Category Archives: ವಿಮರ್ಶೆ

ಕರ್ಮ: ಒಂದು ಅವಲೋಕನ


karma by karnam pavan prasad
ವಿದ್ಯೆ ಕಲಿಯುವುದು ಅತ್ಯವಶ್ಯ. ಜವಾಬ್ದಾರಿಯುತ ಸತ್ಪ್ರಜೆಯಾಗುವುದೂ ಅಷ್ಟೇ ಮುಖ್ಯ. ಆದರೆ ಬದುಕು ಕಟ್ಟಿಕೊಳ್ಳುವ ಸಲುವಾಗಿ ಮಹಾನಗರ ಸೇರಿ ತೀರ ವೈಭೋಗದ ಜೀವನ ನಡೆಸಬೇಕೆಂಬ ಭರದಲ್ಲಿ ತಾವೆತ್ತ ಸಾಗುತ್ತಿದ್ದೇವೆ ಎಂಬುದರ ಪರಿವೆ ಇಂದು ಅದೆಷ್ಟೋ ಯುವಜನರಲ್ಲಿ ಇಲ್ಲವಾಗಿದೆ. ವೀಕೆಂಡ್ ಮಸ್ತಿಯ ಹೆಸರಲ್ಲಿ ಸಹವಾಸದೋಷದಿಂದ ಅದೆಂಥೆಂತದೋ ದುಶ್ಚಟಗಳಿಗೆ ದಾಸರಾಗಿ ಅತ್ತ ಗುರುವೂ ಇಲ್ಲದೇ ಇತ್ತ ಗುರಿಯೂ ಇಲ್ಲದೇ ತ್ರಿಶಂಕು ಸ್ವರ್ಗದಲ್ಲಿ ತೇಲುವ ಅನೇಕ ಜನ ನಮಗೆ ಕಾಣಸಿಗುತ್ತಾರೆ. ಪಾಶ್ಚಾತ್ಯ ರಾಷ್ಟ್ರಗಳಲ್ಲಿದ್ದ ಲಿವಿಂಗ್ ಟುಗೆದರ್ ಪದ್ದತಿ ಇಂದು ಈ ಮಣ್ಣಿನ ಸ್ವಾಸ್ಥ್ಯವ ನ್ನೂ ಕೆಡಿಸುತ್ತಿದೆ. ಇಂತಹ ಅಂಶಗಳನ್ನೊಳಗೊಂಡ ’ಕರ್ಮ’, ಯುವ ಬರಹಗಾರ – ನಾಟಕಕಾರ ಕರಣಂ ಪವನ್ ಪ್ರಸಾದ್ ರ ಚೊಚ್ಚಲ ಕಾದಂಬರಿ.

ತನ್ನ ತಂದೆಯ ಸಾವಿನ ವಿಷಯವನ್ನು ತಿಳಿದ ಸುರೇಂದ್ರ ಬಹುವರ್ಷಗಳ ನಂತರ ಈಗ ತನ್ನ ಹುಟ್ಟೂರಿಗೆ ಬರುತ್ತಾನೆ. ಪುರೋಹಿತರೂ, ವಿದ್ವಾಂಸರೂ ಆಗಿದ್ದ ತಂದೆಯವರ ಅಪರ ಕರ್ಮವನ್ನು ಜ್ಯೇಷ್ಠ ಪುತ್ರನಾದ ಅವನೇ ಮಾಡಬೇಕೆಂದು ನಿರ್ಣಯವಾಗುತ್ತದೆ. ಮುಂದಿನ ಹದಿನೈದು ದಿನ ನಡೆವ ಘಟನೆಗಳೇ ಕಥೆಯ ಹಂದರ. ಬ್ರಾಹ್ಮಣ ಸಮುದಾಯದಲ್ಲಿ ನಡೆವ ಅಪರ ಕ್ರಿಯಾಚರಣೆಯ ವಿಧಾನವನ್ನು ಕಥೆಯ ಸನ್ನಿವೇಶಗಳೊಂದಿಗೆ ಕಟ್ಟಿಕೊಟ್ಟ ಪರಿ ಅದ್ಭುತ. ಕಥೆಗನುಗುಣವಾಗಿ ಅಲ್ಲಲ್ಲಿ ಸಂಸ್ಕೃತ ಶ್ಲೋಕಗಳನ್ನು ಮತ್ತು ತಾತ್ಪರ್ಯಗಳನ್ನು ಬಳಸಲಾಗಿದೆ. ಆ ಹದಿನೈದು ದಿನಗಳಲ್ಲಿ ಕಥಾನಾಯಕ ಸುರೇಂದ್ರನ ಮನದಲ್ಲಿ ಉಂಟಾಗುವ ಗೊಂದಲ, ದುಃಖ, ಹೊಯ್ದಾಟ, ಆಸಹಾಯಕತೆ, ಭಯ, ಅಪರಾಧಿ ಭಾವ, ಜಿಜ್ಞಾಸೆ ಮುಂತಾದವೆಲ್ಲ ಕಥೆಯ ವಿವಿಧ ಕೋನಗಳಲ್ಲಿ ಹಾದು ಹೋಗುತ್ತವೆ. ಸಂದರ್ಭೋಚಿತವಾಗಿ ಉಲ್ಲೇಖಿಸಿದ ಗರುಡಪುರಾಣದ ಅರ್ಥ ವಿವರಣೆ ಓದಲು ಮತ್ತಷ್ಟು ಖುಷಿ ಕೊಡುತ್ತದೆ.

