವು ನಿನ್ನದೆ, ಬಯಲೂ ನಿನ್ನದೆ.., : ಕೆ. ಎಸ್. ನರಸಿಂಹ ಸ್ವಾಮಿ
ಚಿತ್ರ: ಕುಮಟಾ – ಮೂರೂರು ಮಾರ್ಗದಲ್ಲಿ

(೨) ಕೊಡುವುದೇನು ಕೊಂಬುದೇನು.. : ಗೌರೀಶ್ ಕಾಯ್ಕಿಣಿ
ಚಿತ್ರ: ನನ್ನ ಹುಟ್ಟೂರು ಕತಗಾಲ ಸನಿಹ ಹರಿವ ಅಘನಾಶಿನಿ ನದಿ

(೩) ಉದಯಾಸ್ತಗಳಲಿ.. : ಕೆ. ಎಸ್. ನಿಸಾರ್ ಅಹಮದ್
ಚಿತ್ರ: ಸುರತ್ಕಲ್ ಸನಿಹ ಸೆರೆಯಾದ ಸೂರ್ಯಾಸ್ತ

******

— ರಾಘವೇಂದ್ರ ಹೆಗಡೆ.