ನಾಳೆ ತನ್ನ ಕ್ರಿಯಾಚರಣೆ ಮಾಡುವವರು ಯಾರೂ ಇಲ್ಲ ಎಂಬ ಭಾವನೆ ಸುರೇಂದ್ರನಲ್ಲಿ ಅನಾಥ ಪ್ರಜ್ಞೆಯನ್ನು ಮೂಡಿಸುತ್ತದೆ ಅಲ್ಲದೇ ತನ್ನ ಮತ್ತು ಪತ್ನಿಯ ಸಂಬಂಧದಲ್ಲಿಲ್ಲದ ನೈತಿಕ ಗಟ್ಟಿತನದ ಬಗ್ಗೆ ಅವಲೋಕಿಸಿ ಭಯ ಮತ್ತು ಹೇಸಿಗೆಯಾಗುತ್ತದೆ. ಅಪರ ಕರ್ಮಗಳೆಲ್ಲ ಮುಗಿದ ಮೇಲೆ ಸುರೇಂದ್ರನಿಗೆ ತಾನು ಕ್ರಿಯಾಚರಣೆ ಮಾಡಿದ್ದು ತನಗೆ ಜನ್ಮವಿತ್ತ ತಂದೆಯದ್ದಲ್ಲ ಎಂಬ ಕಠೋರ ಸತ್ಯದ ಅರಿವಾಗುತ್ತದೆ. ಅಷ್ಟರಲ್ಲಿ ಅವನ ತಮ್ಮ ನರಹರಿ ಅಮ್ಮ ತೀರಿಹೋಗಿಬಿಟ್ಟ ವಿಷಯವನ್ನು ತಿಳಿಸುತ್ತಾನೆ. ಮಹಾನಗರ ಬಿಟ್ಟು ಅಜ್ಞಾತವಾಸಕ್ಕೆ ಬಂದಂತಾಗಿದ್ದವನಿಗೆ ಈಗ ಎಲ್ಲ ಮುಗಿದು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಅಕಸ್ಮಾತಾಗಿ ಮತ್ತೊಂದು ಕರ್ಮ ಬಂಧನ ಕಟ್ಟಿಹಾಕುತ್ತದೆಯೇ ಎಂಬುದನ್ನು ಓದುಗರ ವಿವೇಚನೆಗೆ ಬಿಡಲಾಗಿದೆ.

ಕಥೆಯ ಸಲುವಾಗಿನ ಲೇಖಕರ ಅಧ್ಯಯನವನ್ನು ಮೆಚ್ಚಲೇಬೇಕು. ಅವರು ಹಲವುಕಡೆ ಪಾತ್ರದ ಒಳಹೊಕ್ಕು ಬರುವಲ್ಲಿ ಯಶಸ್ವಿಯಾಗುತ್ತಾರೆ. ಕುತೂಹಲವನ್ನು ಉಳಿಸಿಕೊಂಡು, ಕೊನೆಯವರೆಗೂ ಸರಾಗವಾಗಿ ಓದಿಸಿಕೊಂಡು ಹೋಗುವಲ್ಲಿ ಕಥೆ ಯಶಸ್ವಿಯಾಗುತ್ತದೆ. ಪ್ರಸಿದ್ದ ಬರಹಗಾರ ಓದುಗರ ಮೇಲೆ ತನ್ನ ಬರವಣಿಗೆಯ ಮೂಲಕ ಪ್ರಭಾವ ಬೀರುವುದು ಸಹಜ. ಹೊಸಬರಲ್ಲಿ ಸೃಜನಶೀಲ ಬರವಣಿಗೆಯ ಸ್ಪುರಣೆಗೆ ಅವು ಅವಶ್ಯ ಕೂಡ. ಅದರಂತೆ ಇಲ್ಲಿ ಭೈರಪ್ಪನವರ ಪ್ರಭಾವ ಲೇಖಕರ ಮೇಲೆ ಆದಂತೆ ಒಮ್ಮೊಮ್ಮೆ ಅನಿಸುತ್ತದೆ. ಯುವ ಬರಹಗಾರರೆಂದರೆ ಮೂಗು ಮುರಿಯುವ ಇಂತಹ ದಿನಗಳಲ್ಲಿ ’ಕರ್ಮ’ ಕನ್ನಡ ಸಾರಸ್ವತ ಲೋಕದಲ್ಲಿ ಹೊಸಬರ ಬಗ್ಗೆ ಭರವಸೆ ಮೂಡಿಸುತ್ತದೆ.

ಪುಸ್ತಕ: ಕರ್ಮ (ಕಾದಂಬರಿ)
ಲೇಖಕರು: ಕರಣಂ ಪವನ್ ಪ್ರಸಾದ್
ಪ್ರಕಾಶನ: Concave Media
ಬೆಲೆ: 125 (ಮೊದಲ ಮುದ್ರಣಕ್ಕೆ ಅನ್ವಯಿಸುವಂತೆ)


— ರಾಘವೇಂದ್ರ ಹೆಗಡೆ

‘ಅನಾವರಣ’ವಾದ ಕವಿತೆ


ಹಳ್ಳಿಯಲ್ಲಿ ಜಮೀನು ನೋಡಿಕೊಂಡಿರುವ ವೃದ್ದ ದಂಪತಿ, ಉದ್ಯೋಗ ನಿಮಿತ್ತ ನಗರಸೇರಿ ಬೇರೂರಿದ ಅವರ ನಾಲ್ವರು ಮಕ್ಕಳು ಮತ್ತವರ ಕುಟುಂಬ,ಅದರಲ್ಲೊಂದಷ್ಟು ಜನ ಮಾನವೀಯ ಸಂಬಂಧಗಳ ಮೌಲ್ಯ ಅರಿತವರಾದರೆ ಮತ್ತಷ್ಟು ಜನ ಭಾವನೆಗಳನ್ನೆಲ್ಲ ಮಾರಿ ಹಣಗೋಚುವ ಚಾಳಿಯವರು.., ಇಂತಹ ಪಾತ್ರಗಳು ಇಲ್ಲಿನ ಕಥಾಸೂತ್ರಗಳು. ಅಂದಹಾಗೆ ಈಗ ಹೇಳಹೊರಟಿರುವುದು ಈ ಟಿವಿ ಕನ್ನಡದಲ್ಲಿ ಪ್ರಸಾರಗೊಂಡ ‘ಅನಾವರಣ’ದ ಕುರಿತು.

ಅಪ್ಪ ಮಕ್ಕಳ ಸಂಬಂಧ, ಪ್ರಚಲಿತ ಸ್ಥಿತಿಗತಿ, ವ್ಯವಸಾಯಕ್ಕೆ ಕೂಲಿಗಳ ಅಭಾವ, ಲಂಚಗುಳಿತನ, ಹಣ ಎಂಬ ಹುಚ್ಚು, ವ್ಯವಹಾರವೇ ಮುಖ್ಯವಾಗಿ ಹೆತ್ತವರನ್ನು ಮತ್ತು ತಾವು ಹೆತ್ತ ಮಕ್ಕಳನ್ನು ಉಪೇಕ್ಷಿಸುವ ಜನ, ಬೇಜವಾಬ್ದಾರಿ ಪರಮಸ್ವಾರ್ಥಿ ಅಪ್ಪ ಮತ್ತು ಗಂಡನ ಮಧ್ಯೆ ಹೈರಾಣಾಗುವ ಹುಡುಗಿ, ಮಣ್ಣಿನ ಮೋಹಕ್ಕೆ ಮನಸೋತು ವಿದೇಶದಿಂದ ಹಳ್ಳಿಗೆ ಬರುವ ದಂಪತಿ.. ಇಂತಹ ಪಾತ್ರಗಳ ಮೂಲಕ ಇಲ್ಲಿ ಪ್ರಪಂಚ ತೆರೆದುಕೊಳ್ಳುತ್ತದೆ.

ಹಾಗೆ ನೋಡಿದರೆ ಇಲ್ಲಿ ಕಥಾವಸ್ತುವೇ ಕಥೆ ಮತ್ತು ಕಥಾನಾಯಕ.

ಅಪ್ಪ ಅಮ್ಮನ ಮಾತನ್ನು ಅಲಕ್ಷಿಸಿ, ಮದುವೆಯಾಗುತ್ತೇನೆಂದು ನಂಬಿಸಿದವನ ಹಿಂದೆ ಹೊರಟು ಮಗುವನ್ನೂ ಪಡೆದು ಕಡೆಗೆ ಆತನಿಂದಲೇ ಉಪೇಕ್ಷೆಗೊಳಗಾಗಿ ಇತ್ತ ತವರಿನಿಂದಲೂ ಧಿಕ್ಕರಿಸಲ್ಪಡುವ ಮಹಿಳೆ(ಶೃತಿ) ಹಾಗೂ ತನ್ನತನ, ಸ್ವಾಭಿಮಾನ ಇಂತಹ ಪದಗಳ ಪರಿಚಯವೇ ಇರದ ತೀರ ಬೇಜವಾಬ್ದಾರಿ, ವ್ಯಸನಿ ಮತ್ತು ಅಹಂಕಾರಿ ಪುರುಷನೊಬ್ಬನ ಪತ್ನಿ (ಮಾನಸ) ಪಾತ್ರಗಳು ಕಥಾಹಂದರದಲ್ಲಿ ಪುರುಷ ಪ್ರಧಾನ ವ್ಯವಸ್ತೆಯ ಸಮಾಜ ಉಂಟುಮಾಡಬಹುದಾದ ರೇಜಿಗೆ ಬಗೆಗೆ ಹೆಣ್ಣಿನ ವೇದನೆ ಸಂವೇದನೆಗಳ ಮೌನ ಮಾತಾಗುತ್ತವೆ.

ಎಷ್ಟೋವರ್ಷಗಳ ನಂತರ ವಿದೇಶದಿಂದ ಹುಟ್ಟೂರಿಗೆ ಬರುವ ದಂಪತಿ, ಸಂಬಂಧದ ನೆಪಹೇಳಿ ಬಂದವರಿಗೆಲ್ಲ ಕೊಡುಗೈ ದಾನಿಗಳಾಗಿ ಕಡೆಗೆ ಮೋಸಹೋಗಿ ಎಲ್ಲ ಕಳೆದುಕೊಂಡು ಮತ್ತೆ ಹಿಂದೆ ತಾವಿದ್ದಲ್ಲಿಗೇ ವಾಪಸಾಗುತ್ತಾರೆ. ಒದ್ದೆ ಭೂಮಿಯನ್ನು ಅಗೆವವರು ಜಾಸ್ತಿ. ಅಲ್ಲಿಗೆ ಹಣವಿದ್ದಾಗ ಎಲ್ಲ ಬಂಧುಗಳು ಇಲ್ಲದಿದ್ದಾಗ ಯಾರೂ ಇಲ್ಲ ಎಂಬ ಕಟುವಾಸ್ತವ ಪ್ರಪಂಚದ ಅನಾವರಣಪ್ರಯತ್ನವೂ ನಡೆಯುತ್ತದೆ.

ತಂದೆಯ ಬ್ರಷ್ಟಾಚಾರ, ಲಂಚಗುಳಿತನವನ್ನು ಧಿಕ್ಕರಿಸಿ ಮಗಳು ಮನೆಬಿಟ್ಟು ಹಳ್ಳಿಯ ತಾತನ ಮನೆ ಸೇರುತ್ತಾಳೆ. ಇತ್ತ ಇನ್ನೊಬ್ಬಳು ಸದಾ ವ್ಯವಹಾರಲೋಕದಲ್ಲೇ ಮುಳುಗಿರುವ ತನ್ನ ತಾಯಿಯನ್ನು ಧಿಕ್ಕರಿಸಿ ತಾತನ ಮನೆಗೆ ನಡೆಯುತ್ತಾಳೆ.

ಹಣಬಾಕ ಮಗನ ನಡವಳಿಕೆ ಬಗ್ಗೆ ತೀವ್ರ ಮನನೊಂದ ವೃದ್ದ ತಾಯಿ ಮಗಳ ಬಳಿ ಉಸುರುತ್ತಾಳೆ – “ಹೊಟ್ಟೆಯಲ್ಲಿದ್ದಾಗ್ಲೇ ತೀವ್ರ ಸಂಕಟ ಕೊಡ್ತಿದ್ದ, ಈಗ್ಲೂ ಬಿಟ್ಟಿಲ್ಲ ನೋಡು..”
ಮತ್ತೊಮ್ಮೆ ತಾತ್ಸಾರಗೊಂಡು ತನ್ನ ಗಂಡನ ಕುರಿತು ಹೇಳುತ್ತಾಳೆ –“ ಹಣ್ಣು ಬೆಳೀತಾ ಇತ್ತು, ಹಣದ ಮೋಹ ಹೊಗೆಸೊಪ್ಪು ನೆಟ್ಟ ಈ ವ್ಯಕ್ತಿ”.

ಅಲ್ಲಲ್ಲಿ ಸಂಭಾಷಣೆ ತೀವ್ರ ತೀಕ್ಷ್ಣ. ಅನಗತ್ಯ ಮಾತಿಲ್ಲ. ಹೆಚ್ಚಿನ ಭಾವಗಳಿಗೆ ಮೌನವೇ ಧ್ವನಿ. ಹಾಗಾಗಿ ಮೌನ ಇಲ್ಲಿ ಸಂಭಾಷಣೆಯ ಒಂದು ಭಾಗವೆ. ಹಿಂದೆ ‘ಮಂಥನ’ದ ಮೂಲಕ ಸಂಭಾಷಣೆಗಳು ಹೀಗೂ ಇರಬಹುದು ಎಂದು ತೋರಿಸಿದ್ದ ಎಂ. ಎನ್. ಸೇತುರಾಮ್ ಅದೇ ಪರಂಪರೆಯನ್ನು ಇಲ್ಲೂ ಮುಂದುವರಿಸಿದ್ದಾರೆ. ಆಡುಮಾತಿಗಿಂತ ಕೊಂಚ ಭಿನ್ನ ನಿರೂಪಣಾಶೈಲಿಯಿಂದ ಧಾರಾವಾಹಿ ಸಾಹಿತ್ಯಿಕವಾಗಿ ಗುಣಾತ್ಮಕವಾಗುತ್ತದೆ.

ಹಳ್ಳಿಯ ಜೀವನ ಸಾಕೆಂದು ವೃದ್ದ ಪತಿಯನ್ನು ಬಿಟ್ಟು ನಗರದಲ್ಲಿರುವ ಹಿರಿಯ ಮಗನ ಮನೆ ಸೇರಿಕೊಳ್ಳುವ ಮಹಿಳೆ ಮತ್ತು ತಾ ಬೆಳೆಸಿದ ತೋಟ ಬಿಡುವ ಮನಸ್ಸಾಗದೆ ಹಳ್ಳಿಯಲ್ಲೇ ಉಳಿವ ಆಕೆಯ ಪತಿ ಅಲ್ಲಲ್ಲಿ ಕಥೆಯ ನೊಗ ಹಿಡಿದವರಂತೆ ಕಾಣುತ್ತಾರೆ.

ತನ್ನ ಮಗನ ಬೇಜವಾಬ್ದಾರಿತನ ಮತ್ತು ಉಢಾಪೆಯಿಂದ ಸೊಸೆ ಮಾನಸಳ ಜೀವನ ಹಾಳಾದುದಕ್ಕೆ ಮರುಗಿ, ನೈತಿಕ ಹೊಣೆ ಹೊತ್ತು “ಮಗಳೇ ನಿನಗೆ ಯಾವಾಗ ಕಷ್ಟವಾದರೂ ಕರೆ, ನಾ ನಿನ್ನ ಜೊತೆಗಿದ್ದೇನೆ” ಎಂದು ಆಕೆಗೆ ಹಿಂದೆ ನೀಡಿದ್ದ ಆಶ್ವಾಸನೆಯಂತೆ ಕಡೆಗೆ ವೃದ್ದ ಮಾವ ನಗರದಲ್ಲಿರುವ ಸೊಸೆಯ ಮನೆಗೆ ಬರುತ್ತಾನೆ. ಮಾವನ ಬಗೆಗೆ ಮರುಕಪಟ್ಟು ಮಾನಸ ಹೇಳುತ್ತಾಳೆ – “ನನ್ನಿಂದ ನೀವು ಹಳ್ಳಿ ಬಿಡುವಂತಾಯಿತು”.
“ಮಗಳೇ ಅದು ನಿರರ್ಥಕ, ಇದು ಸಾರ್ಥಕ”.
“ನಗರದ ಬದುಕಿಗೆ ನಿಮಗೆ ಹೊಂದಿಕೆ ಕಷ್ಟವಾಗಬಹುದು”
“ಮನುಷ್ಯ ಯಾವಾಗ ಹೊಂದಿಕೊಂಡು ಬದುಕಿದ್ದ ಹೇಳು, ಧಿಕ್ಕರಿಸಿಯೇ ಬದುಕಿದ್ದು. ಹೊಂದಾಣಿಕೆ ಬರೀ ನಟನೆ” ಎಂಬ ಆತನ ತೂಕದ ಮಾತು ನೈಜ ಪ್ರಪಂಚವನ್ನು ಅನಾವರಣಗೊಳ್ಳುತ್ತದೆ.

ಅತ್ತ ವೃದ್ದ ತಾಯಿ ಗಂಡುಮಕ್ಕಳ ವರ್ತನೆಯಂದ ಜಿಗುಪ್ಸೆಗೊಂಡು “ಸಹಿಸುವುದು ಮಾತ್ರವಲ್ಲ ತಿದ್ದುವುದೂ ತಾಯಿ” ಎಂದು ತಾನೆ ಹಿಂದೆ ಧಿಕ್ಕರಿಸಿದ್ದ ಮಗಳ(ಶೃತಿ) ಮನೆ ಸೇರುತ್ತಾಳೆ.
ತನಗೆ ಮತ್ತೊಂದು ಕೆಲಸ ಸಿಕ್ಕಿತು ಎಂದು ಸಂತಸದಿಂದ ಮಾವನ ಬಳಿ ಹೇಳುವ ಮಾನಸ, ಜೀವನದಲ್ಲಿ ಸಾಕಷ್ಟು ವೇದನೆಗಳನ್ನು ಅನುಭವಿಸಿದ್ದಕ್ಕೆ ಪ್ರತಿಕ್ರಿಯೆಯೆಂಬಂತೆ ಪ್ರಪಂಚವನ್ನು ಕುರಿತು – “ನೀವೆಲ್ಲ ಎಷ್ಟೇ ಅಡೆ ತಡೆ ಒಡ್ಡಿದರೂ ನಾನು ಬದುಕಿ ತೋರಿಸ್ತೇನೆ” ಎಂದು ಉಸುರುತ್ತ ವಿಶ್ವಾಸದ ಅಲೆಯಾಗುತ್ತಾಳೆ. ಅವಳ ಉದ್ಗಾರ ಕತ್ತಲಲ್ಲಿ ಪ್ರತಿಧ್ವನಿಯಾಗುತ್ತದೆ.
ಅದಕ್ಕೆ ಮಾವ “ನೀನ್ ಹೇಳಿದ್ದು ಯಾರಿಗೂ ಕೇಳ್ಸೆ ಇಲ್ಲ” ಎಂದು ವ್ಯಂಗ್ಯ ನಗೆ ಬೀರುತ್ತಾನೆ.

ಹಿಂದೆಲ್ಲ ಮತ್ತೊಂದು ಮದುವೆಯಾಗು ಹೀಗೆ ಒಂಟಿ ಕೊರಗಬೇಡ ಎಂಬ ಮಾವನ ಸಲಹೆಯನ್ನು ಕಡೆಗಣಿಸಿದ್ದ ಆಕೆ ಈಗ – “ಮಾವ ನನಗೂ ಬದುಕು ಅಂತ ಒಂದು ಇದೆ ಅಲ್ವಾ ?” ಎಂದು ಪ್ರಶ್ನಾರ್ಥಕವಾಗುತ್ತಾಳೆ. ಆತ ನಿರುತ್ತರನಾಗಿ ಕಣ್ಣೆದುರಿಗಿನ ಅನಂತವನ್ನು ನೋಡುತ್ತ ಹೊರಟು ಹೋಗುತ್ತಾನೆ. ಹೀಗೆ ಕಥೆಯ ಕೊನೆಯ ಸಂಭಾಷಣೆಯನ್ನು ಮತ್ತೆ ಮೌನವೇ ಧ್ವನಿಸುತ್ತದೆ.

ಪ್ರಪಂಚದಲ್ಲಿ ಯಾವುದೂ ನಿಖರವಲ್ಲ, ಎಲ್ಲ ಸಾಧ್ಯತೆ ಸಂಭವನೀಯತೆಗಳೆ. ಇದಕ್ಕೆ ಇದೇ ಕೊನೆ ಎಂದು ಎಲ್ಲಿಯೂ ನಾವುನಾವೆ ಚೌಕಟ್ಟು ಹಾಕಿಕೊಳ್ಳುವುದು ಅಸಮಂಜಸ. ಬದುಕು ಒಂದು ಹರವು. ಅದರ ಮೂಲ ಮತ್ತು ಕೊನೆಯನ್ನು ಶೋಧಿಸುವುದು ಕಷ್ಟ ಅಥವ ಗ್ರಹಿಸುವುದು ಅಸಂಗತ.

‘ಕಬ್ಬಿನ ಸಿಹಿರಸ ಕಮರಿ ಕಾಕಂಬಿ ಜೊಳ್ಳುತೆನೆ ನಿರ್ಬೀಜ ಹಣ್ಣು’ ಎಂಬ ಶೀರ್ಶಿಕೆ ಗೀತೆಯ ಸಾಲು ಕೂಡ(ಸಾಹಿತ್ಯ: ಬಿ. ಅರ್. ಲಕ್ಷ್ಮಣರಾವ್) ಕಥೆಯ ಅನಾವರಣದ ಒಂದು ಭಾಗವೆ. ಸಂಭಾಷಣೆಯಲ್ಲಿ ಒಗಟಿದೆ. ಹಲವುಬಾರಿ ಒಂದೇ ಪದ ಅಥವಾ ನುಡಿಗಟ್ಟಿನ ಬಳಕೆಯಾದದ್ದೂ ಇದೆ. ಆದರೂ ಮಾತು, ಸನ್ನಿವೇಶಗಳನ್ನು ಮೈಲುಗಟ್ಟಲೆ ಬೆಳೆಸದೆ ಸಾಧ್ಯವಾದಷ್ಟೂ ಚೊಕ್ಕವಾಗಿ ಪ್ರಸ್ತುತಪಡಿಸುತ್ತ ವ್ಯರ್ಥ ಕಾಲಕ್ಷೇಪ ಮಾಡದೆ ಸಾಗಿ ೧೩೯ನೇ ಕಂತಿನಲ್ಲಿ ವಿರಮಿಸುವ ಈ ದೃಶ್ಯಕಾವ್ಯ ಹತ್ತರ ಜೊತೆಗಿನ ಹನ್ನೊಂದಾಗದೆ ಕೊಂಚ ಭಿನ್ನವಾಗಿ ನಿಲ್ಲುತ್ತದೆ.

******

— ರಾಘವೇಂದ್ರ ಹೆಗಡೆ.